ADVERTISEMENT

ಕೂಡಲೇ ನಾನು ರಾಜಸ್ಥಾನದ ಮುಖ್ಯಮಂತ್ರಿಯಾಗಬೇಕು: ಸೋನಿಯಾಗೆ ಸಚಿನ್ ಪೈಲಟ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಏಪ್ರಿಲ್ 2022, 10:46 IST
Last Updated 28 ಏಪ್ರಿಲ್ 2022, 10:46 IST
ಸಚಿನ್ ಪೈಲಟ್: ಪಿಟಿಐ ಚಿತ್ರ
ಸಚಿನ್ ಪೈಲಟ್: ಪಿಟಿಐ ಚಿತ್ರ   

ಜೈಪುರ: ರಾಜಸ್ಥಾನದ ವಿಧಾನಸಭೆ ಚುನಾವಣೆಗೆ ಒಂದು ವರ್ಷಕ್ಕಿಂತಲೂ ಹೆಚ್ಚು ಸಮಯವಿದ್ದು, ಯಾವುದೇ ವಿಳಂಬ ಮಾಡದೆ ನಾನು ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಬೇಕು ಎಂದು ಕಾಂಗ್ರೆಸ್ ಮುಖಂಡ ಸಚಿನ್ ಪೈಲಟ್, ಪಕ್ಷದ ಮಧ್ಯಂತರ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ತಿಳಿಸಿದ್ದಾರೆ ಎಂದು ಮೂಲಗಳನ್ನು ಉದ್ದೇಶಿಸಿ ಎನ್‌ಡಿಟಿವಿ ವರದಿ ಮಾಡಿದೆ.

ಇಲ್ಲವಾದರೆ, ಪಂಜಾಬ್‌ನಲ್ಲಿ ಕೊನೆ ಘಳಿಗೆಯಲ್ಲಿ ಚರಣ್‌ಜಿತ್ ಚನ್ನಿಗೆ ಪಟ್ಟ ಕಟ್ಟಿ ಪಕ್ಷ ಸೋಲುಂಡ ರೀತಿಯೇ ಇಲ್ಲಿಯೂ ಆಗಲಿದೆ ಎಂದು ಸೋನಿಯಾ ಮತ್ತು ಪ್ರಿಯಾಂಕಾ ಗಾಂಧಿಯವರಿಗೆ ಪೈಲಟ್ ಸ್ಪಷ್ಟಪಡಿಸಿದ್ದಾರೆ.

ಈ ಕುರಿತಂತೆ, ಸೋನಿಯಾ, ರಾಹುಲ್ ಮತ್ತು ಪ್ರಿಯಾಂಕಾ ಜೊತೆ ಮೂರು ಸುತ್ತಿನ ಮಾತುಕತೆ ನಡೆಸಿದ್ದಾರೆ.

ADVERTISEMENT

2023ರ ಡಿಸೆಂಬರ್‌ನಲ್ಲಿ ರಾಜಸ್ಥಾನದ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮುಖ್ಯಮಂತ್ರಿ ಬದಲಾವಣೆ ವಿಳಂಬವಾದರೆ ಪಂಜಾಬ್‌ನ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಸಚಿನ್ ಪೈಲಟ್, ವರಿಷ್ಠರಿಗೆ ಸ್ಪಷ್ಟಪಡಿಸಿರುವುದಾಗಿ ತಿಳಿದುಬಂದಿದೆ.

ಎರಡು ವರ್ಷಗಳ ಹಿಂದೆ 18 ಬೆಂಬಲಿಗ ಶಾಸಕರ ಜೊತೆ ಪೈಲಟ್, ಸಿಎಂ ಅಶೋಕ್ ಗೆಹಲೋತ್ ವಿರುದ್ಧ ಬಂಡಾಯವೆದ್ದಿದ್ದರು. ಕೆಲ ವಾರಗಳ ಸಂಧಾನದ ಬಳಿಕ ಬೆಂಬಲಿಗರಿಗೆ ಸಂಪುಟದಲ್ಲಿ ಅವಕಾಶ ಕಲ್ಪಿಸುವುದಾಗಿ ಭರವಸೆ ನೀಡಿ ಭಿನ್ನಮತ ಶಮನಗೊಳಿಸಲಾಗಿತ್ತು.

ಕಳೆದ ತಿಂಗಳು, ಗಾಂಧಿ ಕುಟುಂಬದ ಜೊತೆಗಿನ ಮಾತುಕತೆ ವೇಳೆ, ತಮ್ಮ ತಾಳ್ಮೆಯ ಕಟ್ಟೆ ಒಡೆದಿದೆ ಎಂದು ಪೈಲಟ್ ಸ್ಪಷ್ಟಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

ಆದರೆ, ಮುಖ್ಯಮಂತ್ರಿ ಅಶೋಕ್ ಗೆಹಲೋತ್ ಅವರಿಗೆ ಶಾಸಕರ ಬಹುಮತವಿದೆ. ಸೋನಿಯಾ ಗಾಂಧಿಯವರಿಗೂ ಅವರ ಮೇಲೆ ವಿಶ್ವಾಸವಿದೆ ಎಂದು ಹೇಳಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.