ADVERTISEMENT

ಓಮೈಕ್ರಾನ್ ಪ್ರತಿರೋಧಕ ಶಕ್ತಿ ತಪ್ಪಿಸುತ್ತದೆ: ಜಿನೋಮ್ ಸೀಕ್ವೆನ್ಸಿಂಗ್ ಸಂಸ್ಥೆ

ರಾಷ್ಟ್ರೀಯ ಜಿನೋಮ್ ಸೀಕ್ವೆನ್ಸಿಂಗ್ ಸಂಸ್ಥೆ ಹೇಳಿಕೆ

ಪಿಟಿಐ
Published 29 ಡಿಸೆಂಬರ್ 2021, 18:23 IST
Last Updated 29 ಡಿಸೆಂಬರ್ 2021, 18:23 IST
ಮುಂಬೈನ ರೈಲು ನಿಲ್ದಾಣದಲ್ಲಿ ಬುಧವಾರ ಪ್ರಯಾಣಿಕರಿಗೆ ಕೋವಿಡ್ ಪರೀಕ್ಷೆ ನಡೆಯಿತು –ಪಿಟಿಐ ಚಿತ್ರ
ಮುಂಬೈನ ರೈಲು ನಿಲ್ದಾಣದಲ್ಲಿ ಬುಧವಾರ ಪ್ರಯಾಣಿಕರಿಗೆ ಕೋವಿಡ್ ಪರೀಕ್ಷೆ ನಡೆಯಿತು –ಪಿಟಿಐ ಚಿತ್ರ   

ನವದೆಹಲಿ: ‘ಕೋವಿಡ್‌ ಲಸಿಕೆ ಪಡೆದಿರುವುದರಿಂದ ಮತ್ತು ಈ ಹಿಂದೆ ಕೋವಿಡ್‌ ತಗುಲಿದ್ದರಿಂದ ಬಂದಿರುವ ಪ್ರತಿರೋಧಕ ಶಕ್ತಿಯನ್ನು ತಪ್ಪಿಸಿ, ಕೋವಿಡ್‌ ಹರಡುವ ಸಾಮರ್ಥ್ಯ ಓಮೈಕ್ರಾನ್‌ ರೂಪಾಂತರ ತಳಿಗೆ ಇರುವ ಸಾಧ್ಯತೆ ಅತ್ಯಧಿಕವಾಗಿದೆ ಎಂದು ಈವರೆಗಿನ ದತ್ತಾಂಶಗಳು ಮತ್ತು ವೈಜ್ಞಾನಿಕ ಅಧ್ಯಯನಗಳು ಹೇಳುತ್ತವೆ’ ಎಂದು ಕೇಂದ್ರ ಸರ್ಕಾರದ ವೈರಾಣು ಸಂರಚನೆ ವಿಶ್ಲೇಷಣೆ ಸಂಸ್ಥೆ ಐಎನ್‌ಎಸ್‌ಎಸಿಒಜಿ ಹೇಳಿದೆ.

ದೇಶದಲ್ಲಿ ಕೋವಿಡ್‌ ಸೇರಿದಂತೆ ವೈರಾಣುಗಳಿಂದ ಬರುವ ರೋಗಗಳ, ವೈರಾಣು ಸಂರಚನೆ ವಿಶ್ಲೇಷಣೆಯನ್ನು ನಡೆಸುವ ಪ್ರಧಾನ ಸಂಸ್ಥೆ ಇದಾಗಿದೆ. ಕೇಂದ್ರ ಸರ್ಕಾರದ ಜೈವಿಕ ವಿಜ್ಞಾನ ಇಲಾಖೆಯ ಅಡಿ ಈ ಸಂಸ್ಥೆ ಕಾರ್ಯನಿರ್ವಹಿಸುತ್ತದೆ. ಈಗ ದೇಶದಾದ್ಯಂತ ಓಮೈಕ್ರಾನ್‌ ಪ್ರಕರಣಗಳ ಪತ್ತೆಗೆ ನಡೆಸುತ್ತಿರುವ ವೈರಾಣು ಸಂರಚನೆ ವಿಶ್ಲೇಷಣೆ (ಜಿನೋಮ್ ಸೀಕ್ವೆನ್ಸಿಂಗ್‌) ಪರೀಕ್ಷೆಗಳನ್ನು ಈ ಸಂಸ್ಥೆಯ ಮಾರ್ಗ ಸೂಚಿಯ ಅಡಿಯಲ್ಲಿಯೇ ನಡೆಸಲಾಗುತ್ತಿದೆ.

