ADVERTISEMENT

ಕೋವಿಡ್‌: ನ್ಯಾಯಾಂಗ ತನಿಖೆಗೆ ಕಾಂಗ್ರೆಸ್‌ ಆಗ್ರಹ

ಎರಡನೇ ಅಲೆಗೆ ಮುನ್ನ ಸುಳ್ಳು ಮಾಹಿತಿ ಒದಗಿಸಿದ ಕೇಂದ್ರ ಸರ್ಕಾರ: ಆರೋಪ

ಪಿಟಿಐ
Published 16 ಸೆಪ್ಟೆಂಬರ್ 2021, 17:01 IST
Last Updated 16 ಸೆಪ್ಟೆಂಬರ್ 2021, 17:01 IST
.
.   

ನವದೆಹಲಿ: ಕೋವಿಡ್‌–19 ಎರಡನೇ ಅಲೆಗೆ ಮುನ್ನ ಎಲ್ಲವೂ ಸಹಜ ಸ್ಥಿತಿಯಲ್ಲಿದೆ ಎನ್ನುವಂತೆ ಕೇಂದ್ರ ಸರ್ಕಾರ ಸುಳ್ಳು ಮಾಹಿತಿ ಬಿಂಬಿಸಿದ್ದು, ಈ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್‌ ಆಗ್ರಹಿಸಿದೆ.

ಈ ಬಗ್ಗೆ ‘ನ್ಯೂಯಾರ್ಕ್‌ ಟೈಮ್ಸ್‌’ನಲ್ಲಿ ಪ್ರಕಟವಾದ ವರದಿಯನ್ನು ಕಾಂಗ್ರೆಸ್‌ ಉಲ್ಲೇಖಿಸಿದೆ. ಕೋವಿಡ್‌–19ಗೆ ಸಂಬಂಧಿಸಿದಂತೆ ಮಾಹಿತಿ ನೀಡುವಲ್ಲಿ ರಾಜಕೀಯ ಹಸ್ತಕ್ಷೇಪ ನಡೆದಿರುವ ಬಗ್ಗೆ ಮಾಜಿ ವಿಜ್ಞಾನಿಗಳ ಹೇಳಿಕೆಯನ್ನು ವರದಿಯಲ್ಲಿ ಉಲ್ಲೇಖವಾಗಿರುವುದನ್ನು ಪಕ್ಷವು ಪ್ರಸ್ತಾಪಿಸಿದೆ.

‘ಇದೊಂದು ಗಂಭೀರವಾದ ವಿಷಯ. ಸುಪ್ರೀಂ ಕೋರ್ಟ್‌ ಅಥವಾ ಹೈಕೋರ್ಟ್‌ನ ಹಾಲಿ ನ್ಯಾಯಮೂರ್ತಿಗಳಿಂದ ತನಿಖೆ ನಡೆಸಬೇಕು’ ಎಂದು ಕಾಂಗ್ರೆಸ್‌ ವಕ್ತಾರ ಅಜಯ್‌ ಮಾಕನ್‌ ಆಗ್ರಹಿಸಿದ್ದಾರೆ.

ADVERTISEMENT

‘ರಾಜಕೀಯ ಹಸ್ತಕ್ಷೇಪದಿಂದಾಗಿಯೇ ಸುಳ್ಳು ಮಾಹಿತಿ ನೀಡಲಾಯಿತು ಮತ್ತು ದೇಶದಲ್ಲಿ ಎಲ್ಲವೂ ಸಹಜ ಸ್ಥಿತಿಯಲ್ಲಿದೆ ಎನ್ನುವಂತೆ ಬಿಂಬಿಸಲಾಯಿತು ಎಂದು ಐಸಿಎಂಆರ್‌ನ ಮಾಜಿ ವಿಜ್ಞಾನಿಗಳು ಬಹಿರಂಗ ಹೇಳಿಕೆ ನೀಡಿದ್ದಾರೆ. ಹೀಗಾಗಿ, ಪ್ರಧಾನಿ ನರೇಂದ್ರ ಮೋದಿ, ಕೇಂದ್ರದ ಮಾಜಿ ಆರೋಗ್ಯ ಸಚಿವ ಹರ್ಷ ವರ್ಧನ್‌ ಮತ್ತು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್‌) ಹಿರಿಯ ಅಧಿಕಾರಿಗಳ ವಿರುದ್ಧ ಕ್ರಿಮಿನಲ್‌ ತನಿಖೆ ನಡೆಸಬೇಕು’ ಎಂದು ಒತ್ತಾಯಿಸಿದ್ದಾರೆ.

‘ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳದ ಕಾರಣ ರಾಜ್ಯ ಸರ್ಕಾರಗಳು ಸಹ ಯಾವುದೇ ಸಿದ್ಧತೆಗಳನ್ನು ಕೈಗೊಳ್ಳಲಿಲ್ಲ. ಇದರಿಂದಾಗಿ, ಎರಡನೇ ಅಲೆಯಲ್ಲಿ ಅಪಾರ ಸಂಖ್ಯೆಯಲ್ಲಿ ಸಾವುಗಳು ಸಂಭವಿಸಿವೆ. ಸುಳ್ಳು ಮಾಹಿತಿ ಪ್ರಕಟವಾಗದೇ ಇದ್ದರೆ ಹಲವಾರು ಜೀವಗಳನ್ನು ಉಳಿಸಬಹುದಿತ್ತು’ ಎಂದು ಹೇಳಿದ್ದಾರೆ.

ವರದಿ ತಿರಸ್ಕರಿಸಿದ ಸರ್ಕಾರ: ಕೇಂದ್ರ ಸರ್ಕಾರವು ನ್ಯೂಯಾರ್ಕ್‌ ಟೈಮ್ಸ್‌ ವರದಿಯನ್ನು ತಿರಸ್ಕರಿಸಿದೆ.

'ವರದಿಯು ವಾಸ್ತವ ಸಂಗತಿಗಳನ್ನು ಒಳಗೊಂಡಿಲ್ಲ. ಇಂತಹ ವರದಿಯ ಅಗತ್ಯವಿರಲಿಲ್ಲ’ ಎಂದು ನೀತಿ ಆಯೋಗದ ಸದಸ್ಯ (ಆರೋಗ್ಯ) ವಿ.ಕೆ. ಪೌಲ್‌ ತಿಳಿಸಿದ್ದಾರೆ.

‘ಇದೊಂದು ಪ್ರಚೋದನಾಕಾರಿ ವರದಿ. ಕೋವಿಡ್‌–19 ನಿಯಂತ್ರಿಸುವಲ್ಲಿ ಭಾರತವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಜತೆಗೆ, ಲಸಿಕಾ ಅಭಿಯಾನವು ದೇಶದಲ್ಲಿ ತ್ವರಿತಗತಿಯಲ್ಲಿ ನಡೆಯುತ್ತಿದೆ. ಈಗ ಪ್ರಸ್ತಾಪಿಸಿರುವ ವಿಷಯಗಳು ಸತ್ಯಾಂಶಗಳನ್ನು ಒಳಗೊಂಡಿಲ್ಲ’ ಎಂದು ಐಸಿಎಂಆರ್‌ ಮುಖ್ಯಸ್ಥ ಬಲರಾಮ್‌ ಭಾರ್ಗವ್‌ ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.