ADVERTISEMENT

ನಾಗರಿಕರು ಮೂಲಭೂತ ಕರ್ತವ್ಯಗಳನ್ನು ಅರಿತು ಸಹಕರಿಸಬೇಕು: ಬಾಂಬೆ ಹೈಕೋರ್ಟ್‌

ಪಿಟಿಐ
Published 10 ಏಪ್ರಿಲ್ 2020, 14:37 IST
Last Updated 10 ಏಪ್ರಿಲ್ 2020, 14:37 IST
   

ಮುಂಬೈ: ಕೋವಿಡ್‌–19 ನಿಯಂತ್ರಣಕ್ಕೆ ಸರ್ಕಾರವು ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ಈ ಸಂದರ್ಭದಲ್ಲಿ ನಾಗರಿಕರು
ಕೂಡ ತಮ್ಮ ಮೂಲಭೂತ ಕರ್ತವ್ಯಗಳನ್ನು ಅರಿತು ಸರ್ಕಾರಕ್ಕೆ ಸಹಕರಿಸಬೇಕು ಎಂದು ಬಾಂಬೆ ಹೈಕೋರ್ಟ್‌ನ ಔರಂಗಾಬಾದ್‌ ಪೀಠ
ಹೇಳಿದೆ.

ವಲಸೆ ಕಾರ್ಮಿಕರು, ಆರೋಗ್ಯ ಸಿಬ್ಬಂದಿ ಮತ್ತು ದಿನಗೂಲಿ ನೌಕರರ ಸಂಕಷ್ಟಗಳ ಕುರಿತ ಅರ್ಜಿಯನ್ನು ಸ್ವಪ್ರೇರಣೆಯಿಂದ
ನ್ಯಾಯಮೂರ್ತಿ ಪಿ.ಬಿ. ವರಲೆ ವಿಚಾರಣೆ ನಡೆಸಿದರು.

‘ಸಭೆ ಮತ್ತು ಸಮಾರಂಭ ನಡೆಸಬಾರದು, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರ
ಕಟ್ಟುನಿಟ್ಟಾಗಿ ಹೇಳಿದೆ. ಹೀಗಿದ್ದರೂ, ಸರ್ಕಾರದ ನಿರ್ದೇಶನಗಳು ಮತ್ತು ಮಾರ್ಗಸೂಚಿಗಳನ್ನು ಕೆಲವರು ಉಲ್ಲಂಘಿಸುತ್ತಿದ್ದಾರೆ. ಜೊತೆಗೆ
ಕೆಲವರು ಕೋಮು ಸೌಹಾರ್ದಕ್ಕೆ ಭಂಗ ತರುವಂತಹ ಕೃತ್ಯಗಳಲ್ಲಿ ತೊಡಗಿಕೊಂಡಿದ್ದಾರೆ. ನಾಗರಿಕರು ತಮ್ಮ ಮೂಲಭೂತ
ಹಕ್ಕುಗಳ ಬಗ್ಗೆ ಗಂಭೀರ ಕಾಳಜಿಯನ್ನು ತೋರಿಸುತ್ತಾರೆ. ಆದರೆ, ನಂತರ ಮೂಲಭೂತ ಕರ್ತವ್ಯಗಳನ್ನು ಮರೆತುಬಿಡುತ್ತಾರೆ’ ಎಂದು
ನ್ಯಾಯಮೂರ್ತಿಗಳು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

ಇದೇ ಸಂದರ್ಭದಲ್ಲಿ, ವಲಸಿಗ ಕೂಲಿ ಕಾರ್ಮಿಕರಿಗೆ ಆಶ್ರಯ ಒದಗಿಸಲಾಗಿದ್ದು, ಅಗತ್ಯ ಆಹಾರ ಮತ್ತು ಔಷಧಿಗಳನ್ನು
ಪೂರೈಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಉದಯ್‌ ಚೌಧರಿ ಕೋರ್ಟ್‌ಗೆ ತಿಳಿಸಿದರು.

ನಿರ್ಗತಿಕರಿಗೆ ಸಹಾಯ ಮಾಡಲು ಸಿದ್ಧವಿರುವ ಸ್ವಯಂ ಸೇವಾ ಸಂಘಗಳ ಸಹಾಯವನ್ನು ಪಡೆಯುವಂತೆ ಸರ್ಕಾರ ಮತ್ತು ಸ್ಥಳೀಯ
ಆಡಳಿತ ಸಂಸ್ಥೆಗಳಿಗೆ ನ್ಯಾಯಾಲಯ ನಿರ್ದೇಶಿಸಿದೆ. ಜೊತೆಗೆ, ರೈತರು ಮತ್ತು ಗ್ರಾಹಕರ ನಡುವೆ ಸಂಪರ್ಕವನ್ನು ಸಾಧಿಸಲು ನೆರವಾಗುವ
ಕ್ರಮಗಳನ್ನು ತೆಗೆದುಕೊಳ್ಳುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.