ADVERTISEMENT

ಕೋವಿಡ್ ಸಾವಿನ ಸಂಖ್ಯೆ ಮರೆಮಾಚಿದ ಬಿಜೆಪಿ: ಕಾಂಗ್ರೆಸ್ ಆರೋಪ

ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ರಾಜಸ್ಥಾನ ಸಿ.ಎಂಗಳ ವಿರುದ್ಧ ನ್ಯಾಯಾಂಗ ತನಿಖೆಗೆ ಆಗ್ರಹ

ಪಿಟಿಐ
Published 12 ಜೂನ್ 2021, 16:00 IST
Last Updated 12 ಜೂನ್ 2021, 16:00 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಮಧ್ಯಪ್ರದೇಶ, ಉತ್ತರ ಪ್ರದೇಶ ಮತ್ತು ಗುಜರಾತ್‌ ರಾಜ್ಯಗಳಲ್ಲಿ ಕೋವಿಡ್‌ನಿಂದ ಸಾವಿಗೀಡಾದವರ ಸಂಖ್ಯೆಯನ್ನು ಬಿಜೆಪಿ ಮರೆಮಾಚಿದೆ ಎಂದು ಶನಿವಾರ ಆರೋಪಿಸಿರುವ ಕಾಂಗ್ರೆಸ್, ಈ ರಾಜ್ಯಗಳ ಮುಖ್ಯಮಂತ್ರಿಗಳು ರಾಜೀನಾಮೆ ನೀಡಬೇಕು ಹಾಗೂ ಈ ಬಗ್ಗೆ ನ್ಯಾಯಾಂಗ ತನಿಖೆ ನಡೆಯಬೇಕು ಎಂದೂ ಆಗ್ರಹಿಸಿದೆ.

‘ಈ ರಾಜ್ಯಗಳ ಮುಖ್ಯಮಂತ್ರಿಗಳಿಗೆ ತಮ್ಮ ಸ್ಥಾನಗಳಲ್ಲಿ ಮುಂದುವರಿಯಲು ಯಾವುದೇ ನೈತಿಕ ಹಕ್ಕಿಲ್ಲ’ ಎಂದು ಕಾಂಗ್ರೆಸ್ ವಕ್ತಾರ ಪವನ್ ಖೇರಾ ಅವರು ಆನ್‌ಲೈನ್‌ನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದಾರೆ.

‘ಮಧ್ಯಪ್ರದೇಶದಲ್ಲಿ ಮೇ ತಿಂಗಳಲ್ಲಿ 1.7 ಲಕ್ಷ ಸಾವು ಸಂಭವಿಸಿವೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಆದರೆ, ಸರ್ಕಾರದ ಅಂಕಿ–ಅಂಶಗಳಲ್ಲಿ ಕಡಿಮೆ ಸಾವಿನ ಸಂಖ್ಯೆ ವರದಿಯಾಗಿದೆ. ಎಂದಿಗೂ ನೋಡದ, ಕೇಳದ ಸತ್ಯ ನಮ್ಮ ಮುಂದಿದೆ. ಮೇ ತಿಂಗಳಲ್ಲಿ ವರದಿಯಾದ ಸಾವಿನ ಸಂಖ್ಯೆಯು 6 ತಿಂಗಳಲ್ಲಿ ವರದಿಯಾದ ಸಾವುಗಳಿಗೆ ಸಮಾನವಾಗಿದೆ. ಇದಕ್ಕೆ ಯಾರು ಜವಾಬ್ದಾರರು ಎಂದು ಪ್ರಧಾನಿ ಮತ್ತು ಮಧ್ಯಪ್ರದೇಶದ ಮುಖ್ಯಮಂತ್ರಿ ಅವರು ಹೇಳಬೇಕು’ ಎಂದು ಕಾಂಗ್ರೆಸ್‌ನ ಮುಖ್ಯ ವಕ್ತಾರ ರಣದೀಪ್ ಸುರ್ಜೆವಾಲಾ ಒತ್ತಾಯಿಸಿದರು.

ADVERTISEMENT

‘ಗುಜರಾತ್‌ನಲ್ಲಿ ಏಪ್ರಿಲ್ 10ರಿಂದ ಮೇ 9ರ ಅವಧಿಯಲ್ಲಿ ಸಾವಿಗೀಡಾದವರ ಸಂಖ್ಯೆ 3,578 ಎಂದು ಸರ್ಕಾರಿ ಅಂಕಿ–ಅಂಶಗಳು ತಿಳಿಸಿವೆ. ಆದರೆ, ಇದೇ ಅವಧಿಯಲ್ಲಿ ಅಹಮದಾಬಾದ್‌ನ ಸರ್ಕಾರಿ ಆಸ್ಪತ್ರೆಯೊಂದರಲ್ಲೇ 3,416 ಮಂದಿ ಸಾವಿಗೀಡಾಗಿದ್ದಾರೆ. ಮಾರ್ಚ್ 1ರಿಂದ ಮೇ 10ರೊಳಗೆ ಗುಜರಾತ್‌ನ 33 ಜಿಲ್ಲೆಗಳ 8 ಪಾಲಿಕೆಗಳ ವ್ಯಾಪ್ತಿಯಲ್ಲಿ ಒಟ್ಟು 1.23ಲಕ್ಷ ಮರಣ ಪ್ರಮಾಣಪತ್ರಗಳನ್ನು ನೀಡಲಾಗಿದೆ.ಉತ್ತರ ಪ್ರದೇಶದಲ್ಲಿ ಜನವರಿಯಿಂದ ಮೇ ತಿಂಗಳ ಅವಧಿಯಲ್ಲಿ ಸಾವಿನ ಸಂಖ್ಯೆ 1.90 ಲಕ್ಷ ಆಗಿದೆ’ ಎಂದೂ ಪವನ್ ಖೇರಾ ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.