ಪ್ರಧಾನಿ ನರೇಂದ್ರ ಮೋದಿ
ಪಿಟಿಐ ಚಿತ್ರ
ನವದೆಹಲಿ: ನೆಹರೂ ಕುಟುಂಬ ಹಾಗೂ ಕಾಂಗ್ರೆಸ್ ವಿರುದ್ಧ ಟೀಕಾಪ್ರಹಾರ ಮುಂದುವರಿಸಿದ ಪ್ರಧಾನಿ ನರೇಂದ್ರ ಮೋದಿ, ‘ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವು ಸಂವಿಧಾನವನ್ನು ಬಲಪಡಿಸಿದೆ. ಆದರೆ, ರಕ್ತದ ರುಚಿ ಕಂಡಿರುವ ಕಾಂಗ್ರೆಸ್ ಪಕ್ಷವು ಸಂವಿಧಾನದ ಮೇಲೆ ನಿರಂತರ ಪ್ರಹಾರ ನಡೆಸಿ ಗಾಯಗೊಳಿಸಿದೆ’ ಎಂದು ವಾಗ್ದಾಳಿ ನಡೆಸಿದರು.
ಲೋಕಸಭೆಯಲ್ಲಿ ‘ಭಾರತದ ಸಂವಿಧಾನದ 75 ವರ್ಷಗಳ ವೈಭವಯುತ ಪ್ರಯಾಣ’ ಕುರಿತು ಎರಡು ದಿನಗಳ ಕಾಲ ನಡೆದ ಚರ್ಚೆಗೆ ಪ್ರಧಾನಿ ಅವರು ಶನಿವಾರ ಸಂಜೆ ಉತ್ತರ ನೀಡಿದರು. ಸುಮಾರು 50 ನಿಮಿಷಗಳ ಭಾಷಣದಲ್ಲಿ ಅವರು ತಮ್ಮ ಸರ್ಕಾರದ ಸಾಧನೆಗಳು ಹಾಗೂ ಕಾಂಗ್ರೆಸ್ ವಿರುದ್ಧ ಟೀಕೆಗೆ ಬಹುತೇಕ ಸಮಯ ಮೀಸಲಿಟ್ಟರು. ಮೋದಿ ಭಾಷಣದ ಉದ್ದಕ್ಕೂ ಇಂಡಿಯಾ ಮೈತ್ರಿಕೂಟದ ಸದಸ್ಯರು ಗದ್ದಲ ಎಬ್ಬಿಸಿದರು. ‘ಕಾಂಗ್ರೆಸ್‌ನ ನೆಹರೂ–ಗಾಂಧಿ ಕುಟುಂಬವು ಪ್ರತಿ ಹಂತದಲ್ಲೂ ಸಂವಿಧಾನದ ಮೇಲೆ ದಾಳಿ ನಡೆಸಿದೆ. ಅಂತಹ ಒಂದು ಅವಕಾಶವನ್ನೂ ಬಿಡಲಿಲ್ಲ’ ಎಂದು ಮೋದಿ ಕಿಡಿಕಾರಿದರು.
ದೇಶದ ರಾಜಕಾರಣದಿಂದ ಪರಿವಾರವಾದ ಮುಕ್ತಗೊಳಿಸಬೇಕು, ಭ್ರಷ್ಟಾಚಾರದ ವಿರುದ್ಧ ಶೂನ್ಯ ಸಹಿಷ್ಣುತೆ, ಧರ್ಮಾಧಾರಿತ ಮೀಸಲಾತಿ ಪರಿಚಯಿಸಬಾರದು ಎಂಬುದು ಸೇರಿದಂತೆ 11 ಸಂಕಲ್ಪಗಳನ್ನು ಮೋದಿ ಅವರು ಪುನರುಚ್ಚರಿಸಿದರು. ಇದರಿಂದ 2047ರ ವೇಳೆಗೆ ವಿಕಸಿತ ಭಾರತ ಆಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
‘ಭಾರತವು 2047ರ ವೇಳೆಗೆ ಅಭಿವೃದ್ಧಿ ಹೊಂದಿದ ದೇಶವಾಗಲು ಸಂಕಲ್ಪ ಮಾಡಿದೆ. ಈ ಗುರಿಯನ್ನು ಸಾಧಿಸಲು ದೇಶದ ಏಕತೆ ಅತಿದೊಡ್ಡ ಅವಶ್ಯಕತೆಯಾಗಿದೆ. ನಮ್ಮ ಸಂವಿಧಾನವೇ ನಮ್ಮ ಏಕತೆಗೆ ಆಧಾರವಾಗಿದೆ’ ಎಂದು ಮೋದಿ ಪ್ರತಿಪಾದಿಸಿದರು. ‘ಆದಾಗ್ಯೂ, ಸ್ವಾತಂತ್ರ್ಯದ ನಂತರ ಕೆಲವರ ಸ್ವಾರ್ಥದಿಂದಾಗಿ ದೇಶದ ಏಕತೆಯ ಮೇಲೆ ದಾಳಿಯಾಗಿದೆ. ಗುಲಾಮ ಮನಸ್ಥಿತಿಯೊಂದಿಗೆ ಬೆಳೆದವರು ವೈವಿಧ್ಯದಲ್ಲಿ ವಿರೋಧಾಭಾಸಗಳನ್ನು ಹುಡುಕಿದರು’ ಎಂದರು.
