ADVERTISEMENT

ತೆಲುಗಿನಲ್ಲಿ ವಿಚಾರಣೆ ನಡೆಸಿದ ಸಿಜೆಐ: ಮತ್ತೆ ಒಂದಾಗಲು ಒಪ್ಪಿದ ದಂಪತಿ 

​ಪ್ರಜಾವಾಣಿ ವಾರ್ತೆ
Published 29 ಜುಲೈ 2021, 10:58 IST
Last Updated 29 ಜುಲೈ 2021, 10:58 IST
   

ದೆಹಲಿ: 21 ವರ್ಷಗಳ ದೀರ್ಘ ಕಾಲೀನ ನ್ಯಾಯಾಂಗ ಹೋರಾಟದಲ್ಲಿ ಸಿಲುಕಿದ್ದ ದಂಪತಿಗಳನ್ನು ಒಂದು ಮಾಡಲು ಭಾರತದ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಬುಧವಾರ ತಮ್ಮ ಮಾತೃಭಾಷೆ ತೆಲುಗಿನಲ್ಲೇ ವಿಚಾರಣೆ ನಡೆಸಿ ದೇಶದ ಗಮನ ಸೆಳೆದಿದ್ದಾರೆ.

ಎಲ್ಲರೂ ಇಂಗ್ಲಿಷ್‌ ಅರ್ಥ ಮಾಡಿಕೊಳ್ಳುವುದಿಲ್ಲವಾದ್ದರಿಂದ, ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳು ವಿಚಾರಣೆ ವೇಳೆ ಹಿಂದಿಯನ್ನು ಹೆಚ್ಚಾಗಿ ಬಳಸುತ್ತಾರೆ. ಆದರೆ, ನ್ಯಾಯಪೀಠ ಮತ್ತು ದಾವೆ ಹೂಡಿದವರ ನಡುವಿನ ಇತರ ಪ್ರಾದೇಶಿಕ ಭಾಷೆಯಲ್ಲಿನ ಸಂವಾದವು ಸುಪ್ರೀಂ ಕೋರ್ಟ್‌ನಲ್ಲಿ ವಿರಳ.

ಭಾಷಾ ವೈವಿಧ್ಯತೆಗೆ ಹೆಸರುವಾಸಿಯಾದ ದೇಶದ ನ್ಯಾಯದಾನ ಪ್ರಕ್ರಿಯೆಯಲ್ಲಿ ಭಾಷೆ ತೊಡಕಾಗದಂತೆ ನೋಡಿಕೊಳ್ಳುವಲ್ಲಿ ಮುಖ್ಯ ನ್ಯಾಯಮೂರ್ತಿ ರಮಣ ಮತ್ತು ನ್ಯಾಯಮೂರ್ತಿ ಸೂರ್ಯ ಕಾಂತ್ ಅವರ ನ್ಯಾಯಪೀಠ ಬುಧವಾರ ಯಶಸ್ವಿಯಾಗಿದೆ.

ADVERTISEMENT

ಇತ್ತೀಚಿನ ದಿನಗಳಲ್ಲಿ ಸುಪ್ರೀಂ ಕೋರ್ಟ್ ತನ್ನ ತೀರ್ಪುಗಳನ್ನು ಇಂಗ್ಲಿಷ್‌ನಿಂದ ವಿವಿಧ ಪ್ರಾದೇಶಿಕ ಭಾಷೆಗಳಿಗೆ ಅನುವಾದಿಸುತ್ತಿದೆ. ದಾವೆ ಹೂಡುವವರಿಗೆ ಮತ್ತು ಸಾರ್ವಜನಿಕರಿಗೆ ತೀರ್ಪುಗಳನ್ನು ಓದಲು ಮತ್ತು ಕಾನೂನನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ಸಹಾಯ ಮಾಡುವುದು ಇದರ ಉದ್ದೇಶ.

