ADVERTISEMENT

ಸಿಜೆಐ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ:ಗೊಗೊಯಿ ಗರಂ

ಶೆಮಿಜ್‌ ಜಾಯ್‌
Published 20 ಏಪ್ರಿಲ್ 2019, 20:15 IST
Last Updated 20 ಏಪ್ರಿಲ್ 2019, 20:15 IST
ರಂಜನ್ ಗೊಗೊಯಿ
ರಂಜನ್ ಗೊಗೊಯಿ   

ನವದೆಹಲಿ: ‘ಸುಪ್ರೀಂ ಕೋರ್ಟ್‌ನ ಮುಖ್ಯನ್ಯಾಯಮೂರ್ತಿ (ಸಿಜೆಐ) ರಂಜನ್ ಗೊಗೊಯಿ ಅವರು ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ’ ಎಂದು ಸುಪ್ರೀಂ ಕೋರ್ಟ್‌ನ ಮಾಜಿ ಸಿಬ್ಬಂದಿಯೊಬ್ಬರು ಆರೋಪಿಸಿದ್ದಾರೆ. ಈ ಆರೋಪಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನ 22 ನ್ಯಾಯಮೂರ್ತಿಗಳಿಗೆ ಸಂತ್ರಸ್ತೆ ಪತ್ರ ಬರೆದಿದ್ದಾರೆ. ಈ ವಿಷಯ ಬಹಿರಂಗವಾಗುತ್ತಿದ್ದಂತೆಯೇ ಸುಪ್ರೀಂ ಕೋರ್ಟ್‌ ‘ವಿಶೇಷ ಮತ್ತು ಅಸಾಮಾನ್ಯ ವಿಚಾರಣೆ’ ನಡೆಸಿತು.

ಸಂತ್ರಸ್ತೆ ಶುಕ್ರವಾರ (ಏಪ್ರಿಲ್ 19) ಈ ಪತ್ರ ಬರೆದಿದ್ದಾರೆ. ಪತ್ರದ ಆಧಾರದಲ್ಲಿ ಹಲವು ಸುದ್ದಿ ಜಾಲತಾಣಗಳು ಶನಿವಾರ ಬೆಳಿಗ್ಗೆ ಸುದ್ದಿ ಪ್ರಕಟಿಸಿದ್ದವು. ಅದರ ಬೆನ್ನಲ್ಲೇ ಸುಪ್ರೀಂ ಕೋರ್ಟ್‌ನ ಕಾರ್ಯದರ್ಶಿ ‘ನ್ಯಾಯಾಂಗದ
ಸ್ವಾತಂತ್ರ್ಯಕ್ಕೆ ಸಂಬಂಧಿಸಿದಂತೆ ವಿಶೇಷ ಮತ್ತು ಅಸಾಮಾನ್ಯ ವಿಚಾರವೊಂದರ ವಿಚಾರಣೆ ನಡೆಯಲಿದೆ’ ಎಂದು ಸುತ್ತೋಲೆ ಹೊರಡಿಸಿದರು.ಅಂತೆಯೇ ಬೆಳಿಗ್ಗೆ 10.30ಕ್ಕೆ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ, ನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ ಮತ್ತು ಸಂಜೀವ್ ಖನ್ನಾ ಅವರಿದ್ದ ಪೀಠವು ವಿಶೇಷ ವಿಚಾರಣೆಯನ್ನು ಕೈಗೆತ್ತಿಕೊಂಡಿತು.

‘ಇದು ಮುಖ್ಯನ್ಯಾಯಮೂರ್ತಿಗಳ ಅಧಿಕಾರವನ್ನು ನಿಷ್ಕ್ರಿಯಗೊಳಿಸುವ ಯತ್ನ. ಇದರ ಹಿಂದೆ ಭಾರಿ ದೊಡ್ಡ ಶಕ್ತಿಗಳು ಇವೆ. ಈ ಆರೋಪಗಳನ್ನು ನಿರಾಕರಿಸುವುದೂ ಅತ್ಯಂತ ಕೆಳಮಟ್ಟವಾಗುತ್ತದೆ. ಆ ಮಟ್ಟಕ್ಕೆ
ನಾನು ಇಳಿಯುವುದಿಲ್ಲ. ನಾನು ಯಾವುದೇ ಆದೇಶ ನೀಡುವುದಿಲ್ಲ’ ಎಂದು ಗೊಗೊಯಿ ಹೇಳಿದರು.

ADVERTISEMENT

‘ಈ ವಿಚಾರದಲ್ಲಿ ನ್ಯಾಯಾಲಯ ತೀರ್ಪನ್ನು ನೀಡುವುದಿಲ್ಲ. ಈ ವಿಚಾರದಲ್ಲಿ ಏನನ್ನು ಪ್ರಕಟಿಸಬೇಕು ಮತ್ತು ಏನನ್ನು ಪ್ರಕಟಿಸಬಾರದು ಎಂಬುದು ಮಾಧ್ಯಮಗಳ ವಿವೇಚನೆಗೆ ಬಿಟ್ಟಿದ್ದು’ ಎಂದು ನ್ಯಾಯಮೂರ್ತಿ ಅರುಣ್ ಮಿಶ್ರಾ ಹೇಳಿದರು.

*ಈ ವಾರ ನಾನು ಅತ್ಯಂತ ಮಹತ್ವದ ಮತ್ತು ಸೂಕ್ಷ್ಮ ಪ್ರಕರಣಗಳ ವಿಚಾರಣೆ ನಡೆಸಬೇಕಿದೆ. ಇದು ಲೋಕಸಭೆ ಚುನಾವಣೆಯ ತಿಂಗಳು. ಇಂಥ ಸಂದರ್ಭದಲ್ಲೇ ಈ ಆರೋಪ ಬಂದಿದೆ

– ರಂಜನ್ ಗೊಗೊಯಿ, ಸಿಜೆಐ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.