ADVERTISEMENT

ಕ.ಸೋಫಿಯಾ ಬಗ್ಗೆ ವಿಜಯ್ ಶಾ ಹೇಳಿಕೆ 'ದೇಶವೇ ತಲೆ ತಗ್ಗಿಸುವ ವಿಚಾರ': ಸುಪ್ರೀಂ

ಪಿಟಿಐ
Published 19 ಮೇ 2025, 11:20 IST
Last Updated 19 ಮೇ 2025, 11:20 IST
   

ನವದೆಹಲಿ: ‘ಆಪರೇಷನ್ ಸಿಂಧೂರ’ ಕುರಿತು ಜಗತ್ತಿಗೆ ತಿಳಿಸಿದ್ದ ಕರ್ನಲ್ ಸೋಫಿಯಾ ಖುರೇಷಿ ಕುರಿತು ಮಧ್ಯಪ್ರದೇಶ ಸಚಿವ ವಿಜಯ್ ಶಾ ನೀಡಿದ್ದ ವಿವಾದಾತ್ಮಕ ಹೇಳಿಕೆಯು ರಾಷ್ಟ್ರವೇ ತಲೆ ತಗ್ಗಿಸುವಂತೆ ಮಾಡಿದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.

ಪ್ರಕರಣದ ಕುರಿತು ಹೆಚ್ಚಿನ ತನಿಖೆಗಾಗಿ ಮೂರು ಜನರ ವಿಶೇಷ ತನಿಖಾ ತಂಡ(ಎಸ್‌ಐಟಿ) ರಚಿಸಲು ಇಂದು (ಸೋಮವಾರ) ಆದೇಶ ನೀಡಿದೆ.

ಪ್ರಕರಣದ ವಿಚಾರಣೆ ಮಾಡುತ್ತಿರುವ ನ್ಯಾ. ಸೂರ್ಯಕಾಂತ್ ಹಾಗೂ ನ್ಯಾ. ಎನ್‌.ಕೋಟೀಶ್ವರ್ ಸಿಂಗ್ ಅವರ ದ್ವಿಸದಸ್ಯ ಪೀಠವು ‘ವಿವಾದಾತ್ಮಕ ಹೇಳಿಕೆ ನೀಡಿರುವ ವಿಡಿಯೊ ನೋಡಿದ್ದು, ನಿಮ್ಮ ಕ್ಷಮಾಪಣೆಯ ದಾಟಿಯು ‘ಮೊಸಳೆ ಕಣ್ಣೀರು ಅಥವಾ ಕಾನೂನಿನ ಹಿಡಿತದಿಂದ ತಪ್ಪಿಸಿಕೊಳ್ಳಲು ಮಾಡುತ್ತಿರುವ ನಾಟಕದಂತೆ ಕಾಣುತ್ತಿದೆ’ ಎಂದು ಆಕ್ಷೇಪಿಸಿದೆ.

ADVERTISEMENT

ಜನಪ್ರತಿನಿಧಿಗಳಿಗೆ ಭಾಷೆಯ ಮೇಲೆ ಹಿಡಿತವಿರಲಿ

ಕರ್ನಲ್ ಖುರೇಷಿ ಕುರಿತ ವಿವಾದಾತ್ಮಕ ಹೇಳಿಕೆಯಿಂದ ದೇಶವೇ ತಲೆ ತಗ್ಗಿಸುವಂತಾಗಿದೆ, ಬಳಸಿರುವ ಭಾಷೆಯೂ ಅಸಭ್ಯವಾಗಿದೆ. ಇಡೀ ದೇಶವೇ ಸೇನೆಯ ಬಗ್ಗೆ ಹೆಮ್ಮೆಪಡುತ್ತಿದೆ, ಈ ರೀತಿಯ ಹೇಳಿಕೆ ನೀಡಲು ನಿಮಗೆ ನಾಚಿಕೆಯಾಗಬೇಕು ಎಂದು ಸಚಿವ ವಿಜಯ್‌ ಶಾ ಅವರಿಗೆ ಸುಪ್ರೀಂ ಕೋರ್ಟ್ ಛೀಮಾರಿ ಹಾಕಿದೆ.

ಜನಪ್ರತಿನಿಧಿಯು ಸಾರ್ವಜನಿಕವಾಗಿ ಮಾತನಾಡುವಾಗ ಪ್ರತಿ ಶಬ್ದದ ಬಗ್ಗೆಯೂ ಎಚ್ಚರಿಕೆವಹಿಸಬೇಕು ಎಂದು ಅಭಿಪ್ರಾಯಪಟ್ಟಿತು.

ಪ್ರಕರಣದ ಕುರಿತು ಹೆಚ್ಚಿನ ವಿಚಾರಣೆಗಾಗಿ ಐ.ಜಿ ಮಟ್ಟದ ಮೂವರು ಅಧಿಕಾರಿಗಳಿರುವ ವಿಶೇಷ ತನಿಖಾ ತಂಡ ರಚಿಸುವಂತೆ ಮಧ್ಯಪ್ರದೇಶ ಡಿಜಿಪಿಗೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ.

ಕರ್ನಲ್ ಸೋಫಿಯಾ ಖುರೇಷಿ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ ನಂತರ, ಮಧ್ಯಪ್ರದೇಶ ಹೈಕೋರ್ಟ್ ಆದೇಶದಂತೆ ಇಂದೋರ್‌ನಲ್ಲಿ ಎಫ್‌ಐಆರ್‌ ದಾಖಲಾಗಿತ್ತು. ಇದನ್ನು ಪ್ರಶ್ನಿಸಿ, ಸಚಿವ ವಿಜಯ್ ಶಾ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.