ಬುಧವಾರ ವರ್ಚುವಲ್ ಆಗಿ ನಡೆದ ವಿಚಾರಣೆಯಲ್ಲಿ ಆಂಧ್ರಪ್ರದೇಶದ ಅರ್ಜಿದಾರ ಮಹಿಳೆ ಇಂಗ್ಲಿಷ್‌ನಲ್ಲಿ ಮುಕ್ತವಾಗಿ ಮಾತನಾಡಲು ಕಷ್ಟಪಡುತ್ತಿರುವುದನ್ನು ನ್ಯಾಯಪೀಠ ಗಮನಿಸಿತು. ಇಂಗ್ಲಿಷ್‌ನಲ್ಲಾಗಲಿ, ಹಿಂದಿಯಲ್ಲಾಗಲಿ ನಿರರ್ಗಳವಾಗಿ ಮಾತನಾಡಲು ಬಾರದೆಂದು ಮಹಿಳೆ ನ್ಯಾಯಪೀಠಕ್ಕೆ ತಿಳಿಸಿದರು.

ಇದನ್ನು ಕೇಳಿದ ಮುಖ್ಯನ್ಯಾಯಮೂರ್ತಿಗಳು, ದಾವೆ ಹೂಡಿದ್ದ ಮಹಿಳೆಯೊಂದಿಗೆ ತಾವು ತೆಲುಗಿನಲ್ಲಿ ಮಾತನಾಡುವುದಾಗಿಯೂ, ಅದನ್ನು ನಂತರ ಇಂಗ್ಲೀಷ್‌ನಲ್ಲಿ ಭಾಷಾಂತರಿಸಿ ತಿಳಿಸುವುದಾಗಿಯೂ ಪೀಠದ ಮತ್ತೊಬ್ಬ ನ್ಯಾಯಮೂರ್ತಿ ಸೂರ್ಯ ಕಾಂತ್‌ ಅವರಿಗೆ ತಿಳಿಸಿದರು. ಮುಖ್ಯನ್ಯಾಯಮೂರ್ತಿಗಳ ಪ್ರಸ್ತಾವವನ್ನು ನ್ಯಾಯಮೂರ್ತಿ ಕಾಂತ್‌ ಕೂಡಲೇ ಒಪ್ಪಿಕೊಂಡರು.

ಈ ಪ್ರಕರಣವು ಕಿರುಕುಳಕ್ಕೆ ಸಂಬಂಧಿಸಿದ್ದಾಗಿತ್ತು. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 498 ಎ ಅಡಿಯಲ್ಲಿ ಮಹಿಳೆ ತನ್ನ ಪತಿ ವಿರುದ್ಧ 2001ರಲ್ಲಿ ಪ್ರಕರಣ ದಾಖಲಿಸಿದ್ದರು. ವಿಚಾರಣಾ ನ್ಯಾಯಾಲಯವು ಪತಿಯನ್ನು ಅಪರಾಧಿ ಎಂದು ತೀರ್ಪು ನೀಡಿ ಒಂದು ವರ್ಷ ಜೈಲು ಶಿಕ್ಷೆ ಮತ್ತು 1,000 ದಂಡವನ್ನು ವಿಧಿಸಿತ್ತು.

ಈ ಪ್ರಕರಣ ನಂತರ ಹೈಕೋರ್ಟ್‌ ಮೆಟ್ಟಿಲೇರಿತ್ತು. ಪತಿಯ ಅಪರಾಧವನ್ನು ಹೈಕೋರ್ಟ್‌ ದೃಢೀಕರಿಸಿತ್ತು. ಆದರೆ, ಜೈಲು ಶಿಕ್ಷೆಯನ್ನು ವ್ಯಕ್ತಿ ಅದಾಗಲೇ ಅನುಭವಿಸಿದ ಜೈಲುವಾಸಕ್ಕಷ್ಟೇ ಮಿತಿಗೊಳಿಸಿತ್ತು.

ಶಿಕ್ಷೆ ಕಡಿಮೆ ಮಾಡಿದ್ದನ್ನು ಪ್ರಶ್ನೆ ಮಾಡಿ ಮಹಿಳೆ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ನ್ಯಾಯಾಲಯವು ಪ್ರಕರಣವನ್ನು 2012ರಲ್ಲಿ ಮಧ್ಯಸ್ಥಿಕೆಗಾಗಿ ಸೂಚಿಸಿತ್ತು. 2012ರಿಂದಲೂ ಹೈದರಾಬಾದ್‌ನಲ್ಲಿ ಮಧ್ಯಸ್ಥಿಕೆ ನಡೆಯುತ್ತಿದೆಯಾದರೂ, ಪ್ರಕರಣ ತಾರ್ಕಿಕ ಅಂತ್ಯ ಕಂಡಿರಲಿಲ್ಲ.

