ADVERTISEMENT

ಕಲ್ಲಿದ್ದಲು ಉತ್ಪಾದನೆ ಏರಿಕೆ: ಏಪ್ರಿಲ್ ತಿಂಗಳಲ್ಲಿ 661.64 ಲಕ್ಷ ಟನ್‌

​ಪ್ರಜಾವಾಣಿ ವಾರ್ತೆ
Published 3 ಮೇ 2022, 20:13 IST
Last Updated 3 ಮೇ 2022, 20:13 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ದೇಶದಲ್ಲಿ ವಿದ್ಯುತ್ ಕೊರತೆ ಉಂಟಾಗಿರುವ ಸಮಯದಲ್ಲೇ, ಏಪ್ರಿಲ್ ತಿಂಗಳ ದೇಶದ ಒಟ್ಟು ಕಲ್ಲಿದ್ದಲು ಉತ್ಪಾದನೆ 661.64 ಲಕ್ಷ ಟನ್‌ಗೆ ತಲುಪಿದೆ.

ಕೋಲ್ ಇಂಡಿಯಾ ಲಿಮಿಟೆಡ್ (ಸಿಐಎಲ್) ಹಾಗೂ ಅದರ ಅಂಗಸಂಸ್ಥೆಗಳು ಸೇರಿ 534.7 ಲಕ್ಷ ಟನ್ ಕಲ್ಲಿದ್ದಲು ಉತ್ಪಾದಿಸಿವೆ. ಸಿಂಗರೇಣಿ ಕಂಪನಿಯು (ಎಸ್‌ಸಿಸಿಎಲ್) 53.23 ಲಕ್ಷ ಟನ್ ಕಲ್ಲಿದ್ದಲು ಹೊರತೆಗೆದಿದೆ. ವಿದ್ಯುತ್ ಉತ್ಪಾದನಾ ಕಂಪನಿಗಳಿಗೆ ಹಂಚಿಕೆ ಮಾಡಲಾದ ಗಣಿಗಳು (ಕ್ಯಾಪ್ಟಿವ್‌) 71.61 ಲಕ್ಷ ಟನ್ ಕಲ್ಲಿದ್ದಲು ಉತ್ಪಾದಿಸಿವೆ.

ಕೋಲ್ ಇಂಡಿಯಾದ ಏಪ್ರಿಲ್ ತಿಂಗಳ ಕಲ್ಲಿದ್ದಲು ಉತ್ಪಾದನೆಯಲ್ಲಿ ಶೇ 6.02ರಷ್ಟು ಹೆಚ್ಚಳವಾಗಿದೆ. ಹಿಂದಿನ ಯಾವ ಏಪ್ರಿಲ್ ತಿಂಗಳಲ್ಲೂ ಇಷ್ಟು ಪ್ರಮಾಣದ ಉತ್ಪಾದನೆ ಆಗಿರಲಿಲ್ಲ. 2019ರಲ್ಲಿ ಗರಿಷ್ಠ 450.29 ಲಕ್ಷ ಟನ್ ಕಲ್ಲಿದ್ದಲು ಹೊರತೆಗೆಯಲಾಗಿತ್ತು. 2021–21ರಲ್ಲಿ 5,960 ಲಕ್ಷ ಟನ್ ಇದ್ದ ಸಂಸ್ಥೆಯ ಕಲ್ಲಿದ್ದಲು ಉತ್ಪಾದನೆಯು, 2021–22ರಲ್ಲಿ 6,220 ಲಕ್ಷ ಟನ್‌ಗೆ ತಲುಪಿದೆ.ಇದೇ ಅವಧಿಯಲ್ಲಿ ಸಿಂಗರೇಣಿ ಕಂಪನಿಯ ಉತ್ಪಾದನೆಯು ಶೇ 28ರಷ್ಟು ಏರಿಕೆಯಾಗಿದೆ. 500 ಲಕ್ಷ ಟನ್‌ನಿಂದ 650 ಲಕ್ಷ ಟನ್‌ಗೆ ಹೆಚ್ಚಳವಾಗಿದೆ. ಕ್ಯಾಪ್ಟಿವ್‌ ಗಣಿಗಳ ಉತ್ಪಾದನೆ690 ಲಕ್ಷ ಟನ್‌ನಿಂದ 890 ಲಕ್ಷ ಟನ್‌ಗೆ ಹೆಚ್ಚಳವಾಗಿದೆ.

ADVERTISEMENT

ಕಲ್ಲಿದ್ದಲಿಗೆ ಬೇಡಿಕೆ ಹೆಚ್ಚಾಗಿರುವ ಕಾರಣ, ಹೆಚ್ಚು ಪ್ರಮಾಣದ ಕಲ್ಲಿದ್ದಲನ್ನು ಸರಬರಾಜು ಮಾಡಲು ರೈಲ್ವೆ ಇಲಾಖೆಯು ತನ್ನ ಹಳೆಯ ಬೋಗಿಗಳನ್ನು ಸಜ್ಜುಗೊಳಿಸುತ್ತಿದೆ. ಕಲ್ಲಿದ್ದಲು ಗಣಿಗಳಿಂದ ವಿದ್ಯುತ್ ಉತ್ಪಾದನಾ ಘಟಕಗಳಿಗೆ ಕಲ್ಲಿದ್ದಲು ಸಾಗಿಸಲು ₹150 ಕೋಟಿ ವೆಚ್ಚದಲ್ಲಿ 2,179 ಬೋಗಿಗಳನ್ನು ದುರಸ್ತಿ ಮಾಡಲಾಗಿದೆ ಎಂದು ರೈಲ್ವೆ ತಿಳಿಸಿದೆ. ಕಲ್ಲಿದ್ದಲು ಸಾಗಿಸುವ ಸರಾಸರಿ ರೈಲುಗಳ ಸಂಖ್ಯೆಯನ್ನೂ ಹಚ್ಚಿಸಲಾಗಿದೆ. ಈಗ ಪ್ರತಿನಿತ್ಯ 400ಕ್ಕೂ ಹೆಚ್ಚು ಕಲ್ಲಿದ್ದಲು ಸಾಗಣೆ ರೈಲುಗಳು ಓಡಾಡುತ್ತಿದ್ದು, ಇತ್ತೀಚಿನ ವರ್ಷಗಳಲ್ಲೇ ಇದು ಅಧಿಕ ಎಂದು ಇಲಾಖೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.