ADVERTISEMENT

ಕೊಯಮತ್ತೂರಿನ ಸರಣಿ ಬಾಂಬ್ ಸ್ಫೋಟದ ಮಾಸ್ಟರ್ ಮೈಂಡ್ ಎಸ್‌. ಎ ಬಾಷಾ ಸಾವು

ಪಿಟಿಐ
Published 17 ಡಿಸೆಂಬರ್ 2024, 7:17 IST
Last Updated 17 ಡಿಸೆಂಬರ್ 2024, 7:17 IST
<div class="paragraphs"><p>ಸಾವು</p></div>

ಸಾವು

   

(ಪ್ರಾತಿನಿಧಿಕ ಚಿತ್ರ)

ಕೊಯಮತ್ತೂರು (ತಮಿಳುನಾಡು): ಕೊಯಮತ್ತೂರಿನಲ್ಲಿ ನಡೆದ 1998ರ ಸರಣಿ ಬಾಂಬ್ ಸ್ಫೋಟದ ಮಾಸ್ಟರ್ ಮೈಂಡ್, ಅಲ್‌–ಉಮ್ಮಾದ ಅಧ್ಯಕ್ಷ ಎಸ್‌. ಎ ಬಾಷಾ ವಯೋ ಸಹಜ ಖಾಯಿಲೆಯಿಂದ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಡಿಸೆಂಬರ್ 16ರ ಸಂಜೆ ಬಾಷಾ ಮೃತಪಟ್ಟಿದ್ದಾರೆ. ಅವರಿಗೆ 84 ವರ್ಷ ವಯಸ್ಸಾಗಿತ್ತು.

ಇಂದು (ಮಂಗಳವಾರ) ಸಂಜೆ ಅವರ ಅಂತ್ಯಕ್ರಿಯೆ ನಡೆಯಲಿದೆ. ಭದ್ರತೆಗಾಗಿ ನಗರದಲ್ಲಿ ಪೊಲೀಸ್‌ ಪಡೆಯನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

‘ಬಾಷಾ ಅವರು ಪೆರೋಲ್‌ ಮೇಲೆ ಹೊರಗಡೆ ಇದ್ದರು. ಅವರ ಆರೋಗ್ಯ ಹದಗೆಟ್ಟಿದ್ದರಿಂದ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆಗೆ ಸ್ಪಂದಿಸದೆ ಸೋಮವಾರ ಸಂಜೆ ಮೃತಪಟ್ಟಿದ್ದಾರೆ‘ ಎಂದು ಇಂಡಿಯನ್‌ ನ್ಯಾಷನಲ್‌ ಲೀಗ್‌ ಪಕ್ಷದ ನಾಯಕ ಜೆ. ರಹೀಮ್‌ ತಿಳಿಸಿದ್ದಾರೆ.

1998ರಲ್ಲಿ ಕೊಯಮತ್ತೂರಿನಲ್ಲಿ ನಡೆದ ಸರಣಿ ಸ್ಫೋಟಗಳಿಗೆ ಸಂಬಂಧಿಸಿದಂತೆ ಬಾಷಾ ಮತ್ತು ಇತರ 16 ಜನರಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿತ್ತು. ಇತ್ತೀಚೆಗಷ್ಟೇ ಬಾಷಾ ಅವರಿಗೆ ಮದ್ರಾಸ್‌ ಹೈಕೋರ್ಟ್‌ ಪೆರೋಲ್‌ ಮಂಜೂರು ಮಾಡಿತ್ತು.

ಬಾಷಾ ಅವರ ಕುಟುಂಬ ಸದಸ್ಯರು ದಕ್ಷಿಣ ಉಕ್ಕಡಂನಿಂದ ಹೈದರ್‌ ಅಲಿ ಟಿಪ್ಪು ಸುಲ್ತಾನ್‌ ಸುನ್ನತ್‌ ಜಮಾತ್‌ ಮಸೀದಿವರೆಗೆ ಮೆರವಣಿಗೆ ನಡೆಸಲು ಯೋಜಿಸಿದ್ದಾರೆ. ಈ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಲು ಪೊಲೀಸ್‌ ಪಡೆಯನ್ನು ನಿಯೋಜಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಾಷಾ ಅವರು ನಿಷೇಧಿತ ಸಂಘಟನೆ ಅಲ್‌–ಉಮ್ಮಾದ ಅಧ್ಯಕ್ಷರಾಗಿದ್ದು, 1998ರ ಫೆಬ್ರುವರಿ 14ರಂದು ಕೊಯಮತ್ತೂರಿನಲ್ಲಿ ನಡೆದ ಸರಣಿ ಬಾಂಬ್‌ ಸ್ಫೋಟದ ಮಾಸ್ಟರ್‌ ಮೈಂಡ್‌ ಆಗಿದ್ದಾರೆ. ಸ್ಫೋಟದಲ್ಲಿ 58 ಜನರು ಮೃತಪಟ್ಟಿದ್ದು, ಸುಮಾರು 231 ಜನರು ಗಾಯಗೊಂಡಿದ್ದರು. ಬಿಜೆಪಿಯ ಹಿರಿಯ ಮುಖಂಡ ಎಲ್‌.ಕೆ. ಅಡ್ವಾಣಿ ಅವರನ್ನು ಕೊಲ್ಲಲು ಸಂಚು ರೂಪಿಸಲಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.