ಪಟ್ನಾ: ಬಿಹಾರ ವಿಧಾನಸಭಾ ಚುನಾವಣೆಯ ಕ್ಷೇತ್ರ ಹಂಚಿಕೆಯಲ್ಲಿ ಎನ್‌ಡಿಎ ಮೈತ್ರಿಕೂಟದ ಜತೆಗೆ ಎಲ್‌ಜೆಪಿ(ರಾಮ್ ವಿಲಾಸ್) ಪಕ್ಷವನ್ನು ಕೂಡ ಪರಿಗಣಿಸಿದ್ದಕ್ಕಾಗಿ ಬಿಜೆಪಿ ಹಾಗೂ ಜೆಡಿ(ಯು) ಪಕ್ಷಗಳಿಗೆ ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಅವರು ಶನಿವಾರ ಧನ್ಯವಾದ ತಿಳಿಸಿದ್ದಾರೆ.
ಎನ್‌ಡಿಎ ಮೈತ್ರಿಕೂಟದ ಚಿಕ್ಕ ಪಕ್ಷವಾದ ಎಲ್‌ಜೆಪಿ(ರಾಮ್ ವಿಲಾಸ್) ಪಕ್ಷವನ್ನು ಬಿಹಾರ ವಿಧಾನಸಭಾ ಚುನಾವಣೆಯ ಕ್ಷೇತ್ರ ಹಂಚಿಕೆಯಲ್ಲಿ ಜತೆ ಸೇರಿಸಿಕೊಳ್ಳುವ ಮೂಲಕ ಬಿಜೆಪಿ ಹಾಗೂ ಜೆಡಿ(ಯು) ಪಕ್ಷಗಳು ಹೃದಯ ವಿಶಾಲತೆ ತೋರಿಸಿವೆ ಎಂದು ಚಿರಾಗ್ ಪಾಸ್ವಾನ್ ಹೇಳಿದ್ದಾರೆ.
ಬಿಹಾರ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟವು ಐತಿಹಾಸಿಕ ಗೆಲುವು ಸಾಧಿಸಲಿದೆ ಎಂದು ಚಿರಾಗ್ ಪಾಸ್ವಾನ್ ಅಭಿಪ್ರಾಯಪಟ್ಟಿದ್ದಾರೆ.
‘ಚುನಾವಣೆಯಲ್ಲಿ ಇಷ್ಟೇ ಕ್ಷೇತ್ರಗಳನ್ನು ನಮಗೆ ನೀಡಬೇಕೆಂದು ಕೇಳಿರಲಿಲ್ಲ. ನಮ್ಮ ಹಿಡಿತವಿರುವ ಕ್ಷೇತ್ರಗಳಲ್ಲಿ ಸ್ಪರ್ಧಿಸಬೇಕು ಎಂಬುದಷ್ಟೇ ನಮ್ಮ ಗುರಿಯಾಗಿತ್ತು’ ಎಂದಿದ್ದಾರೆ.
ಬಿಹಾರ ಚುನಾವಣೆಯಲ್ಲಿ 29 ಕ್ಷೇತ್ರಗಳಿಂದ ಎಲ್‌ಜೆಪಿ(ರಾಮ್ ವಿಲಾಸ್) ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ಕಳೆದ ವಿಧಾನಸಭೆಯಲ್ಲಿ ಪಕ್ಷವು ಯಾವುದೇ ಶಾಸಕರನ್ನು ಕೂಡ ಹೊಂದಿರಲಿಲ್ಲ.
243 ಸದಸ್ಯ ಬಲದ ಬಿಹಾರ ವಿಧಾನಸಭಾ ಚುನಾವಣೆಗೆ ನವೆಂಬರ್ 6 ಮತ್ತು 11 ರಂದು ಎರಡು ಹಂತದಲ್ಲಿ ಚುನಾವಣೆ ನಡೆಯಲಿದೆ. ನವೆಂಬರ್ 14 ರಂದು ಮತ ಎಣಿಕೆ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.