ನವದೆಹಲಿ: ‘75 ವರ್ಷ ತುಂಬಿದ ಮೇಲೆ ಯಾರೇ ಆದರೂ ನಿವೃತ್ತರಾಗಬೇಕು ಹಾಗೂ ಕೆಲಸ ಮಾಡಲು ಬೇರೆಯವರಿಗೆ ಅವಕಾಶ ಮಾಡಿಕೊಡಬೇಕು’ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಹೇಳಿಕೆ ಉಲ್ಲೇಖಿಸುವ ಮೂಲಕ ಕಾಂಗ್ರೆಸ್ ಪಕ್ಷವು ಪ್ರಧಾನಿ ನರೇಂದ್ರ ಮೋದಿ ಅವರನ್ನು ಶುಕ್ರವಾರ ಕುಟುಕಿದೆ.
‘ವಿದೇಶ ಪ್ರವಾಸ ಮುಗಿಸಿ ಭಾರತಕ್ಕೆ ಮರಳಿದ ಸಂದರ್ಭದಲ್ಲಿಯೇ, ಮೋದಿ ಅವರಿಗೆ 75 ವರ್ಷ ತುಂಬಲಿರುವ ಕುರಿತು ಮೋಹನ್ ಭಾಗವತ್ ನೆನಪಿಸಿದ್ದಾರೆ. ಇದು ಎಂಥ ‘ಘರ್ ವಾಪ್ಸಿ’’ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ‘ಎಕ್ಸ್’ನಲ್ಲಿ ಬರೆದುಕೊಂಡಿದ್ದಾರೆ.
‘ಭಾಗವತ್ ಅವರ ಈ ಹೇಳಿಕೆ ಒಳ್ಳೆಯ ಸುದ್ದಿಯೇ ಆಗಿದೆ. ಭಾಗವತ್ ಮತ್ತು ಮೋದಿ ಅವರಿಗೆ ಈ ವರ್ಷ 75 ವರ್ಷ ತುಂಬಲಿದೆ. ಹೀಗಾಗಿ, ಇದು ದೇಶ ಹಾಗೂ ಸಂವಿಧಾನಕ್ಕೆ ಒಳ್ಳೆಯ ದಿನಗಳೇ’ ಎಂದು ಜೈರಾಮ್ ರಮೇಶ್ ವ್ಯಂಗ್ಯವಾಡಿದ್ದಾರೆ.
ನಾಗ್ಪುರದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಭಾಗವತ್, ಆರ್‌ಎಸ್‌ಎಸ್‌ನ ಹಿರಿಯ ನಾಯಕರಾಗಿದ್ದ ಮೋರೊಪಂತ ಪಿಂಗ್ಲೆ ಅವರ ಹೇಳಿಕೆಯನ್ನು ಉಲ್ಲೇಖಿಸಿದ್ದರು.
‘ನಿಮಗೆ 75 ವರ್ಷ ತುಂಬಿದಾಗ ಶಾಲು ಹೊದಿಸಿ ಸನ್ಮಾನಿಸಿದರೆ, ನಿಮಗೆ ವಯಸ್ಸಾಯಿತು. ಅಧಿಕಾರದಿಂದ ಕೆಳಗಿಳಿದು, ಬೇರೆಯವರಿಗೆ ಜವಾಬ್ದಾರಿ ವಹಿಸಬೇಕು ಎಂಬುದಾಗಿ ಪಿಂಗ್ಲೆ ಹೇಳಿದ್ದರು’ ಎಂದು ಭಾಗವತ್ ಪ್ರಸ್ತಾಪಿಸಿದ್ದರು.
‘ಪ್ರಶಸ್ತಿ ಜೀವಿ’ ಪ್ರಧಾನಿ, ನೀವು ವಿದೇಶ ಪ್ರವಾಸದಿಂದ ತವರಿಗೆ ಮರಳಿದ ಕೂಡಲೇ ಸೆಪ್ಟೆಂಬರ್ 17ರಂದು ನಿಮಗೆ 75 ವರ್ಷ ತುಂಬಲಿದೆ ಎಂದು ಸರಸಂಘಚಾಲಕ ಅವರು ನೆನಪಿಸಿದ್ದಾರೆ’ ಎಂದೂ ಜೈರಾಮ್ ರಮೇಶ್ ಹೇಳಿದ್ದಾರೆ.
‘ನಿಮಗೂ ಕೂಡ ಬರುವ ಸೆಪ್ಟೆಂಬರ್ 11ಕ್ಕೆ 75 ವರ್ಷ ತುಂಬಲಿದೆ ಎಂಬುದಾಗಿ ಮೋದಿ ಅವರು ಭಾಗವತ್ ಅವರಿಗೆ ಹೇಳಬಹುದಾಗಿದೆ. ಒಂದು ಬಾಣ, ಎರಡು ಗುರಿ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.