ADVERTISEMENT

ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕಡ್ಡಾಯ ಸೇವೆಯಿಂದ ಹಕ್ಕುಗಳಿಗೆ ಧಕ್ಕೆಯಿಲ್ಲ

ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ದುಡಿಯಲೇಬೇಕು: ಸುಪ್ರೀಂ ಕೋರ್ಟ್

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2019, 2:14 IST
Last Updated 21 ಆಗಸ್ಟ್ 2019, 2:14 IST
   

ನವದೆಹಲಿ:‘ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಸ್ನಾತಕೋತ್ತರ ಪದವಿ ಮತ್ತು ಸೂಪರ್ ಸ್ಪೆಷಾಲಿಟಿ ಕೋರ್ಸ್‌ ಪೂರೈಸುವ ವೈದ್ಯಕೀಯ ವಿದ್ಯಾರ್ಥಿಗಳಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಕಡ್ಡಾಯ ಸೇವೆಯ ನಿರ್ಬಂಧ ವಿಧಿಸುವುದರಿಂದ ಅವರ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುವುದಿಲ್ಲ’ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ಪಶ್ಚಿಮ ಬಂಗಾಳದಲ್ಲಿ ಜಾರಿಯಲ್ಲಿರುವ ಕಡ್ಡಾಯ ಸೇವೆಯ ವಿರುದ್ಧ ವೈದ್ಯಕೀಯ ವಿದ್ಯಾರ್ಥಿಗಳ ಸಂಘಟನೆಯು ಅರ್ಜಿ ಸಲ್ಲಿಸಿತ್ತು.ಈ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಎಲ್. ನಾಗೇಶ್ವರ ರಾವ್ ಮತ್ತು ಹೇಮಂತ್ ಗುಪ್ತಾ ಅವರಿದ್ದ ಪೀಠವು ವಜಾ ಮಾಡಿದೆ. ಆಂಧ್ರಪ್ರದೇಶ, ಕರ್ನಾಟಕ, ಗೋವಾ, ಗುಜರಾತ್, ಹಿಮಾಚಲ ಪ್ರದೇಶ, ಕೇರಳ, ಮಹಾರಾಷ್ಟ್ರ, ಒಡಿಶಾ, ರಾಜಸ್ಥಾನ, ತಮಿಳುನಾಡು ಮತ್ತು ತೆಲಂಗಾಣದಲ್ಲೂ ಕಡ್ಡಾಯ ಸೇವೆ ಜಾರಿಯಲ್ಲಿದೆ.

ಕಡ್ಡಾಯ ಸೇವೆಯಿಂದ ವ್ಯಕ್ತಿಗಳ ಮೂಲಭೂತ ಹಕ್ಕಿನ ಉಲ್ಲಂಘನೆಯಾಗುತ್ತದೆ ಎಂದು ಅರ್ಜಿದಾರರ ಪರ ವಕೀಲರು ವಾದ ಮಂಡಿಸಿದರು. ಈ ವಾದವನ್ನು ಮನ್ನಿಸಿದರೂ, ಪೀಠವು ಸಾರ್ವಜನಿಕ ಹಿತಾಸಕ್ತಿಗೇ ಆದ್ಯತೆ ಸಿಗಬೇಕು ಎಂದು ಅಭಿಪ್ರಾಯಪಟ್ಟಿದೆ.

ADVERTISEMENT

‘ಸಾರ್ವಜನಿಕರ ಹಿತಾಸಕ್ತಿ ಮತ್ತು ವ್ಯಕ್ತಿಯ ಮೂಲಭೂತ ಹಕ್ಕುಗಳ ನಡುವಣ ಸಂಘರ್ಷವಿದು. ಸರ್ಕಾರದ ಕಡ್ಡಾಯ ಸೇವೆಯ ನಿರ್ಬಂಧದಿಂದ ತಮ್ಮ ವೃತ್ತಿಬದುಕಿಗೆ ತೊಡಕಾಗುತ್ತದೆ ಎಂಬುದು ಅರ್ಜಿದಾರರ ವಾದ. ಆದರೆ ವೈಯಕ್ತಿಕ ಹಿತಾಸಕ್ತಿ ಮತ್ತು ಸಾರ್ವಜನಿಕ ಹಿತಾಸಕ್ತಿಯ ಮಧ್ಯೆ, ಸಾರ್ವಜನಿಕ ಹಿತಾಸಕ್ತಿಗೇ ಆದ್ಯತೆ ನೀಡಬೇಕಾಗುತ್ತದೆ’ ಎಂದು ಪೀಠವು ಹೇಳಿದೆ.

‘ಉತ್ತಮ ವೇತನ ಸಹಿತ ಅಲ್ಪಾವಧಿಯ ಕಡ್ಡಾಯ ಸೇವೆ ಮಾಡಲು ತಕರಾರು ಮಾಡಬಾರದು’ ಎಂದು ಪೀಠವು ಹೇಳಿದೆ.

* ಸಂವಿಧಾನದ 21ನೇ ವಿಧಿಯಲ್ಲಿ ನೀಡಲಾಗಿರುವ ಗೌರವಯುತ ಜೀವನ ನಡೆಸುವ ಹಕ್ಕಿಗೆ, ಕಡ್ಡಾಯ ಸೇವೆಯ ನಿರ್ಬಂಧದಿಂದ ಧಕ್ಕೆಯಾಗುತ್ತದೆ

-ಅರ್ಜಿದಾರರ ಪರ ವಕೀಲ

* ಜನಸಾಮಾನ್ಯರಿಗೂ ಅತ್ಯುತ್ತಮ ಗುಣಮಟ್ಟದ ವೈದ್ಯಕೀಯ ಸೇವೆ ಸಿಗಲಿ ಎಂಬ ಏಕಮಾತ್ರ ಉದ್ದೇಶದಿಂದ ಸರ್ಕಾರವು ಇಂತಹ ನೀತಿಯನ್ನು ಜಾರಿಗೆ ತಂದಿದೆ

-ಪಶ್ಚಿಮ ಬಂಗಾಳ ಸರ್ಕಾರದ ಪರ ವಕೀಲ

* ಸಹಾಯಧನ ಸಹಿತ ಮತ್ತು ಎಲ್ಲಾ ಸ್ವರೂಪದ ಸವಲತ್ತುಗಳ ಸಹಿತ ಶಿಕ್ಷಣ ಪಡೆದುಕೊಂಡು, ಆನಂತರದ ಕಡ್ಡಾಯ ಸೇವೆಯನ್ನು ‘ಬಲವಂತದ ದುಡಿಮೆ’ ಎನ್ನಲಾಗದು

-ಸುಪ್ರೀಂ ಕೋರ್ಟ್‌ ಪೀಠ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.