ADVERTISEMENT

ಕೇರಳ: ಪಕ್ಷ ತೊರೆದ ಮತ್ತೊಬ್ಬ ಕಾಂಗ್ರೆಸ್ ನಾಯಕ

ಪಿಟಿಐ
Published 5 ಅಕ್ಟೋಬರ್ 2021, 10:13 IST
Last Updated 5 ಅಕ್ಟೋಬರ್ 2021, 10:13 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಕಲ್ಪೆಟ್ಟ (ಕೇರಳ): ಈ ವರ್ಷದ ಏಪ್ರಿಲ್‌ನಿಂದ ಕೇರಳದ ಕಾಂಗ್ರೆಸ್ ಪಕ್ಷದಲ್ಲಿ ಆರಂಭವಾಗಿರುವ ರಾಜೀನಾಮೆ ಪರ್ವ ಮುಂದುವರಿದಿದ್ದು, ಈಗ ವಯನಾಡು ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಪಿ.ವಿ. ಬಾಲಚಂದ್ರನ್ ಅವರು ಪಕ್ಷ ತೊರೆಯುವುದಾಗಿ ತಿಳಿಸಿದ್ದಾರೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರತಿನಿಧಿಸುತ್ತಿರುವ ವಯನಾಡ್‌ ಲೋಕಸಭಾ ಕ್ಷೇತ್ರ ಇದಾಗಿರುವುದರಿಂದ ಈ ರಾಜೀನಾಮೆಗೆ ಮಹತ್ವ ದೊರೆತಿದೆ.

‘ಅತ್ಯಂತ ಹಳೆಯ ರಾಜಕೀಯ ಪಕ್ಷವಾಗಿರುವ ಕಾಂಗ್ರೆಸ್‌, ದೇಶದಲ್ಲಿ ಬಿಜೆಪಿಯ ಬೆಳವಣಿಗೆಯನ್ನು ತಡೆಯುವಲ್ಲಿ ವಿಫಲವಾಗಿದೆ‘ ಎಂದು ಅವರು ಆರೋಪಿಸಿದ್ದಾರೆ.

ADVERTISEMENT

‘ಈಗಾಗಲೇ ಬಹುಸಂಖ್ಯಾತ ಮತ್ತು ಅಲ್ಪಸಂಖ್ಯಾತ ಸಮುದಾಯದ ಕಾರ್ಯಕರ್ತರು ಪಕ್ಷದಿಂದ ದೂರವಾಗುತ್ತಿದ್ದಾರೆ. ದಿಕ್ಕು–ದಿಸೆಯಿಲ್ಲದೇ ಸಾಗುತ್ತಿರುವ ಪಕ್ಷದ ಜೊತೆ ಜನರು ನಿಲ್ಲುವುದಿಲ್ಲ‘ ಎಂದು ಕೇರಳ ಪ್ರದೇಶ ಕಾಂಗ್ರೆಸ್‌ ಸಮಿತಿಯ ಕಾರ್ಯಕಾರಿ ಮಂಡಳಿ ಸದಸ್ಯರೂ ಆಗಿದ್ದ ಬಾಲಚಂದ್ರನ್ ಹೇಳಿದ್ದಾರೆ.

ರಾಜ್ಯ ಕಾಂಗ್ರೆಸ್‌ ನಾಯಕತ್ವದ ಕಾರ್ಯವೈಖರಿಯನ್ನು ಟೀಕಿಸಿದ ಅವರು, ‘ಜನರ ಸಮಸ್ಯೆಗಳ ಬಗ್ಗೆ ಸ್ಪಷ್ಟವಾದ ರಾಜಕೀಯ ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ. ಇಂಥ ಸನ್ನಿವೇಶದಲ್ಲಿ ಮುಂದೆ ಕಾರ್ಯಕರ್ತರ ಭಾವನೆಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುವುದಿಲ್ಲ ಎಂಬ ಅರಿವಿನಿಂದ ನಾನು ಪಕ್ಷ ತೊರೆಯುವ ನಿರ್ಧಾರ ಕೈಗೊಂಡಿದ್ದೇನೆ‘ ಎಂದು ಅವರು ಹೇಳಿದರು.

ಕೇರಳದಲ್ಲಿ ಇದೇ ಏಪ್ರಿಲ್‌ನಲ್ಲಿ ನಡೆದ ವಿಧಾನಸಭಾ ಚುನಾವಣೆಗೆ ಮುನ್ನ ಮಾಜಿ ಶಾಸಕಿ ಕೆ.ಸಿ.ರೋಸಾಕುಟ್ಟಿ, ಕೆಪಿಸಿಸಿ ಕಾರ್ಯದರ್ಶಿ ಎಂ.ಎಸ್. ವಿಶ್ವನಾಥನ್ ಮತ್ತು ಡಿಸಿಸಿ ಪ್ರಧಾನ ಕಾರ್ಯದರ್ಶಿ ಅನಿಲ್ ಕುಮಾರ್ ಅವರು ಕಾಂಗ್ರೆಸ್ ಪಕ್ಷ ತೊರೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.