ADVERTISEMENT

ಸಂತ್ರಸ್ತ ಯುವತಿಗೆ ‘ಸುಪ್ರೀಂ’ ಅಭಯ

ಬಿಜೆಪಿ ಮುಖಂಡನ ವಿರುದ್ಧ ದೌರ್ಜನ್ಯ ಆರೋಪ ಮಾಡಿದ್ದ ವಿದ್ಯಾರ್ಥಿನಿ ಪತ್ತೆ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2019, 19:45 IST
Last Updated 30 ಆಗಸ್ಟ್ 2019, 19:45 IST
ಚಿನ್ಮಯಾನಂದ
ಚಿನ್ಮಯಾನಂದ   

ನವದೆಹಲಿ: ಕೇಂದ್ರದ ಮಾಜಿ ಸಚಿವ ಮತ್ತು ಬಿಜೆಪಿಯ ಪ್ರಭಾವಿ ಮುಖಂಡ ಸ್ವಾಮಿ ಚಿನ್ಮಯಾನಂದ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿ ಭಾರಿ ಸಂಚಲನ ಸೃಷ್ಟಿಸಿದ್ದ ಸ್ನಾತಕೋತ್ತರ ಕಾನೂನು ವಿದ್ಯಾರ್ಥಿನಿಯು ಮುಂದಿನ ನಾಲ್ಕು ದಿನ ದೆಹಲಿಯಲ್ಲಿಯೇ ಉಳಿಯಲು ಸುಪ್ರೀಂ ಕೋರ್ಟ್‌ ಅವಕಾಶ ನೀಡಿದೆ. ತಮ್ಮ ಹೆತ್ತವರನ್ನು ಭೇಟಿಯಾದ ಬಳಿಕ ಮುಂದಿನ ನಡೆಯನ್ನು ನಿರ್ಧರಿಸಲು ಅನುವು ಮಾಡಿಕೊಟ್ಟಿದೆ.

ಯುವತಿಯ ಹೆತ್ತವರು ಶಾಜಹಾನ್‌ಪುರದಲ್ಲಿದ್ದು, ಅವರನ್ನು ದೆಹಲಿಗೆ ಕರೆತರುವಂತೆ ದೆಹಲಿ ಪೊಲೀಸ್‌ ಆಯುಕ್ತರಿಗೆ ನ್ಯಾಯಮೂರ್ತಿಗಳಾದ ಆರ್‌.ಭಾನುಮತಿ ಮತ್ತು ಎ.ಎಸ್‌.ಬೋಪಣ್ಣ ಅವರ ಪೀಠವು ಸೂಚನೆ ನೀಡಿದೆ.

ಯುವತಿಯ ಜತೆಗೆ ನ್ಯಾಯಮೂರ್ತಿಗಳು ಶುಕ್ರವಾರ ಸಂಜೆ ಮಾತುಕತೆ ನಡೆಸಿದರು. ಸದ್ಯ ಶಾಜಹಾನ್‌ಪುರಕ್ಕೆ ಹೋಗಲು ಇಷ್ಟವಿಲ್ಲ ಎಂದು ಅವರಿಗೆ ಯುವತಿ ತಿಳಿಸಿದ್ದಾರೆ. ಹೆತ್ತವರನ್ನು ಭೇಟಿಯಾದ ಬಳಿಕ ಮುಂದಿನ ನಡೆ ಏನು ಎಂಬುದನ್ನು ನಿರ್ಧರಿಸುವುದಾಗಿ ಹೇಳಿದ್ದಾರೆ.

ADVERTISEMENT

ಚಿನ್ಮಯಾನಂದ ವಿರುದ್ಧ ಆರೋಪ ಮಾಡಿದ್ದ ಫೇಸ್‌ಬುಕ್‌ ಪೋಸ್ಟ್‌ ವೈರಲ್‌ ಆದ ಬಳಿಕ ಗೆಳೆಯರ ಜತೆಗೆ ಬೇರೆ ಊರಿಗೆ ಹೋಗಿದ್ದಾಗಿಯೂ ಯುವತಿ ತಿಳಿಸಿದ್ದಾರೆ.

ಯುವತಿಗೆ ದೆಹಲಿಯಲ್ಲಿ ನಾಲ್ಕು ದಿನ ಸುರಕ್ಷಿತವಾದ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಬೇಕು. ಹೆತ್ತವರು ಬಿಟ್ಟು ಬೇರೆ ಯಾರೂ ಯುವತಿಯನ್ನು ಭೇಟಿ ಮಾಡುವಂತಿಲ್ಲ. ಅಲ್ಲಿನ ಸ್ಥಿರ ದೂರವಾಣಿಯ ಮೂಲಕ ಹೆತ್ತವರಿಗೆ ಕರೆ ಮಾಡಲು ಮಾತ್ರ ಅವಕಾಶ ನೀಡಬೇಕು ಎಂದು ಪೀಠ ಹೇಳಿದೆ. ಪ್ರಕರಣದ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಲಾಗಿದೆ.

