ADVERTISEMENT

ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನ– ಸಂಪೂರ್ಣ ಶಕ್ತಿ ಬಳಕೆ: ರಾಹುಲ್

ಪಿಟಿಐ
Published 23 ಜನವರಿ 2023, 11:09 IST
Last Updated 23 ಜನವರಿ 2023, 11:09 IST
   

ಜಮ್ಮು: ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನವನ್ನು ಮತ್ತೆ ಕೊಡಿಸುವಲ್ಲಿ ಕಾಂಗ್ರೆಸ್ ತನ್ನ ಸಂಪೂರ್ಣ ಶಕ್ತಿಯನ್ನು ಬಳಸಲಿದೆ ಎಂದು ಸಂಸದ ರಾಹುಲ್ ಗಾಂಧಿ ಹೇಳಿದರು. ಭವ್ಯ ಸ್ವಾಗತದೊಂದಿಗೆ ಭಾರತ್ ಜೋಡೊ ಯಾತ್ರೆ ಕಣಿವೆ ರಾಜ್ಯಕ್ಕೆ ಆಗಮಿಸಿದ ಬಳಿಕ ಅವರನ್ನು ಜನರನ್ನು ಉದ್ದೇಶಿಸಿ ಮಾತನಾಡಿದರು.

ಇದೇವೇಳೆ, ದೇಶದಲ್ಲೇ ಜಮ್ಮು ಮತ್ತು ಕಾಶ್ಮೀರವು ಅತ್ಯಧಿಕ ಪ್ರಮಾಣದ ನಿರುದ್ಯೋಗ ಸಮಸ್ಯೆ ಹೊಂದಿದೆ ಎಂದು ಹೇಳಿದರು.

‘ಕಾಂಗ್ರೆಸ್ ಪಕ್ಷವು ನಿಮ್ಮ ಮತ್ತು ನಿಮ್ಮ ರಾಜ್ಯದ ಸ್ಥಾನಮಾನ ಕುರಿತಾದ ಬೇಡಿಕೆಗೆ ಸಂಪೂರ್ಣವಾಗಿ ಬೆಂಬಲ ನೀಡಲಿದೆ’.ಕಾಂಗ್ರೆಸ್ ತನ್ನ ಸಂಪೂರ್ಣ ಶಕ್ತಿಯನ್ನು ಬಳಸಿ ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನ ಕೊಡಿಸಲಿದೆ ಎಂದು ಸತ್ವಾರಿ ಚೌಕ್‌ನಲ್ಲಿ ಸೇರಿದ್ದ ಜನರಿಗೆ ರಾಹುಲ್ ಭರವಸೆ ನೀಡಿದರು.

ADVERTISEMENT

‘ರಾಜ್ಯದ ಸ್ಥಾನಮಾನ ಇಲ್ಲಿನ ದೊಡ್ಡ ಸಮಸ್ಯೆ. ಅದಕ್ಕಿಂತ ದೊಡ್ಡದು ಯಾವುದೂ ಇಲ್ಲ. ನಿಮ್ಮ ಹಕ್ಕನ್ನು ಕಸಿಯಲಾಗಿದೆ’ ಎಂದು ಅವರು ಹೇಳಿದರು.

ಯಾತ್ರೆ ಮಧ್ಯೆ ಎದುರಾದ ಜನರ ಜೊತೆ ಮಾತನಾಡಿದೆ. ಅವರು ಅವರ ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ. ನಮ್ಮ ಅಹವಾಲನ್ನು ಇಲ್ಲಿನ ಆಡಳಿತ ಆಲಿಸುತ್ತಿಲ್ಲ ಎಂದು ಜನರು ಹೇಳಿದ್ದಾರೆ. ಇಲ್ಲಿನ ಸಂಪೂರ್ಣ ವ್ಯಾಪಾರ ಮತ್ತು ವಹಿವಾಟನ್ನು ಹೊರಗಿನವರು ನಡೆಸುತ್ತಿದ್ದಾರೆ. ಸ್ಥಳೀಯ ಜನ ಅಸಹಾಯಕರಾಗಿ ಕುಳಿತಿದ್ದಾರೆ ಎಂದು ರಾಹುಲ್ ಕಿಡಿಕಾರಿದರು.

ಜಮ್ಮು ಮತ್ತು ಕಾಶ್ಮೀರದಲ್ಲಿ ಅತ್ಯಧಿಕ ಪ್ರಮಾಣದ ನಿರುದ್ಯೋಗವಿದೆ. ಇಲ್ಲಿನ ಯುವಕರು ಇಂಜಿನಿಯರ್, ಡಾಕ್ಟರ್, ವಕೀಲರಾಗುವ ಅಭಿಲಾಷೆ ಹೊಂದಿದ್ದಾರೆ. ಆದರೆ, ಅವರಿಗೆ ಆ ಸೌಲಭ್ಯ ಇಲ್ಲ ಎಂದು ರಾಹುಲ್ ಹೇಳಿದರು.

ಆಗಸ್ಟ್, 2019ರಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ ಸಂವಿಧಾನದ 370ನೇ ವಿಧಿ ರದ್ದುಗೊಳಿಸಿದ್ದ ಕೇಂದ್ರ ಸರ್ಕಾರ ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.