ADVERTISEMENT

ಕಲ್ಲಿದ್ದಲು ಗಣಿ ಯೋಜನೆ: ಸಂತ್ರಸ್ತರಿಗೆ ₹10,000 ಕೋಟಿ ಪರಿಹಾರ ಘೋಷಿಸಿದ ಮಮತಾ

ಪಿಟಿಐ
Published 9 ನವೆಂಬರ್ 2021, 12:40 IST
Last Updated 9 ನವೆಂಬರ್ 2021, 12:40 IST
   

ಕೋಲ್ಕತ್ತ: ಪಶ್ಚಿಮ ಬಂಗಾಳದ ಬಿರ್ಭೂಮ್ ಜಿಲ್ಲೆಯ ದಿಯೋಚ–ಪಚಮಿ ಕಲ್ಲಿದ್ದಲು ಗಣಿಗಾರಿಕೆ ಯೋಜನೆಯ ಸಂತ್ರಸ್ತರಿಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ₹10,000 ಕೋಟಿ ಪರಿಹಾರ ಪ್ಯಾಕೇಜ್ ಘೋಷಿಸಿದ್ದಾರೆ.

ವಿಶ್ವದ ಎರಡನೇ ಅತಿದೊಡ್ಡ ಕಲ್ಲಿದ್ದಲು ಗಣಿಗಾರಿಕೆ ಯೋಜನೆಯಾದ ದಿಯೋಚ ಪಚಮಿ ಹರಿಸಿಂಘ ದೇವಾಂಗ್‌ಗಂಜ್‌ಗೆ ಕೆಲ ವರ್ಷಗಳ ಹಿಂದೆ ಸರ್ಕಾರ ಭೂಮಿ ಮಂಜೂರು ಮಾಡಿತ್ತು.

‘ಸಿಂಗೂರ್‌ನಲ್ಲಿ ಆದ ರೀತಿ ಯಾವುದೇ ಘಟನೆ ನಡೆಯಲು ನಾವು ಬಿಡುವುದಿಲ್ಲ. ನಮ್ಮದು ಜನಪರ ಸರ್ಕಾರ. ಒತ್ತಾಯಪೂರ್ವಕವಾಗಿ ಯಾವುದೇ ಕೆಲಸ ಮಾಡುವುದರಲ್ಲಿ ನಮಗೆ ನಂಬಿಕೆ ಇಲ್ಲ’ಎಂದು ಮಮತಾ ವಿಧಾನಸಭೆಯಲ್ಲಿ ಹೇಳಿದ್ದಾರೆ.

ADVERTISEMENT

ಈ ಯೋಜನೆಯಿಂದ ಬಿರ್ಭೂಮ್ ಮತ್ತು ನೆರೆಯ ಜಿಲ್ಲೆಗಳಲ್ಲಿ 1 ಲಕ್ಷ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಇದೆ. 3.4 ಲಕ್ಷ ಎಕರೆಯಲ್ಲಿ ಸಿದ್ಧವಾಗುತ್ತಿರುವ ಯೋಜನೆಗಾಗಿ ರಾಜ್ಯ ಸರ್ಕಾರ ₹ 35,000 ಕೋಟಿ ಹಣವನ್ನು ಹೂಡಿಕೆ ಮಾಡುತ್ತಿದೆ ಎಂದು ಅವರು ಹೇಳಿದ್ಧಾರೆ.

ಗಣಿಗಾರಿಕೆ ಯೋಜನೆಗೆ ಭೂಮಿ ನೀಡಿದವರಿಗೆ ಸರ್ಕಾರ ಆಕರ್ಷಕ ಪ್ಯಾಕೇಜ್ ನೀಡುತ್ತಿದೆ. ಯೋಜನೆಯಿಂದ ಭೂಮಿ ಅಥವಾ ಮನೆ ಕಳೆದುಕೊಂಡ ಕುಟುಂಬದ ಒಬ್ಬ ಸದಸ್ಯನಿಗೆ ಉದ್ಯೋಗ ಸಿಗಲಿದೆ. ಸಂತ್ರಸ್ತರಿಗೆ ₹ 10,000 ಕೋಟಿ ಪ್ಯಾಕೇಜ್ ನೀಡಲು ಸರ್ಕಾರ ನಿರ್ಧರಿಸಿದೆ. ಕೃಷಿ ಕಾರ್ಮಿಕರಿಗೂ ಇದರಲ್ಲಿ ಪರಿಹಾರ ಸಿಗಲಿದೆ ಎಂದು ಮಮತಾ ಹೇಳಿದ್ಧಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.