ADVERTISEMENT

ಅರುಣಾಚಲ ಗಡಿಯಲ್ಲಿ ಗಡಿಬಿಡಿ: ಗಡಿ ಆಚೆಗೆ ಭಾರಿ ಪ್ರಮಾಣದಲ್ಲಿ ಚೀನಾ ಸೇನೆ

ಪಿಟಿಐ
Published 19 ಅಕ್ಟೋಬರ್ 2021, 19:53 IST
Last Updated 19 ಅಕ್ಟೋಬರ್ 2021, 19:53 IST
ಮನೋಜ್ ಪಾಂಡೆ
ಮನೋಜ್ ಪಾಂಡೆ   

ರೂಪಾ (ಅರುಣಾಚಲ ಪ್ರದೇಶ,): ಅರುಣಾಚಲ ಪ್ರದೇಶ ವಲಯದ ಎದುರು ಭಾಗದಲ್ಲಿ ತನ್ನ ಭೂಪ್ರದೇಶದ ಒಳಗೆ ಚೀನಾ ದೇಶವು ಸೇನಾ ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ ಮತ್ತು ಭಾರಿ ಸಂಖ್ಯೆಯಲ್ಲಿ ಸೈನಿಕರನ್ನು ಜಮಾಯಿಸಿದೆ ಎಂದು ಪೂರ್ವ ವಿಭಾಗದ ಸೇನಾ ಕಮಾಂಡರ್‌ ಲೆ. ಜ. ಮನೋಜ್‌ ಪಾಂಡೆ ಮಂಗಳವಾರ ಹೇಳಿದ್ದಾರೆ.

ಅದಕ್ಕೆ ತಕ್ಕುದಾದ ರೀತಿಯಲ್ಲಿ, ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸಾಧ್ಯವಾಗುವಂತಹ ಸನ್ನದ್ಧತೆಯನ್ನು ಭಾರತೀಯ ಸೇನೆಯು ಕೈಗೊಂಡಿದೆ. ಭಾರತದ ಸನ್ನದ್ಧತೆಯು ಅತ್ಯುತ್ತಮ ಮಟ್ಟದ್ದಾಗಿದೆ ಎಂದೂ ಅವರು ಮಾಹಿತಿ ನೀಡಿದ್ಧಾರೆ.

ನೈಜ ನಿಯಂತ್ರಣ ರೇಖೆಯ (ಎಲ್‌ಎಸಿ) ಸಮೀಪದಲ್ಲಿ ಮೂಲಸೌಕರ್ಯವನ್ನು ಹೆಚ್ಚಿಸಲು ಎರಡೂ ದೇಶಗಳು ಪ್ರಯತ್ನಿಸುತ್ತಿವೆ. ಇದು ಒಮ್ಮೊಮ್ಮೆ ಸಂಘರ್ಷಕ್ಕೆ ಕಾರಣವಾಗುತ್ತಿದೆ. ಎಲ್‌ಎಸಿ ಸಮೀಪದಲ್ಲಿ ಮೂಲಸೌಕರ್ಯ ನಿರ್ಮಾಣ ಕಾಮಗಾರಿ ಹೆಚ್ಚಿರುವುದರಿಂದ ಸೈನಿಕರ ನಿಯೋಜನೆಯಲ್ಲಿಯೂ ಹೆಚ್ಚಳ ಆಗಿದೆ ಎಂದು ಈ ಪ್ರದೇಶಕ್ಕೆ ಭೇಟಿ ಕೊಟ್ಟ ಮಾಧ್ಯಮ ಪ್ರತಿನಿಧಿಗಳಿಗೆ ಪಾಂಡೆ ತಿಳಿಸಿದರು.‌