‘ಡೆಲ್ಟಾ ರೂಪಾಂತರ ತಳಿಯು ಅತ್ಯಂತ ಕಳವಳಕಾರಿ ತಳಿಯಾಗಿದ್ದರೂ, ಆಫ್ರಿಕಾದ ದಕ್ಷಿಣ ದೇಶಗಳು, ಯೂರೋಪ್‌ನ ದೇಶಗಳು ಮತ್ತು ಅಮೆರಿಕದಲ್ಲಿ ಓಮೈಕ್ರಾನ್‌ ವ್ಯಾಪಕವಾಗಿ ಹರಡಿದೆ. ಈ ದೇಶಗಳಲ್ಲಿ ಓಮೈಕ್ರಾನ್‌ ತಳಿಯೇ, ಪ್ರಧಾನ ತಳಿಯಾಗಿದೆ. ಲಸಿಕೆಯಿಂದ ಬಂದಿರುವ ಪ್ರತಿರೋಧಕ ಶಕ್ತಿಯನ್ನು ತಪ್ಪಿಸುವ ಸಾಮರ್ಥ್ಯ ಓಮೈಕ್ರಾನ್‌ ತಳಿಗೆ ಇದೆ ಎಂಬುದನ್ನು ಪ್ರಾಯೋಗಿಕ ಅಧ್ಯಯನಗಳಲ್ಲಿ ಪತ್ತೆಯಾಗಿದೆ. ಈ ಕಾರಣದಿಂದಲೇ ಡೆಲ್ಟಾವನ್ನು ಮೀರಿ, ತೀವ್ರವಾಗುವ ಸಾಮರ್ಥ್ಯ ಈ ತಳಿಗೆ ಇರುವ ಸಾಧ್ಯತೆ ಇದೆ’ ಎಂದುಐಎನ್‌ಎಸ್‌ಎಸಿಒಜಿ ತನ್ನ ದಿನದ ಪ್ರಕಟಣೆಯಲ್ಲಿ ವಿವರಿಸಿದೆ.

ADVERTISEMENT

ಕಡಿಮೆ ತೀವ್ರತೆಗೆ ಕಾರಣ ಅಸ್ಪಷ್ಟ:‘ಓಮೈಕ್ರಾನ್‌ನಿಂದ ಕೋವಿಡ್‌ ತಗುಲಿದಾಗ ಉಂಟಾಗುವ ರೋಗದ ಲಕ್ಷಣಗಳ ತೀವ್ರತೆಯು, ಆರಂಭದ ದಿನಗಳಲ್ಲಿ ಅಂದಾಜಿಸಿದ್ದಕ್ಕಿಂತ ಕಡಿಮೆ ಇದೆ. ಈಗ ಹೆಚ್ಚಿನ ಸಂಖ್ಯೆಯಲ್ಲಿ ಪ್ರಕರಣಗಳು ಪತ್ತೆಯಾಗುತ್ತಿದ್ದರೂ, ಕೋವಿಡ್‌ನ ಈ ಹಿಂದಿನ ಅಲೆಗಳಲ್ಲಿ ಇದ್ದಷ್ಟು ರೋಗ ತೀವ್ರತೆ ಈಗ ಇಲ್ಲ’ ಎಂದುಐಎನ್‌ಎಸ್‌ಎಸಿಒಜಿ ಹೇಳಿದೆ.

‘ಓಮೈಕ್ರಾನ್‌ನಿಂದ ಬರುತ್ತಿರುವ ಕೋವಿಡ್‌ನ ತೀವ್ರತೆ ಕಡಿಮೆ ಇರು ವುದು ಏಕೆ ಎಂಬುದು ಇನ್ನೂ ಸ್ಪಷ್ಟ ವಾಗಿಲ್ಲ. ಈ ಹಿಂದೆ ಕೋವಿಡ್‌ ಬಂದಿದ್ದರಿಂದ ಮತ್ತು ಲಸಿಕೆಯಿಂದ ಉಂಟಾಗಿರುವ ಪ್ರತಿರೋಧಕ ಶಕ್ತಿಯ ಕಾರಣದಿಂದ ರೋಗದ ತೀವ್ರತೆ ಕಡಿಮೆ ಇರುವ ಸಾಧ್ಯತೆ ಇದೆ. ಅಲ್ಲದೆ, ರೋಗದ ತೀವ್ರತೆಯನ್ನು ಹೆಚ್ಚಿಸುವ ಸಾಮರ್ಥ್ಯ ಈ ತಳಿಗೆ ಇಲ್ಲದೇ ಇರುವ ಸಾಧ್ಯತೆಯೂ ಇದೆ. ಈ ಬಗ್ಗೆ ನಡೆಯುತ್ತಿರುವ ಅಧ್ಯಯನಗಳು ಇನ್ನೂ ಪೂರ್ಣಗೊಂಡಿಲ್ಲ’ ಎನ್ನಲಾಗಿದೆ.

‘ಈ ಹಿಂದೆ ಕೋವಿಡ್‌ ಬರದೇ ಇದ್ದವರಲ್ಲಿ, ಲಸಿಕೆ ಹಾಕಿಸಿಕೊಳ್ಳದೇ ಇರುವವರಲ್ಲಿ ಮತ್ತು ಲಸಿಕೆಯ ಎರಡೂ ಡೋಸ್‌ ಹಾಕಿಸಿಕೊಳ್ಳದೇ ಇರುವವರಲ್ಲಿ ಓಮೈಕ್ರಾನ್‌ನಿಂದ ಕೋವಿಡ್‌ ಬಂದರೆ, ಅದರ ತೀವ್ರತೆ ಕಡಿಮೆ ಇರುತ್ತದೆ ಎಂದು ಹೇಳಲಾಗದು.ಹೀಗಾಗಿ ಓಮೈಕ್ರಾನ್‌ನ ಅಪಾಯದ ಮಟ್ಟ ಅತ್ಯಧಿಕವಾ ಗಿಯೇ ಇದೆ ಎಂದು ಹೇಳಬಹುದು’ ಎಂದು ಐಎನ್‌ಎಸ್‌ಎಸಿಒಜಿವಿವರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.