ADVERTISEMENT

ನಮೋ ಭಾರತ್‌: ಪ್ರೀಮಿಯಂ ಟಿಕೆಟ್‌ ದರ ಇಳಿಕೆ

ಪಿಟಿಐ
Published 16 ಜೂನ್ 2025, 15:29 IST
Last Updated 16 ಜೂನ್ 2025, 15:29 IST
‘ನಮೋ ಭಾರತ್’ ರೈಲು
‘ನಮೋ ಭಾರತ್’ ರೈಲು   

ನವದೆಹಲಿ: ‘ನಮೋ ಭಾರತ್‌’ ರೈಲಿನ ಪ್ರಯಾಣಿಕರು ನಿಗದಿತ ಟಿಕೆಟ್‌ ದರಕ್ಕಿಂತ ಶೇ 20ರಷ್ಟು ಹೆಚ್ಚು ಮೊತ್ತ ಪಾವತಿಸಿದರೆ ’ಪ್ರೀಮಿಯಂ’ ಕೋಚ್‌ನ ಸೌಲಭ್ಯಗಳನ್ನು ಪಡೆಯಬಹುದು ಎಂದು ರಾಷ್ಟ್ರ ರಾಜಧಾನಿ ಪ್ರಾದೇಶಿಕ ಸಾರಿಗೆ ಸಂಸ್ಥೆ (ಎನ್‌ಸಿಆರ್‌ಟಿಸಿ) ಹೇಳಿದೆ. 

‘ಪ್ರೀಮಿಯಂ‘ ಕೋಚ್‌ನ ಟಿಕೆಟ್‌ ದರವನ್ನು ‘ಎನ್‌ಸಿಆರ್‌ಟಿಸಿ’ ತಗ್ಗಿಸಿದ್ದು, ಪರಿಷ್ಕೃತ ದರದ ಅನ್ವಯ ‘ಸ್ಟ್ಯಾಂಡರ್ಡ್ ಕೋಚ್’ ಟಿಕೆಟ್‌ ದರ ₹100 ಇದ್ದರೆ, ಅದಕ್ಕೆ ಹೆಚ್ಚುವರಿ ₹20 ಪಾವತಿಸಿ, ಅದನ್ನು ಪ್ರೀಮಿಯಂ ಕೋಚ್‌ ಟಿಕೆಟ್‌ ಆಗಿ ಬದಲಿಸಿಕೊಳ್ಳಬಹುದು. 

ಪರಿಷ್ಕೃತ ದರದಂತೆ ನ್ಯೂ ಅಶೋಕ್‌ ನಗರ ಮತ್ತು ಮೀರಠ್ ನಡುವಿನ ಪ್ರಯಾಣ ದರವು ಸ್ಟ್ಯಾಂಡರ್ಡ್ ಕೋಚ್‌ಗೆ ₹150 ಇದ್ದರೆ, ಪ್ರೀಮಿಯಂ ಕೋಚ್‌ಗೆ ₹180 ಇರಲಿದೆ. ಗಾಜಿಯಾಬಾದ್‌ ಮತ್ತು ಆನಂದ್‌ ವಿಹಾರ್‌ ನಡುವೆ ಸ್ಟ್ಯಾಂಡರ್ಡ್ ಕೋಚ್‌ನ ಟಿಕೆಟ್‌ ದರ ₹40 ಇದ್ದರೆ ₹50ಕ್ಕೆ ಪ್ರೀಮಿಯಂ ಟಿಕೆಟ್‌ ಲಭಿಸಲಿದೆ. 

ADVERTISEMENT

‘ನಮೋ ಭಾರತ್‌’ ಅಪ್ಲಿಕೇಷನ್‌ ಅಥವಾ ‘ಎನ್‌ಸಿಎಂಸಿ’ ಕಾರ್ಡ್‌ ಬಳಸಿ ಕ್ಯೂಆರ್‌ ಟಿಕೆಟ್‌ ಕಾಯ್ದಿರಿಸುವ ಪ್ರಯಾಣಿಕರಿಗೆ ಲಾಯಲ್ಟಿ ಪಾಯಿಂಟ್ಸ್‌ ಕೊಡುಗೆಯನ್ನೂ ಎನ್‌ಸಿಆರ್‌ಟಿಸಿ ಪ್ರಕಟಿಸಿದೆ. 1 ಪಾಯಿಂಟ್‌ಗೆ 10 ಪೈಸೆಯಂತೆ, 300 ಪಾಯಿಂಟ್ಸ್‌ ಸೇರ್ಪಡೆಗೊಂಡಾಗ ಗ್ರಾಹಕರು ಅವನ್ನು ಟಿಕೆಟ್‌ ಖರೀದಿಗೆ  ಬಳಸಿಕೊಳ್ಳಬಹುದಾಗಿದೆ.  ‘ನಮೋ ಭಾರತ್‌‘ ಅಪ್ಲಿಕೇಷನ್‌ ಬಳಸಿ ಗ್ರಾಹಕರು ರೈಲು ನಿಲ್ದಾಣಗಳಲ್ಲಿ ವಾಹನ ನಿಲುಗಡೆ ಸೌಲಭ್ಯವನ್ನೂ ಪರಿಶೀಲಿಸಿಕೊಳ್ಳಬಹುದು’ ಎಂದು ಎನ್‌ಸಿಆರ್‌ಟಿಸಿ ಹೇಳಿದೆ. 

ಸದ್ಯ ನಮೋ ಭಾರತ್‌ ರೈಲುಗಳು ಅಶೋಕ್‌ ನಗರದಿಂದ ದಕ್ಷಿಣ ಮೀರಠ್ ನಡುವೆ 55 ಕಿ.ಮೀ. ಸಂಚರಿಸುತ್ತಿದ್ದು, ಈ ಮಾರ್ಗದಲ್ಲಿ 11 ನಿಲ್ದಾಣಗಳಿವೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.