ADVERTISEMENT

ಮುಂಬೈ: ಕುಸಿದ ಮೇಲ್ಸೇತುವೆಯನ್ನೇ ಉಗ್ರ ಕಸಬ್‌ ಬಳಸಿದ್ದ

ಏಜೆನ್ಸೀಸ್
Published 15 ಮಾರ್ಚ್ 2019, 4:56 IST
Last Updated 15 ಮಾರ್ಚ್ 2019, 4:56 IST
   

ಮುಂಬೈ:ನಗರದ ಛತ್ರಪತಿ ಶಿವಾಜಿ ಟರ್ಮಿನಲ್ಸ್‌ ಬಳಿ ಗುರುವಾರ ಸಂಜೆ ಕುಸಿದ ಮೇಲ್ಸೇತುವೆ, 26/11ರ ಮುಂಬೈ ದಾಳಿ ನಂತರ ಮತ್ತೆ ಸುದ್ದಿಯಾಗಿದೆ. ಈ ಸೇತುವೆಯನ್ನು ಉಗ್ರರಾದ ಕಸಬ್‌ ಮತ್ತು ಇಸ್ಮಾಯಿಲ್ ಖಾನ್‌ ಬಳಸಿದ್ದರು.

ಅಲ್ಲಿಂದ ನಂತರ ಈ ಸೇತುವೆಯನ್ನು ‘ಕಸಬ್‌ ಸೇತುವೆ’ ಎಂದೇ ಜನ ಕರೆಯುತ್ತಿದ್ದರು.

2008, ನವೆಂಬರ್‌ 26ರಂದು ಇಬ್ಬರು ಉಗ್ರರು ಎಕೆ–47 ಬಂದೂಕು ಹಿಡಿದುಛತ್ರಪತಿ ಶಿವಾಜಿ ಟರ್ಮಿನಲ್ಸ್‌ನ ಪ್ರಯಾಣಿಕ ಕೊಠಡಿಗೆ ಬಂದು ಮನಸ್ಸಿಗೆ ಬಂದಂತೆ ಗುಂಡು ಹಾರಿಸಿದರು. ಜೊತೆಗೆ ಜನ ಸಂದಣಿ ಇರುವೆಡೆ ಗ್ರನೈಡ್‌ ಎಸೆದಿದ್ದರು. ಇದರಿಂದ 58 ಮಂದಿ ಮೃತಪಟ್ಟಿದ್ದು, 104 ಮಂದಿ ಗಾಯಗೊಂಡಿದ್ದರು. ಆ ವೇಳೆ ಅವರು ಇದೇ ಮೇಲ್ಸೇತುವೆಯ ಮೂಲಕ ಪಕ್ಕದಲ್ಲಿನ ಕ್ಯಾಮ ಆಸ್ಪತ್ರೆಗೆ ತಲುಪಿದ್ದರು. ಈ ಚಿತ್ರ ಸುದ್ದಿ ಛಾಯಗ್ರಾಹಕ ಸೆಬಸ್ಟೀನ್‌ ಡಿಸೋಜ ಅವರ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.

ADVERTISEMENT

ಈ ದುರ್ಘಟನೆ ಮುಂಬೈನ ಹೆಚ್ಚು ಜನಸಂದಣಿಯ ಪ್ರದೇಶದಲ್ಲಿ, ಅದೂ ದಟ್ಟಣೆಯ ಅವಧಿಯಲ್ಲಿಯೇ ಘಟಿಸಿದೆ. ’ಬೆಳಿಗ್ಗೆ ಸೇತುವೆಯ ದುರಸ್ಥಿಕಾರ್ಯ ಪ್ರಗತಿಯಲ್ಲಿತ್ತು. ಹೀಗಿದ್ದೂ ಪಾದಚಾರಿಗಳು ಈ ಸೇತುವೆ ಬಳಸುತ್ತಿದ್ದರು’ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.

1984ರಲ್ಲಿ ಈ ಮೇಲ್ಸೇತುವೆಯನ್ನು ನಿರ್ಮಿಸಲಾಗಿದೆ. ಭಾರಿ ಮಳೆಗೆ ಅಂಧೇರಿಯಲ್ಲಿನ ಇದೇ ರೀತಿಯ 40 ವರ್ಷದ ಸೇತುವೆ ಕುಸಿದಿತ್ತು. ಅದಾದ ನಂತರ ಹಳೆ ಸೇತುವೆಗಳ ಸುರಕ್ಷಾ ತಪಾಸಣೆ ನಡೆಸಲು ಮಹಾರಾಷ್ಟ್ರ ಸರ್ಕಾರ ಆದೇಶಿಸಿತ್ತು. ಅದರಂತೆ 6 ತಿಂಗಳ ಹಿಂದೆ ಈ ಸೇತುವೆ ಬಳಕೆಗೆ ಯೋಗ್ಯವಾಗಿದೆ ಎಂದು ತಪಾಸಣೆ ನಡೆಸಿದ ಸಮಿತಿ ವರದಿ ನೀಡಿತ್ತು.

ಛತ್ರಪತಿ ಶಿವಾಜಿ ಟರ್ಮಿನಲ್ಸ್‌ ಯುನೆಸ್ಕೊ ವಿಶ್ವ ಪಾರಂಪರಿಕ ತಾಣವೂ ಹೌದು. ರೈಲ್ವೆ ಇಲಾಖೆಯ ಕೇಂದ್ರ ಕಚೇರಿಯೂ ಇದಾಗಿದೆ. 2500 ರೈಲುಗಳ ಸಂಚಾರ ಇರುವ ಈ ನಿಲ್ದಾಣದಲ್ಲಿ ಪ್ರತಿ ದಿನ ಇಲ್ಲಿ ಸುಮಾರು 7 ಲಕ್ಷ ಪ್ರಯಾಣಿಕರು ಪ್ರಯಾಣಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.