ADVERTISEMENT

16 ವರ್ಷಗಳ ಪ್ರತ್ಯೇಕ ವಾಸ: ದಂಪತಿಗೆ ವಿಚ್ಛೇದನ ಮಂಜೂರು 

ದಂಪತಿ ನಡುವಿನ ಬಿರುಕು ಸರಿಪಡಿಸಲಾಗದ ಸ್ಥಿತಿ ತಲುಪಿದೆ– ಸುಪ್ರೀಂ ಕೋರ್ಟ್

​ಪ್ರಜಾವಾಣಿ ವಾರ್ತೆ
Published 17 ಜುಲೈ 2025, 16:22 IST
Last Updated 17 ಜುಲೈ 2025, 16:22 IST
ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌   

ನವದೆಹಲಿ: ‘ವಿವಾಹ ಸಂಸ್ಥೆಯು ಘನತೆ, ಪರಸ್ಪರ ಗೌರವ ಮತ್ತು ಹಂಚಿಕೆಯ ಒಡನಾಟದಲ್ಲಿ ಬೇರೂರಿದೆ. ಆದರೆ ಈ ಮೂಲಭೂತ ಅಂಶಗಳು ಸರಿಪಡಿಸಲಾಗದಂತಹ ಸ್ಥಿತಿ ತಲುಪಿದಾಗ, ದಂಪತಿಯನ್ನು ಒಂದಾಗಿರುವಂತೆ ಒತ್ತಾಯಿಸುವುದರಲ್ಲಿ ಯಾವುದೇ ಪ್ರಯೋಜನವಿಲ್ಲ’ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ಪತಿ– ಪತ್ನಿಯು 16 ವರ್ಷಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎಂಬುದನ್ನು ಗಮನಿಸಿದ ನ್ಯಾಯಮೂರ್ತಿಗಳಾದ ವಿಕ್ರಮ್‌ ನಾಥ್‌ ಮತ್ತು ಸಂದೀಪ್‌ ಮೆಹ್ತಾ ಅವರ ಪೀಠವು, ಸಂವಿಧಾನದ 142ನೇ ವಿಧಿಯ ಅಡಿಯಲ್ಲಿನ ಅಧಿಕಾರ ಬಳಸಿ ಅರ್ಜಿದಾರ ಪತಿಗೆ ವಿಚ್ಛೇದನ ಮಂಜೂರು ಮಾಡಿತು.

ದೀರ್ಘಕಾಲದಿಂದ ದೂರವಿರುವುದರ ಜತೆಗೆ ಈ ದಂಪತಿಯ ವೈವಾಹಿಕ ಜೀವನದಲ್ಲಿ ಸರಿಪಡಿಸಲಾಗದಷ್ಟು ಬಿರುಕು ಉಂಟಾಗಿದೆ. ಅದನ್ನು ಯಾವುದೇ ವಿಧಾನದಿಂದ ಸರಿಪಡಿಸಲು ಸಾಧ್ಯವಿಲ್ಲ ಎಂದು ಪೀಠ ಅಭಿಪ್ರಾಯಪಟ್ಟಿದೆ.

ADVERTISEMENT

2023ರ ಅಮುತಾ ವರ್ಸಸ್‌ ಎ.ಆರ್‌. ಸುಬ್ರಮಣಿಯಂ ಪ್ರಕರಣವನ್ನು ಉಲ್ಲೇಖಿಸಿದ ಪೀಠ, ‘ನಿರರ್ತಕ ವಿವಾಹವನ್ನು ಮುಂದುವರಿಸಲು ಒತ್ತಾಯಿಸುವುದು ಮಾನಸಿಕ ಯಾತನೆ ಮತ್ತು ಸಾಮಾಜಿಕ ಹೊರೆಯನ್ನು ಶಾಶ್ವತಗೊಳಿಸುತ್ತದೆ’ ಎಂದು ಹೇಳಿತು.   