₹5 ಕೋಟಿಗೆ ಬೇಡಿಕೆ:ಯುವತಿಯ ಆರೋಪಗಳನ್ನು ಚಿನ್ಮಯಾನಂದ ಅವರು ಅಲ್ಲಗಳೆದಿದ್ದಾರೆ. ಯುವತಿಯು ತಮ್ಮನ್ನು ಬ್ಲ್ಯಾಕ್‌ಮೇಲ್‌ಗೆ ಒಳಪಡಿಸಿದ್ದಾರೆ. ₹5 ಕೋಟಿ ನೀಡಬೇಕು ಎಂಬ ಕರೆಯೊಂದು ತಮಗೆ ಬಂದಿತ್ತು ಎಂದು ಅವರು ಹೇಳಿದ್ದಾರೆ. ಆದರೆ, ಚಿನ್ಮಯಾನಂದ ವಿರುದ್ಧ ಉತ್ತರ ಪ್ರದೇಶ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ನಾಪತ್ತೆಗೆ ಮುನ್ನ ಚಿನ್ಮಯಾನಂದ ವಿರುದ್ದ ಆರೋಪ

ಚಿನ್ಮಯಾನಂದ ಅವರು ನಡೆಸುತ್ತಿರುವ ಕಾಲೇಜಿನಲ್ಲಿ ಯುವತಿ ವ್ಯಾಸಂಗ ಮಾಡುತ್ತಿದ್ದಾರೆ. ‘ಚಿನ್ಮಯಾನಂದ ಅವರು ಹಲವು ಯುವತಿಯರ ಜೀವನವನ್ನು ಹಾಳು ಮಾಡಿದ್ದಾರೆ. ಅವರನ್ನು ಸಂಕಷ್ಟಕ್ಕೆ ಸಿಲುಕಿಸುವಂತಹ ಸಾಕ್ಷ್ಯಗಳು ನನ್ನ ಬಳಿ ಇವೆ. ನನಗೆ ಮತ್ತು ನನ್ನ ಕುಟುಂಬಕ್ಕೆ ಅವರಿಂದ ಬೆದರಿಕೆ ಇದೆ’ ಎಂದು ಆ. 24ರಂದು ಯುವತಿ ಫೇಸ್‌ಬುಕ್‌ ಮೂಲಕ ಆರೋಪಿಸಿದ್ದರು. ಅದಾದ ಬಳಿಕ ಯುವತಿ ನಾಪತ್ತೆಯಾಗಿದ್ದರು.

ತಮ್ಮ ಮಗಳನ್ನು ಚಿನ್ಮಯಾನಂದ ಅವರು ಅಪಹರಿಸಿದ್ದಾರೆ ಎಂದು ಯುವತಿಯ ಹೆತ್ತವರು ಆರೋಪಿಸಿದ್ದರು. ಪ್ರಕರಣವನ್ನು ಸುಪ್ರೀಂ ಕೋರ್ಟ್‌ ಸ್ವಯಂ ಪ್ರೇರಣೆಯಿಂದ ಶುಕ್ರವಾರ ಕೈಗೆತ್ತಿಕೊಂಡಿತ್ತು.

ಯುವತಿಯು ವ್ಯಕ್ತಿಯೊಬ್ಬರ ಜತೆಗೆ ರಾಜಸ್ಥಾನದಲ್ಲಿ ಇದ್ದರು. ಈಗ ಅವರು ಆಗ್ರಾ ಸಮೀಪದ ಫತೇಪುರ ಸಿಕ್ರಿಯಲ್ಲಿ ಇದ್ದಾರೆ ಎಂಬುದನ್ನು ಉತ್ತರ ಪ್ರದೇಶ ಸರ್ಕಾರದ ಪರ ವಕೀಲರು ನ್ಯಾಯಪೀಠದ ಗಮನಕ್ಕೆ ತಂದರು.

ಯುವತಿ ಮತ್ತು ಅವರ ಜತೆಗಿರುವವನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ಪೀಠವು ಆದೇಶಿಸಿತು. ವಾಸ್ತವಾಂಶ ಏನು ಎಂಬುದನ್ನು ತಿಳಿಯಲು ಯುವತಿಯ ಜತೆಗೆ ಪ್ರತ್ಯೇಕವಾಗಿ ಮಾತನಾಡಲೂ ನಿರ್ಧರಿಸಿತು.

ಶೋಭಾ ಅವರು ಯುವತಿಯ ಪರವಾಗಿ ವಾದಿಸಿದ್ದ ವಕೀಲೆಯರ ತಂಡದ ನೇತೃತ್ವ ವಹಿಸಿದ್ದರು. ‘ಯುವತಿಯನ್ನು ನೇರವಾಗಿ ನ್ಯಾಯಾಲಯಕ್ಕೆ ಹಾಜರುಪಡಿಸಬೇಕು. ಅವರ ಹೇಳಿಕೆಯನ್ನು ಇಲ್ಲಿಯೇ ಪಡೆದುಕೊಳ್ಳಬೇಕು. ಯುವತಿಯ ಸುರಕ್ಷತೆಯ ಬಗ್ಗೆ ಆತಂಕ ಇದೆ. ಉನ್ನಾವ್‌ ಪ್ರಕರಣದಲ್ಲಿ ಆದಂತೆ ಈ ಪ್ರಕರಣದಲ್ಲಿಯೂ ಆಗಬಹುದು’ ಎಂದು ಅವರು ನ್ಯಾಯಪೀಠದ ಮುಂದೆ ಕಳವಳ ವ್ಯಕ್ತಪಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.