ADVERTISEMENT

1,300 ಕಿ.ಮೀ. ಎಲ್‌ಎಸಿಯಲ್ಲಿ ಭಾರತದ ಸೇನೆಯ ಕಾರ್ಯಾಚರಣೆ ಸನ್ನದ್ಧತೆಯ ಮೇಲುಸ್ತುವಾರಿಯು ಪಾಂಡೆ ಅವರದ್ದಾಗಿದೆ. ಸೇನೆಯ ಪೂರ್ವ ವಿಭಾಗದ ಭಾಗವಾಗಿರುವ ಮೌಂಟನ್‌ ಸ್ಟ್ರೈಕ್‌ ಕೋರ್‌ ಪೂರ್ಣವಾಗಿ ಕಾರ್ಯಾಚರಣೆಗೆ ಸಜ್ಜಾಗಿದೆ. ಅದರ ಸನ್ನದ್ಧತೆಯನ್ನು ದೃಢಪಡಿಸಿಕೊಳ್ಳಲಾಗಿದೆ. ಇತರ ವಿಭಾಗಗಳ ಜತೆಗೆ ಅದರ ಸಮನ್ವಯವನ್ನೂ ಪರಿಶೀಲಿಸಲಾಗಿದೆ ಎಂದು ಅವರು ತಿಳಿಸಿದ್ಧಾರೆ.

ಸಮಗ್ರ ಸಮರ ಗುಂಪು: ಸಮಗ್ರ ಸಮರ ಗುಂಪು (ಐಬಿಜಿ) ಎಂಬ ಹೊಸ ಯುದ್ಧ ಸನ್ನದ್ಧ ತಂಡ ರಚನೆಗೆ ತಾತ್ವಿಕ ಒಪ್ಪಿಗೆ ಸಿಕ್ಕಿದೆ. ಅತ್ಯಂತ ತ್ವರಿತವಾಗಿ, ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯಾಚರಣೆಗೆ ಸಜ್ಜಾಗುವ ರೀತಿಯಲ್ಲಿ ಈ ಗುಂಪನ್ನು ಯೋಜಿಸಲಾಗಿದೆ ಎಂದು ಪಾಂಡೆ ತಿಳಿಸಿದರು.

ಐಬಿಜಿಯಲ್ಲಿ ಭೂಸೇನೆ, ಫಿರಂಗಿ ದಳ, ವಾಯುಪಡೆ, ಟ್ಯಾಂಕುಗಳೆಲ್ಲವೂ ಸೇರಿರುತ್ತವೆ. ಇದು ಚೀನಾ ಮತ್ತು ಪಾಕಿಸ್ತಾನ ಗಡಿಯಲ್ಲಿ ಭಾರತದ ಸೇನೆಯ ಯುದ್ಧ ಸನ್ನದ್ಧತೆಗೆ ವೇಗ ತುಂಬಲಿದೆ ಎಂದು ಅವರು ಹೇಳಿದ್ದಾರೆ.

ಜಾಗೃತ ಚೀನಾ: ಚೀನಾದ ರಕ್ಷಣಾ ಪಡೆಯ ಎಲ್ಲ ವಿಭಾಗಗಳೂ ಜಂಟಿ ಕಾರ್ಯಾಚರಣೆ ನಡೆಸುತ್ತಿವೆ. ಚೀನಾ ಸೇನೆಯು ಸಮಗ್ರವಾದ ಧೋರಣೆಯನ್ನು ಅನುಸರಿಸುತ್ತಿದೆ. ಸಮರಾಭ್ಯಾಸದ ತೀವ್ರತೆ ಮತ್ತು ಅವಧಿಯಲ್ಲಿಯೂ ಹೆಚ್ಚಳವಾಗಿದೆ ಎಂದು ಪಾಂಡೆ ತಿಳಿಸಿದ್ದಾರೆ.

ಎಲ್‌ಎಸಿಯ ಚೀನಾ ಭಾಗದ ನಿರ್ದಿಷ್ಟ ಪ್ರದೇಶಗಳಲ್ಲಿ ಹೊಸ ಗ್ರಾಮಗಳು ತಲೆ ಎತ್ತಿವೆ. ಇದು ಕೂಡ ಸೇನಾ ಕಾರ್ಯತಂತ್ರವೇ ಆಗಿದೆ ಎಂಬುದನ್ನು ಭಾರತ ಗಮನಿಸಿದೆ. ಸೇನಾ ಕಾರ್ಯಾಚರಣೆಯ ಸಂದರ್ಭದಲ್ಲಿ ಸೈನಿಕರು ಈ ಜನವಸತಿ ಪ್ರದೇಶಗಳನ್ನು ಬಳಸಿಕೊಳ್ಳಲು ಸಾಧ್ಯವಾಗಲಿದೆ ಎಂದು ಅವರು ಮಾಹಿತಿ
ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.