ಆದರೆ, ಬುಧವಾರ ತೆಲುಗಿನಲ್ಲಿ ನಡೆದ ವಿಚಾರಣೆ ವೇಳೆ ದಂಪತಿ ಸೌಹಾರ್ದಯುತವಾಗಿ ಪ್ರಕರಣವನ್ನು ಅಂತ್ಯಗೊಳಿಸುವ ಒಪ್ಪಂದಕ್ಕೆ ಬಂದಿದ್ದಾರೆ.

"ಪ್ರಕರಣ ಸೌಹಾರ್ದಯುತವಾಗಿ ಬಗೆಹರಿಯುವಂತೆ ಮಾಡಿದ ನ್ಯಾಯಪೀಠದ ಉಪಕ್ರಮಕ್ಕೆ ಧನ್ಯವಾದಗಳು. ಅಪರಾಧಿ ಪತಿಯ ಜೈಲು ಶಿಕ್ಷೆಯನ್ನು ವಿಸ್ತರಿಸುವುದಾಗಿ ಕೋರ್ಟ್‌ ಹೇಳಿದೆ. ಆದರೆ ಇದರ ಪರಿಣಾಮವನ್ನು ಮಹಿಳೆಯೇ ಎದುರಿಸಬೇಕಾಗಬಹುದು. ಆತ ತನ್ನ ಕೆಲಸವನ್ನು ಕಳೆದುಕೊಳ್ಳಬಹುದು. ಹೀಗಾಗಿ ಆರ್ಥಿಕ ನೆರವು ಒದಗಿಸಲು ಆಗದಿರಬಹುದು. ಇಬ್ಬರ ನಡುವಿನ ಮದುವೆಯು ಇನ್ನೂ ಅಸ್ತಿತ್ವದಲ್ಲಿದೆ. ಪತಿ 18 ವರ್ಷಗಳಿಂದ ಕುಟುಂಬಕ್ಕೆ ನೆರವು ನೀಡುತ್ತಾ ಬಂದಿದ್ದಾರೆ” ಎಂದು ವಕೀಲ ಡಿ. ರಾಮಕೃಷ್ಣ ರೆಡ್ಡಿ ಅವರು ನ್ಯಾಯಾಲಯದಲ್ಲಿ ತೆಲುಗಿನಲ್ಲೇ ವಿವರಿಸಿದರು.

"ನಿಮ್ಮ ಪತಿ ಜೈಲಿಗೆ ಹೋದರೆ ನೀವು ನೆರವು ಕಳೆದುಕೊಳ್ಳುತ್ತೀರಿ. ಶಿಕ್ಷೆಯಾಗುತ್ತಲೇ ಅವರು ತಮ್ಮ ಕೆಲಸ ಕಳೆದುಕೊಳ್ಳುತ್ತಾರೆ" ಎಂದು ಸಿಜೆಐ ಮಹಿಳೆಗೆ ತಿಳಿಸಿದರು.

ಸಿಜೆಐ ಅವರ ಸಲಹೆಯನ್ನು ತಾಳ್ಮೆಯಿಂದ ಕೇಳಿದ ಮಹಿಳೆಯು ಪತಿಯೊಂದಿಗೆ ಜೀವನ ನಡೆಸಲು ಒಪ್ಪಿಕೊಂಡರು. ಆದರೆ, ತನ್ನನ್ನು ಮತ್ತು ತನ್ನ ಒಬ್ಬನೇ ಮಗನನ್ನು ಪತಿ ಸರಿಯಾಗಿ ನೋಡಿಕೊಳ್ಳಬೇಕು ಎಂದು ಮನವಿ ಮಾಡಿದರು.

ಈ ಬಗ್ಗೆ ಎರಡೂ ಕಡೆಯವರು ಮುಂದಿನ ವಿಚಾರಣೆ ವೇಳೆ ಅಫಿಡವಿಟ್‌ ಸಲ್ಲಿಸಬೇಕು ಎಂದು ಹೇಳಿದ ಮುಖ್ಯನ್ಯಾಯಮೂರ್ತಿಗಳು ವಿಚಾರಣೆಯನ್ನು ಎರಡು ವಾರಗಳಿಗೆ ಮುಂದೂಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.