ADVERTISEMENT

ವಲಸೆ ಕಾರ್ಮಿಕರಿಗೆ ಆಯೋಗ ರಚನೆ

ಉತ್ತರ ಪ್ರದೇಶ ಸರ್ಕಾರದ ನಿರ್ಧಾರ: ಕಾರ್ಮಿಕರು ಅಗತ್ಯವಿದ್ದರೆ ಇತರ ರಾಜ್ಯಗಳು ಅನುಮತಿ ಪಡೆಯುವುದು ಕಡ್ಡಾಯ

ಪಿಟಿಐ
Published 25 ಮೇ 2020, 20:30 IST
Last Updated 25 ಮೇ 2020, 20:30 IST
ಉತ್ತರ ಪ್ರದೇಶದಲ್ಲಿ ವಲಸೆ ಕಾರ್ಮಿಕರು
ಉತ್ತರ ಪ್ರದೇಶದಲ್ಲಿ ವಲಸೆ ಕಾರ್ಮಿಕರು   

ಲಖನೌ: ವಲಸೆ ಕಾರ್ಮಿಕರಿಗಾಗಿಯೇ ಪ್ರತ್ಯೇಕವಾದ ವಲಸೆ ಆಯೋಗ ಸ್ಥಾಪಿಸಲು ಉತ್ತರ ಪ್ರದೇಶ ಸರ್ಕಾರ ನಿರ್ಧರಿಸಿದೆ.

ಇತರ ರಾಜ್ಯಗಳಿಗೆ ಉತ್ತರ ಪ್ರದೇಶದಿಂದ ಕಾರ್ಮಿಕರು ಬೇಕಾಗಿದ್ದರೆ ಆಯೋಗದ ಅನುಮತಿಯನ್ನು ಪಡೆಯಬೇಕಾಗುತ್ತದೆ ಎಂದು ಸರ್ಕಾರ ಸ್ಪಷ್ಟವಾಗಿ ತಿಳಿಸಿದೆ.

ವಲಸೆ ಕಾರ್ಮಿಕರಿಗೆ ನೆರವಾಗುವ ನಿಟ್ಟಿನಲ್ಲಿ ಈ ಎರಡು ಅಂಶಗಳ ಕಾರ್ಯಸೂಚಿಯನ್ನು ಸಿದ್ಧಪಡಿಸಲಾಗಿದೆ ಎಂದು ಸರ್ಕಾರ ಪ್ರತಿಪಾದಿಸಿದೆ.

ADVERTISEMENT

‘ಲಾಕ್‌ಡೌನ್‌ ಸಂದರ್ಭದಲ್ಲಿ ಹಲವು ರಾಜ್ಯಗಳು ವಲಸೆ ಕಾರ್ಮಿಕರ ಬಗ್ಗೆ ಕಾಳಜಿ ವಹಿಸಿಲ್ಲ. ಈ ಕಾರ್ಮಿಕರು ನಮ್ಮ ರಾಜ್ಯದ ಬಹು ದೊಡ್ಡ ಸಂಪನ್ಮೂಲ. ಉತ್ತರ ಪ್ರದೇಶದಲ್ಲೇ ಈಗ ಅವರಿಗೆ ಉದ್ಯೋಗ ಕಲ್ಪಿಸಲಾಗುವುದು. ಇದಕ್ಕಾಗಿಯೇ ಆಯೋಗ ರಚಿಸಲಾಗುವುದು’ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ತಿಳಿಸಿದ್ದಾರೆ.

‘ವಲಸೆ ಕಾರ್ಮಿಕರ ಹಕ್ಕುಗಳನ್ನು ಕಾಪಾಡುವುದು ಮತ್ತು ಶೋಷಣೆ ತಡೆಯುವ ಕ್ರಮಗಳನ್ನು ಕೈಗೊಳ್ಳಲಾಗುವುದು. ವಿಮೆ, ಸಾಮಾಜಿಕ ಭದ್ರತೆ, ಮರು ಉದ್ಯೋಗಕ್ಕೆ ನೆರವು, ನಿರುದ್ಯೋಗ ಭತ್ಯೆ ಮುಂತಾದ ವಿಷಯಗಳ ಬಗ್ಗೆ ಆಯೋಗ ಪರಾಮರ್ಶಿಸಿ ಯೋಜನೆಗಳನ್ನು ರೂಪಿಸಲಿದೆ’ ಎಂದು ಹೇಳಿದ್ದಾರೆ.

ಖಚಿತ ಉದ್ಯೋಗ ಭದ್ರತೆ ಆಧಾರದ ಮೇಲೆಯೇ ಉತ್ತರ ಪ್ರದೇಶ ಸರ್ಕಾರ ಇತರ ರಾಜ್ಯಗಳಿಗೆ ಕಾರ್ಮಿಕರನ್ನು ಕರೆಯಿಸಿಕೊಳ್ಳಲು ಅನುಮತಿ ನೀಡಲು ಉದ್ದೇಶಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾರ್ಮಿಕರ ಕೌಶಲ ಕುರಿತು ಅಧ್ಯಯನ ಕಾರ್ಯ ನಡೆಯುತ್ತಿದೆ. ಇವರಲ್ಲಿ ಬಹುತೇಕ ಮಂದಿ ಫರ್ನಿಚರ್‌ ಮತ್ತು ಫಿಟ್ಟಿಂಗ್‌ ತಾಂತ್ರಿಕತೆ, ಕಟ್ಟಡ ಅಲಂಕಾರಿಕೆ, ಮನೆ ಕೆಲಸ, ಚಾಲಕ ವೃತ್ತಿ, ಎಲೆಕ್ಟ್ರಾನಿಕ್‌ ತಾಂತ್ರಿಕರು, ಗೃಹ ಬಳಕೆ ಮತ್ತು ಅಟೊಮೊಬೈಲ್‌ ತಾಂತ್ರಿಕರು, ಬ್ಯೂಟಿಷಿಯನ್‌ಗಳು, ಕರಕುಶಲ ವಸ್ತುಗಳ ತಯಾರಕರು, ಭದ್ರತಾ ಸಿಬ್ಬಂದಿಗಳಾಗಿ ಕಾರ್ಯನಿರ್ವಹಿಸಿದ್ದಾರೆ. ಸುಮಾರು 1.51 ಲಕ್ಷ ಮಂದಿ ರಿಯಲ್‌ ಎಸ್ಟೇಟ್‌ ವಲಯದಲ್ಲಿ ಕಾರ್ಯನಿರ್ವಹಿಸಿದ್ದು ಗೊತ್ತಾಗಿದೆ. ಇವರೆಲ್ಲರಿಗೂ ಭತ್ಯೆ ಸಮೇತ ತರಬೇತಿ ನೀಡಲು ಉದ್ದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.

ಭಾನುವಾರದವರೆಗೆ ಸುಮಾರು 25 ಲಕ್ಷ ವಲಸೆ ಕಾರ್ಮಿಕರು ಉತ್ತರ ಪ್ರದೇಶಕ್ಕೆ ಹಿಂತಿರುಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.