ADVERTISEMENT

ಉನ್ನತ ಸಮಿತಿಗೆ ಪಕ್ಷದ ಸಂಸದರ ನಾಮನಿರ್ದೇಶನಕ್ಕೆ ಕಾಂಗ್ರೆಸ್‌ ಮನವಿ

ಗುರು ತೇಗ್‌ ಬಹದ್ದೂರ್‌ 400ನೇ ಜನ್ಮೋತ್ಸವ ಆಚರಣೆ

ಪಿಟಿಐ
Published 3 ಡಿಸೆಂಬರ್ 2020, 5:54 IST
Last Updated 3 ಡಿಸೆಂಬರ್ 2020, 5:54 IST
   

ನವದೆಹಲಿ: ಗುರು ತೇಗ್ ಬಹದ್ದೂರ್‌ ಅವರ 400ನೇ ಜನ್ಮೋತ್ಸವ ಆಚರಣೆ ಸಂಬಂಧ ರಚಿಸಲಾಗುವ ಉನ್ನತ ಸಮಿತಿಗೆ ಪಂಜಾಬ್‌ನ ಕಾಂಗ್ರೆಸ್‌ ಸಂಸದರ ಪೈಕಿ ಕೆಲವರನ್ನು ನಾಮನಿರ್ದೇಶನ ಮಾಡುವಂತೆ ಲೋಕಸಭೆಯಲ್ಲಿ ಕಾಂಗ್ರೆಸ್‌ ನಾಯಕ ಅಧೀರ್‌ ರಂಜನ್ ಚೌಧರಿ ಒತ್ತಾಯಿಸಿದ್ದಾರೆ.

ಅವರು ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ತೇಗ್‌ ಬಹದ್ದೂರ್‌ ಅವರು ಸಿಖ್ ಧರ್ಮದ 9ನೇ ಗುರು.

‘ಜನ್ಮೋತ್ಸವ ಆಚರಣೆ ಉನ್ನತ ಸಮಿತಿ ಸದಸ್ಯನನ್ನಾಗಿ ನನ್ನನ್ನು ನಾಮ ನಿರ್ದೇಶನ ಮಾಡಿರುವ ಕುರಿತು ಗೃಹ ಸಚಿವಾಲಯದ ಕಾರ್ಯದರ್ಶಿ ಅಜಯ್‌ ಭಲ್ಲಾ ಅವರು ಬರೆದ ಪತ್ರ ತಲುಪಿದೆ’ ಎಂದೂ ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ADVERTISEMENT

‘ಈ ಸಮಿತಿಯಲ್ಲಿ ಬಿಜೆಪಿಯ ಕೆಲವು ಜನಪ್ರತಿನಿಧಿಗಳಿಗೆ ಪ್ರಾತಿನಿಧ್ಯ ನೀಡಲಾಗಿದೆ. ಇದೇ ರೀತಿ, ಪಂಜಾಬ್‌ನಿಂದ ಆಯ್ಕೆಯಾಗಿರುವ ಕಾಂಗ್ರೆಸ್‌ ಸಂಸದರ ಪೈಕಿ ಕೆಲವರಿಗೆ ಈ ಸಮಿತಿಯಲ್ಲಿ ಪ್ರಾತಿನಿಧ್ಯ ನೀಡಬೇಕು. ಆ ರಾಜ್ಯದ ಕಾಂಗ್ರೆಸ್‌ ಸಂಸದರು ಈ ಜನ್ಮೋತ್ಸವ ಕಾರ್ಯಕ್ರಮದೊಂದಿಗೆ ಧಾರ್ಮಿಕವಾಗಿ ಹಾಗೂ ಭಾವನಾತ್ಮಕವಾಗಿ ಸಂಬಂಧ ಹೊಂದಿದ್ದಾರೆ‘ ಎಂದು ಅವರು ಪತ್ರದಲ್ಲಿ ವಿವರಿಸಿದ್ದಾರೆ.

ಪ್ರಧಾನಿ ಮೋದಿ ಈ ಉನ್ನತ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌, ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌, ಸಾರಿಗೆ ಸಚಿವ ನಿತಿನ್‌ ಗಡ್ಕರಿ ಸೇರಿದಂತೆ ಒಟ್ಟು 70 ಸದಸ್ಯರನ್ನು ಸಮಿತಿ ಒಳಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.