ADVERTISEMENT

5 ರಾಜ್ಯಗಳ ಫಲಿತಾಂಶ 2024ರ ಮುನ್ನೋಟ ಎಂಬ ಮೋದಿ ಮಾತಿಗೆ ಕಿಶೋರ್‌ ಟೀಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಮಾರ್ಚ್ 2022, 12:36 IST
Last Updated 11 ಮಾರ್ಚ್ 2022, 12:36 IST
ಪ್ರಶಾಂತ್‌ ಕಿಶೋರ್‌ ಮತ್ತು ಪ್ರಧಾನಿ ನರೇಂದ್ರ ಮೋದಿ
ಪ್ರಶಾಂತ್‌ ಕಿಶೋರ್‌ ಮತ್ತು ಪ್ರಧಾನಿ ನರೇಂದ್ರ ಮೋದಿ    

ನವದೆಹಲಿ: ಉತ್ತರ ಪ್ರದೇಶ ಸೇರಿದಂತೆ ಐದು ರಾಜ್ಯಗಳ ಚುನಾವಣಾ ಫಲಿತಾಂಶಗಳು 2024ರ ಲೋಕಸಭೆ ಚುನಾವಣೆಯ ಫಲಿತಾಂಶದ ಮುನ್ನೋಟ ಎಂಬ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಯನ್ನು ಚುನಾವಣಾ ಕಾರ್ಯತಂತ್ರ ನಿಪುಣ ಪ್ರಶಾಂತ್‌ ಕಿಶೋರ್‌ ಟೀಕಿಸಿದ್ದಾರೆ.

‘ಪ್ರಧಾನಿ ಹೇಳಿಕೆಯು, ಐದು ರಾಜ್ಯಗಳ ಫಲಿತಾಂಶಗಳ ಮೂಲಕ ಗೆಲುವೆಂಬ ಭ್ರಮೆ ಷ್ಟಿ ಮಾಡಿ, ಪ್ರತಿಪಕ್ಷಗಳಲ್ಲಿ ಭೀತಿ ಹುಟ್ಟಿಸುವ ಚತುರ ಪ್ರಯತ್ನ’ ಎಂದು ಪ್ರಶಾಂತ್‌ ಕಿಶೋರ್‌ ವಿವರಿಸಿದ್ದಾರೆ.

'ಲೋಕಸಭೆ ಚುನಾವಣೆ ಸೆಣಸಾಟವು 2024ರಲ್ಲಿ ನಡೆಯಲಿದೆ. ಅದು ಯಾವುದೇ ವಿಧಾನಸಭಾ ಚುನಾವಣೆಗಳ ಮೂಲಕ ನಡೆಯುವುದಿಲ್ಲ. ಇದು ಸಾಹೇಬರಿಗೆ (ನರೇಂದ್ರ ಮೋದಿ?) ತಿಳಿದಿದೆ! ಆದರೂ ಭ್ರಮೆ ಸೃಷ್ಟಿ ಮಾಡಿ, ವಿರೋಧ ಪಕ್ಷಗಳಲ್ಲಿ ಭೀತಿ ಹುಟ್ಟಿಸುವ ಬುದ್ಧಿವಂತಿಕೆಯ ಪ್ರಯತ್ನವನ್ನು ಮಾಡಲಾಗುತ್ತಿದೆ. ಇದಕ್ಕೆ ಯಾರೂ ಮರುಳಾಗಬಾರದು. ಇದೊಂದು ಸುಳ್ಳು ನಿರೂಪಣೆ’ ಎಂದು ಕಿಶೋರ್‌ ಟ್ವೀಟ್‌ ಮಾಡಿದ್ದಾರೆ.

ADVERTISEMENT


ಏನು ಹೇಳಿದ್ದರು ಮೋದಿ?

ಗುರುವಾರ ಪ್ರಕಟವಾದ ಐದು ರಾಜ್ಯಗಳ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿಯು ಉತ್ತರ ಪ್ರದೇಶ, ಉತ್ತರಾಖಂಡ, ಮಣಿಪುರ, ಗೋವಾಗಳನ್ನು ಗೆದ್ದುಕೊಂಡಿತ್ತು. ಈ ಹಿನ್ನೆಲೆಯಲ್ಲಿ ದೆಹಲಿ ಕೇಂದ್ರ ಕಚೇರಿಯಲ್ಲಿ ಭಾಷಣ ಮಾಡಿದ್ದ ಪ್ರಧಾನಿ ಮೋದಿ, 2019ರ ಲೋಕಸಭೆ ಚುನಾವಣೆಯ ಭವಿಷ್ಯವನ್ನು 2017ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾದಾಗಲೇ ನಿರ್ಧಾರವಾಗಿತ್ತು ಎಂದು ರಾಜಕೀಯ ವಿಶ್ಲೇಷಕರು ಹೇಳಿದ್ದರು. ಈಗಲೂ ಅದೇ ಆಗಲಿದೆ. 2024ರ ಚುನಾವಣೆ ಫಲಿತಾಂಶವನ್ನು ನಾವು 2022ರ ವಿಧಾನಸಭೆ ಚುನಾವಣೆ ಮೂಲಕವೇ ನೋಡಬಹುದು’ ಎಂದು ಹೇಳಿದ್ದರು. ಈ ಬಗ್ಗೆ ಸುದ್ದಿ ಸಂಸ್ಥೆ ‘ಎಎನ್‌ಐ’ ವರದಿ ಮಾಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.