‘2014ರ ನಂತರ ಸಂವಿಧಾನವನ್ನು ಬಲಪಡಿಸಲಾಯಿತು. ಈ ಸಮಾಜದಲ್ಲಿರುವ ಕೆಟ್ಟ ಅಂಶಗಳಿಗೆ ಚಿಕಿತ್ಸೆ ನೀಡಲು ನಾವು ಶ್ರಮಿಸಿದ್ದೇವೆ. ನಾವು ಸಂವಿಧಾನದಲ್ಲಿ ತಿದ್ದುಪಡಿಗಳನ್ನು ಮಾಡಿದ್ದೇವೆ. ಆದರೆ, ಈ ದೇಶವನ್ನು ಒಗ್ಗೂಡಿಸಲು ಮಾತ್ರ ಈ ಕೆಲಸ ಮಾಡಿದ್ದೇವೆ. ಜನರ ಇಚ್ಛೆಯಿಂದ ಮಾತ್ರ ಇದನ್ನು ಮಾಡಲಾಗಿದೆ’ ಎಂದು ಅವರು ಸ್ಪಷ್ಟಪಡಿಸಿದರು.
‘ಪರಿವಾರ ರಾಜಕಾರಣದಿಂದ ನಮ್ಮ ಪ್ರಜಾಪ್ರಭುತ್ವಕ್ಕೆ ಹಾನಿಯಾಗಿರುವ ಬಗ್ಗೆ ನಾವು ಯೋಚಿಸಬೇಕು. ಕುಟುಂಬವಾದದ ಹಂಗಿಲ್ಲದ ಎಲ್ಲ ರಾಜಕೀಯ ಪಕ್ಷಗಳು ನಮ್ಮ ಯುವಕರನ್ನು ಮೇಲಕ್ಕೆತ್ತಲು ಒಗ್ಗೂಡಬೇಕು. ದೇಶದ ರಾಜಕೀಯಕ್ಕೆ ಶುದ್ಧ ಗಾಳಿ, ಹೊಸ ಶಕ್ತಿ ಬೇಕು. ವಂಶವಾದವನ್ನು ನಿರ್ಮೂಲನೆ ಮಾಡಬೇಕು’ ಎಂದು ಅವರು ಹೇಳಿದರು.
‘ಸಂವಿಧಾನ ನಮಗೆ ಅಡ್ಡಿಯಾದರೆ ಅದಕ್ಕೆ ಬದಲಾವಣೆ ತರಬೇಕು ಎಂದು ನೆಹರೂ ಅವರು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದರು. ಆಗ ದೇಶ ಸುಮ್ಮನೆ ಕುಳಿತುಕೊಳ್ಳಲಿಲ್ಲ. ರಾಷ್ಟ್ರಪತಿ ಹಾಗೂ ಲೋಕಸಭಾಧ್ಯಕ್ಷರು ನೆಹರೂ ಅವರಿಗೆ ಎಚ್ಚರಿಕೆ ನೀಡಿ ತಡೆಯಲು ಯತ್ನಿಸಿದರು. ಆದರೆ, ನೆಹರೂ ಅವರು ತಮ್ಮದೇ ಸಂವಿಧಾನ ಅನುಸರಿಸಿದರು. ಸಂವಿಧಾನವನ್ನು ತಿದ್ದುವ ಈ ಚಟ ಕಾಂಗ್ರೆಸ್‌ಗೆ ಅಂಟಿಕೊಂಡಿತು. ಮತ್ತೆ ಮತ್ತೆ ಅದನ್ನು ಪುನರಾವರ್ತಿಸಿದರು’ ಎಂದು ವಾಗ್ದಾಳಿ ನಡೆಸಿದರು.
