ಪಾಲ್ಘರ್: ಪುಣೆಯ ಇಂದ್ರಾಯಣಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ ಕಬ್ಬಿಣದ ಸೇತುವೆ ಅಪಾಯಕಾರಿ ಸೇತುವೆ ಎಂದು ಜಿಲ್ಲಾಧಿಕಾರಿ ಘೋಷಿಸಿದ್ದರು. ಅಲ್ಲದೇ ಸ್ಥಳದಲ್ಲಿ ಎಚ್ಚರಿಕೆ ಫಲಕಗಳನ್ನು ಹಾಕಲಾಗಿತ್ತು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಸೋಮವಾರ ಹೇಳಿದ್ದಾರೆ.
ಪಾಲ್ಘರ್‌ನ ಕಾರ್ಯಕ್ರಮವೊಂದರಲ್ಲಿ ದುರಂತದ ಬಗ್ಗೆ ಮಾತನಾಡಿದ ಫಡಣವೀಸ್, ‘ಹೊಸ ಸೇತುವೆ ನಿರ್ಮಾಣಕ್ಕೆ ಗುತ್ತಿಗೆ ನೀಡಿ, ಶೀಘ್ರವೇ ಕಾಮಗಾರಿ ಆರಂಭಿಸಲಾಗುವುದು’ ಎಂದು ತಿಳಿಸಿದ್ದಾರೆ.
ಮಾವಲ್ ತಾಲ್ಲೂಕಿನ ಕುಂದಾಮಲ ಬಳಿ ಇಂದ್ರಾಯಣಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ 32 ವರ್ಷಗಳ ಹಳೆಯ ಕಬ್ಬಿಣದ ಸೇತುವೆ ಭಾನುವಾರ ಮಧ್ಯಾಹ್ನ ಬಿದ್ದಿತ್ತು. ದುರ್ಘಟನೆಯಲ್ಲಿ ನಾಲ್ವರು ಮೃತಪಟ್ಟು 18 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಘಟನೆಗೂ ಮುನ್ನವೇ ಜಿಲ್ಲಾಧಿಕಾರಿಗಳು ಈ ಸೇತುವೆ ಅಪಾಯಕಾರಿ ಎಂದು ಘೋಷಿಸಿದ್ದರು. ಅಲ್ಲದೇ ಗ್ರಾಮಸ್ಥರು ಎಚ್ಚರಿಕೆ ಫಲಕಗಳನ್ನು ಸಹ ಹಾಕಿದ್ದರು. ಆದರೆ ಪ್ರವಾಸಿಗರಿಗೆ ಸೇತುವೆಯ ಸ್ಥಿತಿಯ ಗಂಭೀರತೆಯ ಬಗ್ಗೆ ತಿಳಿದಿರಲಿಲ್ಲ ಎಂದು ಅವರು ತಿಳಿಸಿದ್ದಾರೆ.
ಪುಣೆ ಜಿಲ್ಲೆಯಾದ್ಯಂತ ಸೇತುವೆಗಳು ಮತ್ತು ಜಲಮೂಲಗಳು ಸೇರಿದಂತೆ 500 ಅಪಾಯಕಾರಿ ಸ್ಥಳಗಳನ್ನು ಜಿಲ್ಲಾಡಳಿತವು ಗುರುತಿಸಿದೆ. ಈ ಬಗ್ಗೆ ಸೂಚನೆಗಳನ್ನು ನೀಡಲಾಗಿದೆ. ಕೆಲವು ಸ್ಥಳಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಗ್ರಾಮಸ್ಥರು ಸಹ ಜನರಿಗೆ ಎಚ್ಚರಿಕೆ ನೀಡುತ್ತಿದ್ದಾರೆ ಎಂದೂ ಅವರು ಹೇಳಿದ್ದಾರೆ.
ಕಬ್ಬಿಣದ ಸೇತುವೆ ಮುರಿದುಬಿದ್ದ ಇಂದ್ರಾಯಣಿ ನದಿಯಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯು(ಎನ್‌ಡಿಆರ್‌ಎಫ್) ಕಾರ್ಯಾಚರಣೆ ಸ್ಥಗಿತಗೊಳಿಸಿದ್ದರೂ ಪೊಲೀಸರು ಮತ್ತು ಸ್ಥಳೀಯರು ಸೋಮವಾರವೂ ಶೋಧ ಕಾರ್ಯ ನಡೆಸಿದರು.
ಸೇತುವೆ ಮೇಲೆ 100ಕ್ಕೂ ಹೆಚ್ಚು ಜನರಿದ್ದರು. ಕಳೆದ ಕೆಲವು ದಿನಗಳಿಂದ ಈ ಭಾಗದಲ್ಲಿ ಹೆಚ್ಚು ಮಳೆಯಾಗಿದ್ದರಿಂದ ನದಿಯಲ್ಲಿ ನೀರಿನ ಹರಿವೂ ಹೆಚ್ಚಾಗಿತ್ತು ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
51 ಜನರನ್ನು ರಕ್ಷಿಸಿದ್ದು, ಅದರಲ್ಲಿ 18 ಮಂದಿಗೆ ಗಂಭೀರ ಗಾಯಗಳಾಗಿವೆ ಎಂದು ಜಿಲ್ಲಾಡಳಿತ ತಿಳಿಸಿದೆ. ಬಹುತೇಕರು ಸೆಲ್ಫಿ ತಗೆಯುವುದರಲ್ಲೇ ಮಗ್ನರಾಗಿದ್ದರು. ಘಟನೆಯ ತನಿಖೆಗೆ ಸಮಿತಿ ರಚಿಸಲಾಗುವುದು ಎಂದು ಪುಣೆ ಜಿಲ್ಲಾಧಿಕಾರಿ ಜಿತೇಂದ್ರ ದೂಡಿ ಅವರು ತಿಳಿಸಿದ್ದಾರೆ. ಮಹಾರಾಷ್ಟ್ರ ಸಚಿವ ಗಿರೀಶ್ ಮಹಾಜನ್ ಸ್ಥಳಕ್ಕೆ ಭೇಟಿ ನೀಡಿದ್ದರು. ಪಾದಚಾರಿಗಳ ಸೇತುವೆ ಮೇಲೆ ದ್ವಿಚಕ್ರವಾಹನಗಳೂ ಸಂಚರಿಸಿದ್ದವು ಎಂದು ಸಚಿವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.