ADVERTISEMENT

ಎನ್‌ಡಿಎ ಸಭೆಗೆ ಚಿರಾಗ್‌ ಪಾಸ್ವಾನ್‌ಗೆ ಆಹ್ವಾನ: ಅನಾರೋಗ್ಯ ಕಾರಣ ನೀಡಿ ಗೈರು

ಪಿಟಿಐ
Published 30 ಜನವರಿ 2021, 14:39 IST
Last Updated 30 ಜನವರಿ 2021, 14:39 IST
ಚಿರಾಗ್‌ ಪಾಸ್ವಾನ್‌
ಚಿರಾಗ್‌ ಪಾಸ್ವಾನ್‌   

ನವದೆಹಲಿ: ಇತ್ತೀಚೆಗೆ ನಡೆದ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಎನ್‌ಡಿಎ ವಿರುದ್ಧ ಸ್ಪರ್ಧಿಸಿದ್ದ ಲೋಕ್‌ ಜನಶಕ್ತಿ ಪಕ್ಷದ (ಎಲ್‌ಜೆಪಿ) ಅಧ್ಯಕ್ಷ ಚಿರಾಗ್‌ ಪಾಸ್ವಾನ್‌ ಅವರನ್ನು, ಬಜೆಟ್‌ ಅಧಿವೇಶನದ ಸಂದರ್ಭದಲ್ಲಿ ಆಡಳಿತ ಪಕ್ಷದ ಕಾರ್ಯಸೂಚಿ ಕುರಿತು ಚರ್ಚಿಸಲು ಶನಿವಾರ ನಡೆದ ಎನ್‌ಡಿಎ ಸಭೆಗೆ ಬಿಜೆಪಿ ಆಹ್ವಾನಿಸಿತ್ತು.

ಆದರೆ, ಅನಾರೋಗ್ಯದ ಕಾರಣದಿಂದ ವರ್ಚುವಲ್‌ ಸಭೆಗೆ ಪಾಸ್ವಾನ್‌ ಹಾಜರಾಗಿಲ್ಲ. ಜೊತೆಗೆ ಶನಿವಾರ ಬೆಳಗ್ಗೆ ನಡೆದ ಸರ್ವಪಕ್ಷಗಳ ಸಭೆಗೂ ಇದೇ ಕಾರಣದಿಂದ ಅವರು ಹಾಜರಾಗಿಲ್ಲ ಎಂದು ಎಲ್‌ಜೆಪಿ ಮೂಲಗಳು ಹೇಳಿವೆ. ಎಲ್‌ಜೆಪಿಯನ್ನು ಆಹ್ವಾನಿಸಿದ ಬಿಜೆಪಿ ನಿರ್ಧಾರವನ್ನು ಜೆಡಿಯು ವಿರೋಧಿಸಿತ್ತು. ಪಾಸ್ವಾನ್‌, ಸಭೆಗೆ ಹಾಜರಾಗದೇ ಇರಲು ಇದೂ ಒಂದು ಕಾರಣ ಎನ್ನಲಾಗಿದೆ.

ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್‌ ಜೋಶಿ ಅವರು ಪಾಸ್ವಾನ್‌ ಅವರನ್ನು ಆಹ್ವಾನಿಸಿರುವುದು, ಬಿಹಾರದಲ್ಲಿ ಎನ್‌ಡಿಎ ಮೈತ್ರಿಕೂಟದಿಂದ ಎಲ್‌ಜೆಪಿ ಹೊರಬಂದರೂ, ರಾಷ್ಟ್ರಮಟ್ಟದಲ್ಲಿ ಎನ್‌ಡಿಎ ಸದಸ್ಯ ಪಕ್ಷವಾಗಿ ಎಲ್‌ಜೆಪಿ ಇನ್ನೂ ಉಳಿದುಕೊಂಡಿದೆ ಎನ್ನುವುದಕ್ಕೆ ಸಾಕ್ಷ್ಯವಾಗಿದೆ.

ADVERTISEMENT

ಎಲ್‌ಜೆಪಿ ಕುರಿತು ತನ್ನ ಸ್ಪಷ್ಟ ನಿಲುವನ್ನು ಜೆಡಿಯು ಹೊರಹಾಕಿದೆ. ‘ಪಾಸ್ವಾನ್‌ ಅವರ ಪಕ್ಷವನ್ನು ಎನ್‌ಡಿಎ ಸದಸ್ಯ ಪಕ್ಷವಾಗಿ ಜೆಡಿಯು ಪರಿಗಣಿಸುವುದಿಲ್ಲ’ ಎಂದು ಜೆಡಿಯು ವಕ್ತಾರ ಕೆ.ಸಿ.ತ್ಯಾಗಿ ಹೇಳಿದ್ದಾರೆ. ‘ವಿಧಾನಸಭೆ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಗಳ ವಿರುದ್ಧವೇ ಎಲ್‌ಜೆಪಿ ಕೆಲಸ ಮಾಡಿತ್ತು. ಇದು ಎನ್‌ಡಿಎಗೆ ಹಾನಿ ಉಂಟು ಮಾಡಿತ್ತು. ಬಿಹಾರದಲ್ಲಿ ಎನ್‌ಡಿಎಯು ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರ ನಾಯಕತ್ವದಡಿಯೇ ಕಾರ್ಯನಿರ್ವಹಿಸಲಿದೆ ಎಂದು ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದರು. ಹೀಗಾಗಿ ಎಲ್‌ಜೆಪಿಯನ್ನು ಎನ್‌ಡಿಎ ಭಾಗ ಎಂದು ನಾವು ಪರಿಗಣಿಸುವುದಿಲ್ಲ’ ಎಂದರು.

ಸಭೆಗೆ ಪಾಸ್ವಾನ್‌ ಅವರನ್ನು ಆಹ್ವಾನಿಸಿದ ಕುರಿತು ಎನ್‌ಡಿಎ ಒಳಗೇ ಇದ್ದ ಅಸಮಾಧಾನದ ಕಾರಣ, ಎನ್‌ಡಿಎ ಪ್ರಮುಖ ನಾಯಕರೇ ಪಾಸ್ವಾನ್‌ ಅವರನ್ನು ಸಭೆಗೆ ಬರದಂತೆ ತಡೆದಿದ್ದರು ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.