
ನವದೆಹಲಿ: ಬಿ.ಆರ್. ಗವಾಯಿ ಅವರು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ (ಸಿಜೆಐ) ಕಾರ್ಯ ನಿರ್ವಹಿಸಿದ ಆರು ತಿಂಗಳ ಅವಧಿಯಲ್ಲಿ ಪರಿಶಿಷ್ಟ ಜಾತಿಯ 10, ಹಿಂದುಳಿದ ವರ್ಗಗಳು ಮತ್ತು ಇತರೆ ಹಿಂದುಳಿದ ವರ್ಗಗಳ 11 ನ್ಯಾಯಾಧೀಶರನ್ನು ದೇಶದ ವಿವಿದ ಹೈಕೋರ್ಟ್‌ಗಳಿಗೆ ನೇಮಕ ಮಾಡಲಾಗಿದೆ.
ದೇಶದ ಮೊದಲ ಬೌದ್ಧ ಮತ್ತು ದಲಿತ ಸಮುದಾಯದ ಎರಡನೇ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿರುವ ಗವಾಯಿ ಅವರು, ಹೈಕೋರ್ಟ್‌ಗಳಿಗೆ ನ್ಯಾಯಮೂರ್ತಿಗಳನ್ನು ನೇಮಿಸುವ ಸುಪ್ರೀಂ ಕೋರ್ಟ್ ತ್ರಿಸದಸ್ಯರ ಕೊಲಿಜಿಯಂ ನೇತೃತ್ವವಹಿಸಿದ್ದರು. ದೇಶದ ವಿವಿಧ ಹೈಕೋರ್ಟ್‌ಗಳಿಗೆ ನ್ಯಾಯಮೂರ್ತಿಗಳನ್ನು ನೇಮಕ ಮಾಡಲು ಸರ್ಕಾರಕ್ಕೆ 129 ಹೆಸರುಗಳನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದರು.
ಸುಪ್ರೀಂ ಕೋರ್ಟ್ ಜಾಲತಾಣದ ಮಾಹಿತಿ ಪ್ರಕಾರ ಮೇ 14ರಂದು ಗವಾಯಿ ಅವರು ಸಿಜೆಐ ಆಗಿ ಪ್ರಮಾಣ ವಚನ ಸ್ವೀಕರಿಸಿದಾಗಿನಿಂದ ಈವರೆಗೆ ಕೇಂದ್ರ ಸರ್ಕಾರ 93 ನ್ಯಾಯಮೂರ್ತಿಗಳನ್ನು ಸರ್ಕಾರ ನೇಮಿಸಲು ಅನುಮೋದನೆ ನೀಡಿದೆ.
ಕೇಂದ್ರ ಅನುಮೋದಿಸಿದ ನ್ಯಾಯಮೂರ್ತಿಗಳಲ್ಲಿ 13 ಮಂದಿ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ್ದರೆ, 15 ಮಂದಿ ಮಹಿಳಾ ನ್ಯಾಯಮೂರ್ತಿಗಳಾಗಿದ್ದರು. ಇವರಲ್ಲಿ ಐದು ಮಂದಿ ಮಾಜಿ ಅಥವಾ ಹಾಲಿ ನ್ಯಾಯಾಧೀಶರಾಗಿದ್ದಾರೆ. 49 ನ್ಯಾಯಾಮೂರ್ತಿಗಳನ್ನು ‘ಬಾರ್’ನಿಂದ ನೇಮಿಸಲಾಗಿದೆ. ಉಳಿದವರು ಸೇವಾ ಕ್ಷೇತ್ರದಿಂದ ಬಂದವರಾಗಿದ್ದಾರೆ.
ಗವಾಯಿ ಅವರ ಅಧಿಕಾರಾವಧಿಯಲ್ಲೇ ನ್ಯಾಯಮೂರ್ತಿಗಳಾದ ಎನ್.ವಿ. ಅಂಜಾರಿಯಾ, ವಿಜಯ್ ಬಿಷ್ಣೋಯ್, ಎ.ಎಸ್. ಚಂದೂರ್ಕರ್, ಅಲೋಕ್ ಆರಾಧೆ ಮತ್ತು ವಿಪುಲ್ ಮನುಭಾಯಿ ಪಂಚೋಲಿ ಅವರನ್ನು ಸುಪ್ರೀಂ ಕೋರ್ಟ್‌ಗೆ ನೇಮಿಸಲಾಗಿತ್ತು.
ಸಿಜೆಐ ಗವಾಯಿ ಅವರು ನವೆಂಬರ್ 23ರಂದು (ಭಾನುವಾರ) ನಿವೃತ್ತಿ ಹೊಂದಲಿದ್ದಾರೆ. ಶುಕ್ರವಾರ ಅವರು ತಮ್ಮ ಕೊನೆಯ ಕಲಾಪ ನಡೆಸಿದ್ದಾರೆ. ಗವಾಯಿ ಅವರ ಉತ್ತರಾಧಿಕಾರಿಯಾಗಿ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು ನವೆಂಬರ್ 24ರಂದು ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.