
ಹಾಂಗ್‌ಕಾಂಗ್: ಉದ್ಯೋಗ ವಲಯದಲ್ಲಿ ಅಮೆರಿಕಕ್ಕೆ ಸಡ್ಡು ಹೊಡೆಯುವ ಉದ್ದೇಶದಿಂದ ಚೀನಾವು ಜಾರಿಗೆ ತಂದಿರುವ ‘ಕೆ–ವೀಸಾ’ ವಿದೇಶಗಳಲ್ಲಿನ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ಪ್ರತಿಭೆಗಳನ್ನು ಸೆಳೆಯಲು ಪ್ರಯತ್ನಿಸುತ್ತಿದೆ.
ಹೊಸ ವೀಸಾ ವ್ಯವಸ್ಥೆಯನ್ನು ಚೀನಾ ಕಳೆದ ತಿಂಗಳು ಜಾರಿಗೊಳಿಸಿದ್ದು, ಈ ಮೂಲಕ ವಿದೇಶಿ ಪ್ರತಿಭೆ ಮತ್ತು ತಂತ್ರಜ್ಞಾನಗಳ ನಾಗಲೋಟದಲ್ಲಿ ಅಮೆರಿಕವನ್ನು ಹಿಂದಿಕ್ಕುವ ಯೋಜನೆಯನ್ನು ರೂಪಿಸಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವಲಸೆ ನೀತಿಗಳನ್ನು ಬಿಗಿಗೊಳಿಸಿರುವುದರಿಂದ ‘ಎಚ್–1ಬಿ’ ವೀಸಾಕ್ಕೆ ಸಂಬಂಧಿಸಿ ಅಸ್ಥಿರತೆ ಉಂಟಾಗಿರುವ ಸಂದರ್ಭದಲ್ಲಿ ಚೀನಾವು ಹೊಸ ವೀಸಾದ ದಾಳ ಉರುಳಿಸಿರುವುದು ಮಹತ್ವ ಪಡೆದುಕೊಂಡಿದೆ.
‘ಕೆ–ವೀಸಾವು ಅಮೆರಿಕದ ಎಚ್–1ಬಿ ವೀಸಾಗೆ ಸಮಾನವಾಗಿದೆ’ ಎಂದು ಭಾರತ ಮತ್ತು ಅಮೆರಿಕದಲ್ಲಿ ಕೆಲಸ ಮಾಡಿರುವ ತಜ್ಞ ಐಟಿ ಉದ್ಯೋಗಿ ವೈಷ್ಣವಿ ಶ್ರೀನಿವಾಸಗೋಪಾಲನ್ ಅವರು ಅಭಿಪ್ರಾಯಪಟ್ಟಿದ್ದಾರೆ. ಅವರು ಚೀನಾದಲ್ಲಿ ಕೆಲಸ ಮಾಡಲು ಉತ್ಸುಕರಾಗಿದ್ದಾರೆ.
ವಿದೇಶಿಗರಿಗೆ ನೀಡಲಾಗುತ್ತಿರುವ ಆರ್–ವೀಸಾ ಸೇರಿದಂತೆ ಚೀನಾದಲ್ಲಿ ಪ್ರಸ್ತುತ ಇರುವ ವೀಸಾ ವ್ಯವಸ್ಥೆಗಳಿಗೆ ಜೊತೆಗೆ ಕೆ–ವೀಸಾ ಜಾರಿಗೆ ತರಲಾಗಿದೆ. ಆದರೆ ಅರ್ಜಿ ಸಲ್ಲಿಸುವ ಮೊದಲೇ ಉದ್ಯೋಗ ಪಡೆದಿರಬೇಕು ಎಂಬ ನಿಯಮ ಸೇರಿದಂತೆ ಹಲವು ನಿಯಮಗಳಿಗೆ ಹೊಸ ವೀಸಾ ವ್ಯವಸ್ಥೆಯಲ್ಲಿ ವಿನಾಯಿತಿ ನೀಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.