ADVERTISEMENT

ಮರಳು ಅಕ್ರಮ ಗಣಿಗಾರಿಕೆ ವಿರುದ್ಧ ಕ್ರಮ ಕೈಗೊಂಡರೆ ₹25,000 ಬಹುಮಾನ: ಎಎಪಿ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2021, 22:25 IST
Last Updated 10 ಡಿಸೆಂಬರ್ 2021, 22:25 IST
   

ನವದೆಹಲಿ (ಪಿಟಿಐ): ಮರಳು ಅಕ್ರಮ ಗಣಿಗಾರಿಕೆ ವಿರುದ್ಧ ಪಂಜಾಬ್‌ ಮುಖ್ಯಮಂತ್ರಿ ಚರಣ್‌ಜಿತ್‌ ಸಿಂಗ್ ಚನ್ನಿ ಕ್ರಮ ಕೈಗೊಂಡರೆ, ಪ್ರತೀ ಪ್ರಕರಣಕ್ಕೆ ₹25,000 ಬಹುಮಾನವನ್ನು ಅವರಿಗೆ ನೀಡುವುದಾಗಿ ಆಮ್‌ ಆದ್ಮಿ ಪಕ್ಷ (ಎಎಪಿ) ಶುಕ್ರವಾರ ಹೇಳಿದೆ.

ಮರಳು ಅಕ್ರಮ ಗಣಿಗಾರಿಕೆ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ಪುರಾವೆ ಕೊಟ್ಟವರಿಗೆ ₹25,000 ಬಹುಮಾನ ನೀಡಲಾಗುವುದು ಎಂದು ಚನ್ನಿ ಗುರುವಾರವಷ್ಟೇ ಹೇಳಿದ್ದರು. ಅವರು ಈ ಘೋಷಣೆ ಮಾಡಿದ ಮರುದಿನ ಸುದ್ದಿಗೋಷ್ಠಿ ನಡೆಸಿದ ಎಎಪಿ ವಕ್ತಾರ ರಾಘವ್‌ ಛಡ್ಡಾ ಈ ಸವಾಲು ಎಸೆದಿದ್ದಾರೆ. ಮರಳು ಅಕ್ರಮ ಗಣಿಗಾರಿಕೆಯನ್ನು ತಡೆಯುವುದು ನಿಜವಾದ ಉದ್ದೇಶವಾಗಿದ್ದರೆ ಅದರ ವಿರುದ್ಧ ಕ್ರಮ ಕೈಗೊಳ್ಳಿ ಎಂದಿದ್ದಾರೆ.

‘ಚನ್ನಿ ಅವರ ವಿಧಾನಸಭೆ ಕ್ಷೇತ್ರವಾದ ರಾಮ್‌ಪಂತ್‌ನಲ್ಲಿಯೇ ಮರಳು ಅಕ್ರಮ ಗಣಿಗಾರಿಕೆ ನಡೆಯುತ್ತಿದೆ. ಯಾವ ಸ್ಥಳಗಳಲ್ಲಿ ಮರಳು ಗಣಿಗಾರಿಕೆ ನಡೆಯುತ್ತಿದೆ ಎಂಬ ಮಾಹಿತಿಯನ್ನು ಅಧಿಕಾರಿಗಳಿಂದ ಕೇವಲ ಐದು ನಿಮಿಷಗಳಲ್ಲಿ ಮುಖ್ಯಮಂತ್ರಿ ಪಡೆಯಬಹುದು. ನೀವು ನನ್ನ ಜೊತೆ ಬನ್ನಿ. ಯಾವ ಸ್ಥಳಗಳಲ್ಲಿ ಮರಳು ಗಣಿಗಾರಿಕೆ ನಡೆಯುತ್ತಿದೆ ಎಂದು ನಾನು ನಿಮಗೆ ತೋರಿಸುತ್ತೇನೆ’ ಎಂದು ಅವರು ಸವಾಲು ಎಸೆದಿದ್ದಾರೆ.

ADVERTISEMENT

‘ನಿಮ್ಮ ಕ್ಷೇತ್ರದ ಜಿಂದಾಪುರ್‌ ಪಿಂಡ್‌ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿರುವುದಕ್ಕೆ ನಾನು ನಿಮಗೆ ಪುರಾವೆಗಳನ್ನು, ನಿಮ್ಮ ವಿರುದ್ಧವೇ ಮೊದಲು ಎಫ್‌ಐಆರ್‌ ದಾಖಲಿಸಿಕೊಳ್ಳಿ. ಮುಖ್ಯಮಂತ್ರಿಯೇ ಅಕ್ರಮ ಗಣಿಗಾರಿಕೆಯ ಅತಿದೊಡ್ಡ ಮಾಫಿಯಾ ಆದಂತಿದೆ’ ಎಂದಿದ್ದಾರೆ. ಚನ್ನಿ ಅವರ ವಿಧಾನಸಭೆ ಕ್ಷೇತ್ರದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿರುವುದನ್ನು ಬಹಿರಂಗಪಡಿಸಿದ್ದೇವೆ ಎಂದು ಈ ಮೊದಲೇ ಛಡ್ಡಾ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.