ADVERTISEMENT

ಪ್ರತ್ಯೇಕತಾವಾದಿಗಳು, ಉಗ್ರರ ಜತೆ ನಂಟು: ಖಾಸಗಿ ಕಾನೂನು ಕಾಲೇಜಿನ ಪ್ರಾಂಶುಪಾಲ ವಜಾ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2022, 9:01 IST
Last Updated 11 ಏಪ್ರಿಲ್ 2022, 9:01 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಶ್ರೀನಗರ: ಪ್ರತ್ಯೇಕತಾವಾದಿಗಳು ಹಾಗೂ ಭಯೋತ್ಪಾದನೆಯ ಜತೆ ನಂಟು ಹೊಂದಿದ ಆರೋಪದ ಮೇಲೆ ಇಲ್ಲಿನ ಖಾಸಗಿ ಕಾನೂನು ಕಾಲೇಜಿನ ಪ್ರಾಂಶುಪಾಲರೊಬ್ಬರನ್ನು ಆಡಳಿತ ಮಂಡಳಿ ವಜಾಗೊಳಿಸಿದೆ.

ಶ್ರೀನಗರದ ಕಾಶ್ಮೀರ್ ಕಾನೂನು ಕಾಲೇಜಿನ ಪ್ರಾಂಶುಪಾಲ ಪ್ರೊ.ಮೊಹಮ್ಮದ್‌ ಹುಸೇನ್‌ ವಜಾಗೊಂಡವರು. ಕಾಶ್ಮೀರದ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದ ಹುಸೇನ್‌ ಅವರು ನಿವೃತ್ತಿ ನಂತರ ಖಾಸಗಿ ಕಾನೂನು ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ‘ಸರ್ಕಾರದ ನಿರ್ದೇಶನದ ಮೇರೆಗೆ ಕಾಲೇಜಿನ ಆಡಳಿತ ಮಂಡಳಿಯು ಪ್ರೊ.ಹುಸೇನ್‌ ಅವರನ್ನು ಪ್ರಾಂಶುಪಾಲರ ಹುದ್ದೆಯಿಂದ ವಜಾಗೊಳಿಸಿದೆ’ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

‘ಪಿಂಚಣಿ ಸಂಬಂಧಿತ ಕಾನೂನಿನ ನಿಬಂಧನೆಗಳಡಿ ಪ್ರೊ.ಹುಸೇನ್‌ ವಿರುದ್ಧ ಅಧಿಕಾರಿಗಳು ಕ್ರಮ ಕೈಗೊಳ್ಳುವ ಸಾಧ್ಯತೆಯಿದ್ದು, ಪ್ರತ್ಯೇಕತಾವಾದಿಗಳ ರಹಸ್ಯ ಸಿದ್ಧಾಂತ ಹಾಗೂ ಹಿಂಸೆಯನ್ನು ಸಮರ್ಥಿಸುವ ಭಯೋತ್ಪಾದನೆಯ ಜಾಲದೊಂದಿಗೆ ನಂಟು ಹೊಂದಿರುವ ವಿಶ್ವಾಸಾರ್ಹ ಪುರಾವೆಗಳಿದ್ದರೆ ಪಿಂಚಣಿ ಸ್ಥಗಿತಗೊಳಿಸಲು ಕಾನೂನಿನಡಿ ಅವಕಾಶವಿದೆ’ ಎಂದು ಮೂಲಗಳು ತಿಳಿಸಿವೆ.

ADVERTISEMENT

2016ರಲ್ಲಿ ನವದೆಹಲಿಯ ಪ್ರೆಸ್‌ಕ್ಲಬ್‌ನಲ್ಲಿ ನಡೆದ ‘ಆಜಾದಿ’ –ದಿ ಓನ್ಲಿ ವೇ’ ಸಮಾವೇಶದಲ್ಲಿ ಪ್ರತ್ಯೇಕತಾವಾದಿ ಸಯ್ಯದ್‌ ಅಲಿ ಶಾ ಗಿಲಾನಿ, ಲೇಖಕಿ ಅರುಂಧತಿ ರಾಯ್‌ ಹಾಗೂ ಇತರರೊಂದಿಗೆ ಪಾಲ್ಗೊಂಡಿದ್ದ ಪ್ರೊ.ಹುಸೇನ್‌ ಅವರ ವಿರುದ್ಧ ಭಾರತ ವಿರೋಧಿ ಭಾಷಣ ಮಾಡಿದ್ದಾರೆ ಎಂಬ ಆರೋಪದ ಮೇಲೆ ದೆಹಲಿ ಪೊಲೀಸರು ಐಪಿಸಿ 124 ಎ (ದೇಶದ್ರೋಹ), 120 ಬಿ (ಅಪರಾಧ ಪಿತೂರಿ) ,149 ( ಕಾನೂನುಬಾಹಿರ ಸಭೆ) ಪ್ರಕರಣ ದಾಖಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.