’ಕಾಂಗ್ರೆಸ್ ಸಮಿತಿಗಳ ಪ್ರಕಾರ, ಸರ್ದಾರ್ ವಲ್ಲಭಬಾಯಿ ಪಟೇಲ್ ಪ್ರಧಾನಿ ಆಗಬೇಕಿತ್ತು. ಆದರೆ, ನೆಹರೂ ಅವರಿಗೆ ಅನುಕೂಲ ಮಾಡಿಕೊಡಲು ಇದನ್ನು ನಿರ್ಲಕ್ಷ್ಯ ಮಾಡಲಾಯಿತು. ಕಾಂಗ್ರೆಸ್ ಪಕ್ಷವು ತನ್ನದೇ ಪಕ್ಷದ ಸಂವಿಧಾನವನ್ನು ಅನುಸರಿಸುವುದಿಲ್ಲ. ಅಂತಹ ಪಕ್ಷವು ದೇಶದ ಸಂವಿಧಾನವನ್ನು ಹೇಗೆ ಅನುಸರಿಸುತ್ತದೆ’ ಎಂದು ಅವರು ಪ್ರಶ್ನಿಸಿದರು.
‘ಕಾಂಗ್ರೆಸ್ ಪಕ್ಷವು ಡಾ. ಬಿ.ಆರ್. ಅಂಬೇಡ್ಕರ್ ವಿರುದ್ಧ ದ್ವೇಷ ಹೊಂದಿತ್ತು. ಅಟಲ್ ಬಿಹಾರಿ ವಾಜಪೇಯಿ ಸರ್ಕಾರದ ಅವಧಿಯಲ್ಲಿ ಅಂಬೇಡ್ಕರ್ ಅವರ ಸ್ಮಾರಕವನ್ನು ನಿರ್ಮಿಸಲು ನಿರ್ಧರಿಸಲಾಗಿತ್ತು. ಆದರೆ, ಯುಪಿಎ ಸರ್ಕಾರವು ಈ ಯೋಜನೆ ಮುಂದುವರಿಯದಂತೆ ನೋಡಿಕೊಂಡಿತು. ನಾವು 2014ರಲ್ಲಿ ಅಧಿಕಾರಕ್ಕೆ ಬಂದಾಗ, ಅಲಿಪುರ ರಸ್ತೆಯಲ್ಲಿ ಸ್ಮಾರಕ ನಿರ್ಮಿಸಿದೆವು’ ಎಂದು ಅವರು ನೆನಪಿಸಿಕೊಂಡರು.
ಸಂವಿಧಾನವು ಮಹಿಳೆಯರಿಗೆ ಮತದಾನದ ಹಕ್ಕನ್ನು ನೀಡಿದೆ. ದೇಶವು ಈಗ ಮಹಿಳಾ ನೇತೃತ್ವದ ಅಭಿವೃದ್ಧಿಯನ್ನು ನೋಡುತ್ತಿದೆ ಎಂದು ಮೋದಿ ಹೇಳಿದರು. ’ಏಕರೂಪ ನಾಗರಿಕ ಸಂಹಿತೆಯು ಸಂವಿಧಾನ ಸಭೆಯ ಚರ್ಚೆಯ ವಿಷಯವಾಗಿತ್ತು. ಜನರು ಆಯ್ಕೆ ಮಾಡಿದ ಸರ್ಕಾರಗಳು ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಅವರು ನಿರ್ಧರಿಸಿದರು. ಸುಪ್ರೀಂ ಕೋರ್ಟ್ ಕೂಡ ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರಬೇಕು ಎಂದು ಪದೇ ಪದೇ ಹೇಳುತ್ತಿದೆ. ನಾವು ದೇಶದಲ್ಲಿ ಜಾತ್ಯತೀತ ಸಂಹಿತೆ ತರಲು ಶ್ರಮಿಸುತ್ತಿದ್ದೇವೆ’ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.