ADVERTISEMENT

ಕೇವಲ ಪ್ರಚಾರ ನಿರ್ವಹಣೆಯಿಂದ ಕೋವಿಡ್‌ ಎದುರಿಸಲು ಸಾಧ್ಯವಿಲ್ಲ: ಪ್ರಿಯಾಂಕಾ

ಏಜೆನ್ಸೀಸ್
Published 25 ಜುಲೈ 2020, 10:28 IST
Last Updated 25 ಜುಲೈ 2020, 10:28 IST
ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ
ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ   

ನವದೆಹಲಿ: ಕೇವಲ ಪ್ರಚಾರ ಹಾಗೂ ಮಾಧ್ಯಮಗಳನ್ನು ನಿರ್ವಹಿಸುವುದರ ಮೂಲಕ ಕೋವಿಡ್‌ ಯುದ್ಧವನ್ನು ಎದುರಿಸಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಪತ್ರ ಬರೆಯುವ ಮೂಲಕ ಪ್ರಿಯಾಂಕಾ ಗಾಂಧಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ಉತ್ತರ ಪ್ರದೇಶದಲ್ಲಿ ಕೊರೊನಾ ಸೋಂಕು ಪ್ರಕರಣಗಳು ಸ್ಫೋಟಕದ ತೀವ್ರತೆ ಪಡೆದುಕೊಂಡಿವೆ. ಇಂತಹ ಸಮಯದಲ್ಲಿ, 'ಪರೀಕ್ಷೆ ಇಲ್ಲವೆಂದರೆ ಕೊರೊನಾ ಇಲ್ಲ' ಎನ್ನುವ ನೀತಿಯು 'ಭಯಾನಕ ವಾತಾವರಣ' ಸೃಷ್ಟಿಸಲಿದೆ ಎಂದು ಪ್ರಿಯಾಂಕಾ ಗಾಂಧಿ ತಿಳಿಸಿದ್ದಾರೆ.

ADVERTISEMENT

ಕೇವಲ ಪ್ರಚಾರ ಹಾಗೂ ಮಾಧ್ಯಮಗಳನ್ನು ನಿರ್ವಹಿಸುವುದರ ಮೂಲಕ ಕೋವಿಡ್‌ ವಿರುದ್ಧದ ಯುದ್ಧವನ್ನು ಎದುರಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.

ಉತ್ತರ ಪ್ರದೇಶದಲ್ಲಿ ಶುಕ್ರವಾರ 2,500 ಕೊರೊನಾ ಸೋಂಕು ಪ್ರಕರಣಗಳು ವರದಿಯಾಗಿದ್ದನ್ನು ಉಲ್ಲೇಖಿಸಿರುವ ಅವರು, 'ರಾಜ್ಯದ ಬಹುತೇಕ ನಗರಗಳು ಕೋವಿಡ್‌ ಪ್ರಕರಣಗಳಿಂದ ತುಂಬಿವೆ ಹೋಗಿವೆ. ಈಗ ಹಳ್ಳಿಗಳಿಗೂ ಸಹ ಸೋಂಕು ಹರಡಲು ಪ್ರಾರಂಭವಾಗಿದೆ' ಎಂದು ತಿಳಿಸಿದ್ದಾರೆ.

'ಉತ್ತರ ಪ್ರದೇಶದಲ್ಲಿನ ಕ್ವಾರಂಟೈನ್‌ ಕೇಂದ್ರಗಳು ಕರುಣಾಜನಕ ಸ್ಥಿತಿಯಲ್ಲಿವೆ. ಕೆಲವು ಸ್ಥಳಗಳಲ್ಲಿ ಪರಿಸ್ಥಿತಿ ತುಂಬಾ ಕೆಟ್ಟದ್ದಾಗಿದೆ. ಜನರು ಕೊರೊನಾ ವೈರಸ್‌ಗಿಂತ ಹೆಚ್ಚಾಗಿ ಅದರ ನಿರ್ವಹಣೆಯ ಬಗ್ಗೆ ಆತಂಕ ಪಡುತ್ತಿದ್ದಾರೆ. ಇಂತಹ ಸನ್ನಿವೇಶದಲ್ಲಿ ಜನರು ಪರೀಕ್ಷೆಗೆ ಒಳಪಡಲು ತಮ್ಮ ಮನೆಗಳಿಂದ ಹೊರಬರುತ್ತಿಲ್ಲ' ಎಂದು ಅವರು ತಿಳಿಸಿದ್ದಾರೆ.

ಇದು ಸರ್ಕಾರದ ದೊಡ್ಡ ವೈಫಲ್ಯ ಎಂದೂ ಪ್ರಿಯಾಂಕಾ ಪ್ರತಿಪಾದಿಸಿದ್ದಾರೆ.

'ಪ್ರಧಾನಿ ಮೋದಿ ವಾರಣಾಸಿಯಿಂದ ಸಂಸತ್ ಸದಸ್ಯರಾಗಿದ್ದಾರೆ. ಲಖನೌದಿಂದ ರಕ್ಷಣಾ ಸಚಿವರು ಸೇರಿದಂತೆ ಇನ್ನೂ ಅನೇಕ ಕೇಂದ್ರ ಸಚಿವರು ಉತ್ತರ ಪ್ರದೇಶ ಮೂಲದವರಾಗಿದ್ದಾರೆ. ವಾರಣಾಸಿ, ಲಖನೌ, ಆಗ್ರಾ ಮುಂತಾದ ಸ್ಥಳಗಳಲ್ಲಿ ತಾತ್ಕಾಲಿಕ ಆಸ್ಪತ್ರೆಗಳನ್ನು ತೆರೆಯಲು ಏಕೆ ಸಾಧ್ಯವಾಗಿಲ್ಲ' ಎಂದು ಪ್ರಿಯಾಂಕಾ ಗಾಂಧಿ ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.