ADVERTISEMENT

ಸಿದ್ಧಾಂತದ ಜೊತೆ ರಾಜಿಯಾಗದ ಉಪರಾಷ್ಟ್ರಪತಿ ಅಭ್ಯರ್ಥಿ ಮಾರ್ಗರೇಟ್ ಆಳ್ವ

​ಪ್ರಜಾವಾಣಿ ವಾರ್ತೆ
Published 17 ಜುಲೈ 2022, 18:52 IST
Last Updated 17 ಜುಲೈ 2022, 18:52 IST
 ಮಾರ್ಗರೇಟ್ ಆಳ್ವ
ಮಾರ್ಗರೇಟ್ ಆಳ್ವ   

ನವದೆಹಲಿ: ಪ್ರಬಲ ಹಾಗೂ ವಿಶ್ವಾಸಾರ್ಹ ಅಭ್ಯರ್ಥಿ ಇಲ್ಲದೇ ಹೋದರೆ ಹೋರಾಟದಲ್ಲಿ ಪರಾಭವ ಖಚಿತ ಎನ್ನುವ ಪರಿಸ್ಥಿತಿಯಿದ್ದಾಗ ಪ್ರತಿಪಕ್ಷಗಳು ತಿರುಗಿ ನೋಡಿದ್ದು ಮಾರ್ಗರೇಟ್ ಆಳ್ವ ಅವರತ್ತ. ಅವರು ಪ್ರತಿಪಕ್ಷಗಳಿಗೆ ನಿರಾಸೆ ಮಾಡಲಿಲ್ಲ.ವರ್ಚಸ್ವಿ ವ್ಯಕ್ತಿತ್ವ, ಉತ್ತಮ ಆಡಳಿತಗಾರ್ತಿ ಎಂಬ ಶ್ರೇಯದ ಜೊತೆಗೆ ತಮ್ಮ ಸಿದ್ಧಾಂತ, ಬದ್ಧತೆ ಹಾಗೂ ನಿಲುವುಗಳನ್ನು ಕಾಪಾಡಿಕೊಳ್ಳಲು ಏನನ್ನಾದರೂ ಕಳೆದುಕೊಳ್ಳಲು ಸಿದ್ಧವಿರುವ ಮಾರ್ಗರೇಟ್, ತಮ್ಮ ರಾಜಕೀಯ ಜೀವನದಲ್ಲಿ ಎಂದೂ ರಾಜಿ ಮಾಡಿಕೊಂಡವರಲ್ಲ.

2008ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್‌ಗಳನ್ನು ಮಾರಾಟ ಮಾಡಲಾಗುತ್ತಿದೆ ಎಂದು ಅವರು ತಮ್ಮ ಪಕ್ಷದ ವಿರುದ್ಧವೇ ಸಾರ್ವಜನಿಕವಾಗಿ ದನಿ ಎತ್ತಿದ್ದರು. ಅವರ ಪುತ್ರ ನಿವೇದಿತ್ ಅವರಿಗೆ ಟಿಕೆಟ್ ಸಿಕ್ಕಿಲ್ಲ ಎಂಬ ಕಾರಣಕ್ಕೆ ಅವರು ಬೇಸರಗೊಂಡಿದ್ದರು ಎನ್ನಲಾಗಿತ್ತು. ಎಲ್ಲ ರಾಜ್ಯಗಳಲ್ಲಿ ನಾಯಕರ ಮಕ್ಕಳಿಗೆ ಟಿಕೆಟ್ ನೀಡಿರುವುದನ್ನು ಅವರು ಬೊಟ್ಟು ಮಾಡಿ ತೋರಿಸಿದ್ದರು.

ತಮ್ಮ ಆತ್ಮಚರಿತ್ರೆ ‘ಕರೇಜ್ ಅಂಡ್ ಕಮಿಟ್‌ಮೆಂಟ್’‍ಪುಸ್ತಕದಲ್ಲಿ ವಿವರಿಸಿದ್ದ ಹಲವು ವಿಚಾರಗಳು ಸಾಕಷ್ಟು ಸುದ್ದಿ ಮಾಡಿದ್ದವು. ಎ.ಕೆ. ಆ್ಯಂಟನಿ ಅವರನ್ನು ಕೇರಳ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸುವಂತೆ ತಾವು ಶಿಫಾರಸು ಮಾಡಿದ್ದ ಅಂಶವನ್ನು ಅವರು ಪುಸ್ತಕದಲ್ಲಿ ಉಲ್ಲೇಖಿಸಿದ್ದರು. ಆಳ್ವ ಅವರು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನೇ ಕಳೆದುಕೊಳ್ಳಬೇಕಾಯಿತು. ಇದರಲ್ಲಿ ಆ್ಯಂಟನಿ ಪಾತ್ರವಿತ್ತು ಎಂದು ಆಳ್ವ ದೂರಿದ್ದರು.

ADVERTISEMENT

ನಂತರದ ದಿನಗಳಲ್ಲಿ ಆಳ್ವ ಅವರನ್ನು ಉತ್ತರಾ ಖಂಡ, ಗುಜರಾತ್, ರಾಜಸ್ಥಾನ ಹಾಗೂ ಗೋವಾ ರಾಜ್ಯಗಳ ರಾಜ್ಯಪಾಲರನ್ನಾಗಿ ನೇಮಕ ಮಾಡಲಾ ಗಿತ್ತು. 1974ರಲ್ಲಿ ತಮ್ಮ 30ನೇ ವಯಸ್ಸಿನಲ್ಲಿ ಸಂಸತ್ ಪ್ರವೇಶಿಸಿದ್ದ ಅವರು, ಬಳಿಕ ಹಿಂದಿರುಗಿ ನೋಡಿದ್ದೇ ಇಲ್ಲ. ಸಂಸದರಾಗಿದ್ದ ತಮ್ಮ ಅತ್ತೆ–ಮಾವಂದಿರಾದ ವಯಲೆಟ್ ಆಳ್ವ ಹಾಗೂ ಜೋಕಿಮ್ ಅವರಿಂದ ರಾಜಕೀಯದ ಪಟ್ಟುಗಳನ್ನು ಕಲಿತಿದ್ದರು.

ರಾಜೀವ್ ಗಾಂಧಿ ಹಾಗೂ ಪಿ.ವಿ. ನರಸಿಂಹರಾವ್ ಅವರು ಆಳ್ವ ಅವರನ್ನು ತಮ್ಮ ಸಂಪುಟಕ್ಕೆ ಆಯ್ಕೆ ಮಾಡಿದ್ದರು. 1942ರಲ್ಲಿ ಮಂಗಳೂರಿನಲ್ಲಿ ಜನಿಸಿದ ಮಾರ್ಗರೇಟ್, ಕಾಲೇಜು ದಿನಗಳಿಂದಲೇ ಉತ್ತಮ ಚರ್ಚಾಪಟು ಎನಿಸಿಕೊಂಡಿದ್ದರು. ರಾಜಕೀಯಕ್ಕೆ ಬರುವ ಮುನ್ನ ಅವರು ವಕೀಲ
ರಾಗಿದ್ದರು. 1999ರಲ್ಲಿ ಲೋಕಸಭೆಗೆ ಒಮ್ಮೆ ಆಯ್ಕೆಯಾಗಿದ್ದ ಅವರು 2004ರಲ್ಲಿ ಪರಾಭವಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.