ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ.ಆರ್. ಗವಾಯಿ
–ಪಿಟಿಐ ಚಿತ್ರ
ನವದೆಹಲಿ: ಸುಪ್ರೀಂ ಕೋರ್ಟ್ ನೇಮಿಸಿರುವ ಕೇಂದ್ರ ಉನ್ನತಾಧಿಕಾರ ಸಮಿತಿಯಲ್ಲಿನ (ಸಿಇಸಿ) ‘ಹಿತಾಸಕ್ತಿ ಸಂಘರ್ಷವು’ವು, ಅರಣ್ಯ ಸಂರಕ್ಷಣೆ ತಿದ್ದುಪಡಿ ಕಾಯ್ದೆ (ಎಫ್‌ಸಿಎಎ) ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳಿಗೆ ಸಂಬಂಧಿತ ತೀರ್ಪಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು ಎಂದು 60ಕ್ಕೂ ಹೆಚ್ಚು ಮಾಜಿ ಅಧಿಕಾರಿಗಳು ಆತಂಕಪಟ್ಟಿದ್ದಾರೆ.
60ಕ್ಕೂ ಅಧಿಕ ಮಾಜಿ ನಾಗರಿಕ ಸೇವಾ ಅಧಿಕಾರಿಗಳು ಈ ಬಗ್ಗೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರಿಗೆ ಬಹಿರಂಗ ಪತ್ರವನ್ನು ಬರೆದಿದ್ದಾರೆ. ಮಾಜಿ ಕಾರ್ಯದರ್ಶಿಗಳು, ರಾಯಭಾರಿಗಳು, ಪೊಲೀಸ್ ಇಲಾಖೆಗಳ ವರಿಷ್ಠರು, ನಿವೃತ್ತ ಅರಣ್ಯಾಧಿಕಾರಿಗಳು ಪತ್ರಕ್ಕೆ ಸಹಿ ಹಾಕಿದ್ದಾರೆ.
ಸುಪ್ರೀಂ ಕೋರ್ಟ್‌ನ ನೇಮಿಸಿರುವ ಸಿಇಸಿಯಲ್ಲಿ ಸದ್ಯ ಮೂವರು ಮಾಜಿ ಐಎಫ್‌ಎಸ್ ಅಧಿಕಾರಿಗಳು, ಪರಿಸರ ಸಚಿವಾಲಯದಲ್ಲಿ ಹಲವು ವರ್ಷ ಕಾರ್ಯನಿರ್ವಹಿಸಿದ್ದ ನಿವೃತ್ತ ವಿಜ್ಞಾನಿ ಇದ್ದಾರೆ. ವಿಷಯ ಪರಿಣತರು ಈ ಸಮಿತಿಯಲ್ಲಿ ಇಲ್ಲ. 2002ರಲ್ಲಿ ಸಿಇಸಿ ಅಸ್ತಿತ್ವಕ್ಕೆ ಬಂತು. 2023ರವರೆಗೂ ಸದಸ್ಯರ ಆಯ್ಕೆಯಲ್ಲಿ ಸಮತೋಲನ ಕಾಯ್ದುಕೊಳ್ಳಲಾಗಿತ್ತು. ಈಗ ಆ ರೀತಿ ಇಲ್ಲ ಎಂದು ಪತ್ರದಲ್ಲಿ ಆಕ್ಷೇಪಿಸಿದ್ದಾರೆ.
‘ಸಮಿತಿಯ ಇಬ್ಬರು ಅಧಿಕಾರಿಗಳು ಪರಿಸರ, ಅರಣ್ಯ ಸಚಿವಾಲಯದಲ್ಲಿ ಉನ್ನತ ಹುದ್ದೆಯಲ್ಲಿ ಇದ್ದವರು. ನೀತಿ ರಚನೆಯಲ್ಲಿ ಭಾಗಿ ಆಗಿದ್ದವರು. ಇವರು, ಸುಪ್ರೀಂ ಕೋರ್ಟ್‌ಗೆ ಸ್ವತಂತ್ರವಾದ ಅಭಿಪ್ರಾಯ ನೀಡುವ ಸಾಧ್ಯತೆಗಳಿಲ್ಲ. ಈಗಾಗಲೇ ಸರ್ಕಾರಕ್ಕೆ ನೀಡಿರುವ ಸಲಹೆಗಳಿಗಿಂತ ಭಿನ್ನವಾದದ್ದನ್ನೂ ನೀಡಲು ಸಾಧ್ಯವಿಲ್ಲ’ ಎಂದು ಅಭಿಪ್ರಾಯಪಟ್ಟಿದ್ದಾರೆ.
ಸಿಇಸಿಯಲ್ಲಿ ಪ್ರಸ್ತುತ ಇರುವ ಸದಸ್ಯರನ್ನು ಪರಿಗಣಿಸಿದರೆ ಹಿತಾಸಕ್ತಿ ಸಂಘರ್ಷ ಇರುವುದು ಸ್ಪಷ್ಟ. ಅರಣ್ಯ ಮತ್ತು ಪರಿಸರಕ್ಕೆ ಸಂಬಂಧಿಸಿದ ಪ್ರಮುಖ ಪ್ರಕರಣಗಳಲ್ಲಿ ಅಂತಿಮ ತೀರ್ಮಾನಕ್ಕೆ ಬರುವ ಮುನ್ನ ಸುಪ್ರೀಂ ಕೋರ್ಟ್ ಸಿಇಸಿ ವರದಿಯನ್ನು ಪರಿಗಣಿಸುತ್ತದೆ. ಈಗಿನ ಸನ್ನಿವೇಶದಲ್ಲಿ ಸಿಇಸಿ ವರದಿಗಳು ವ್ಯತಿರಿಕ್ತ ಪರಿಣಾಮ ಉಂಟುಮಾಡುವ ಆತಂಕವಿದೆ ಎಂದಿದ್ದಾರೆ.
ಇಂಥ ಪರಿಣಾಮವು ಈಗಾಗಲೇ ಮಹಾರಾಷ್ಟ್ರದ ‘ಝುಡ್ಪಿ ಅರಣ್ಯ’ ಕುರಿತ ಇತ್ತೀಚಿನ ಸುಪ್ರೀಂ ಕೋರ್ಟ್ ಆದೇಶದಲ್ಲಿ ವ್ಯಕ್ತವಾಗಿದೆ ಎಂದು ಮಾಜಿ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ಈ ಕಾರಣದಿಂದ ಎಫ್‌ಸಿಎಎ ಪ್ರಶ್ನಿಸಿರುವ ಅರ್ಜಿಗಳು ಅಥವಾ ಅರಣ್ಯ, ವನ್ಯಜೀವಿ ಮತ್ತು ಪರಿಸರ ಭದ್ರತೆಗೆ ಸಂಬಂಧಿಸಿದಂತೆ ಯಾವುದೇ ಸಲಹೆಗಳನ್ನು ನೀಡಲು ಸಿಇಸಿಗೆ ಅವಕಾಶ ನೀಡಬಾರದು ಎಂದು ಮಾಜಿ ಅಧಿಕಾರಿಗಳು ಮುಖ್ಯ ನ್ಯಾಯಮೂರ್ತಿಯವರಿಗೆ ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.