ಅರ್ಜಿದಾರರು ಮತ್ತು ಅವರ ಪತ್ನಿಗೆ ಹಿಂದೂ ವಿಧಿವಿಧಾನಗಳ ಪ್ರಕಾರ 2008ರ ಮೇ 7ರಂದು ವಿವಾಹವಾಗಿತ್ತು. 2009ರ ಮಾರ್ಚ್‌ 25ರಂದು ಮಗು ಜನಿಸಿತು. ಇಬ್ಬರ ನಡುವಿನ ವೈವಾಹಿಕ ಜೀವನದಲ್ಲಿ ಬಿರುಕು ಮೂಡಿದ ಪರಿಣಾಮ 2009ರಿಂದ ಪ್ರತ್ಯೇಕವಾಗಿ ವಾಸಿಸಲು ಪ್ರಾರಂಭಿಸಿದರು. ಪತ್ನಿಯ ಆರೈಕೆಯಲ್ಲಿ ಮಗು ಉಳಿಯಿತು.

ವಿಚ್ಛೇದನ ಬಯಸಿ ಪತಿ ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿದ್ದರು. 2017ರ ನವೆಂಬರ್‌ 23ರಂದು ನ್ಯಾಯಾಲಯವು ಪತಿಯ ಅರ್ಜಿಯನ್ನು ವಜಾಗೊಳಿಸಿತ್ತು. ಈ ಕುರಿತು ಪತಿ ದೆಹಲಿ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದರು. ಆ ಅರ್ಜಿಯನ್ನು 2019ರ ಫೆಬ್ರುವರಿ 26ರಂದು ವಜಾಗೊಳಿಸಿದ ಹೈಕೋರ್ಟ್‌, ಕೌಟುಂಬಿಕ ನ್ಯಾಯಾಲದಯ ಆದೇಶವನ್ನು ಎತ್ತಿಹಿಡಿಯಿತು.

ಇದನ್ನು ಪ್ರಶ್ನಿಸಿ ಪತಿ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದರು. ಪತಿ ಮತ್ತು ಅವರ ಕುಟುಂಬದವರ ವಿರುದ್ಧ ಪತ್ನಿ ಮಾಡಿದ್ದ ವರದಕ್ಷಿಣೆ ಕಿರುಕುಳ ಮತ್ತು ಕ್ರೌರ್ಯದ ಪ್ರಕರಣದಲ್ಲಿ ಅವರು ಖುಲಾಸೆ ಆಗಿರುವುದನ್ನು ಸುಪ್ರೀಂ ಪೀಠ ಗಮನಿಸಿತು. 

ಪತಿ ಮತ್ತು ಅವರ ಕುಟುಂಬದ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿ ಹೋರಾಡಿದ ಸಂಗಾತಿಯ ಜತೆಗೆ ವೈವಾಹಿಕ ಜೀವನದ ಮುಂದುವರಿಸುವುದನ್ನು ನಿರೀಕ್ಷಿಸಲು ಆಗುವುದಿಲ್ಲ ಎಂದ ಪೀಠವು, ಪತಿ– ಪತ್ನಿ ಮತ್ತು ಅವರ ಅಪ್ರಾಪ್ತ ವಯಸ್ಸಿನ ಮಗುವಿನ ಹಿತದೃಷ್ಟಿಯಿಂದ ವಿಚ್ಛೇದನ ಮಂಜೂರು ಮಾಡಿತು.

ಜೀವನಾಂಶ ಹೆಚ್ಚಳ: ವಿಚ್ಛೇದನ ಪಡೆದ ವ್ಯಕ್ತಿ ಖಾಸಗಿ ಸಂಸ್ಥೆಯಲ್ಲಿ ಗುಮಾಸ್ತರಾಗಿದ್ದು, ಅವರ ಪ್ರತಿವಾದಿ ಗೃಹಿಣಿಯಾಗಿದ್ದಾರೆ. 16 ವರ್ಷದ ಮಗು ತಾಯಿಯ ಪೋಷಣೆಯಲ್ಲಿದೆ. ಕೌಟುಂಬಿಕ ನ್ಯಾಯಾಲಯವು ಪತ್ನಿ ಮತ್ತು ಮಗುವಿಗೆ ಮಾಸಿಕ ಜೀವನಾಂಶವನ್ನು ₹ 7,500 ನಿಗದಿಪಡಿಸಿತ್ತು. ಸುಪ್ರೀಂ ಕೋರ್ಟ್‌ ಈ ಜೀವನಾಂಶವನ್ನು ತಿಂಗಳಿಗೆ ₹ 15,000ಕ್ಕೆ ಹೆಚ್ಚಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.