ADVERTISEMENT

‘ಜಂಟಿ ಸಂಸದೀಯ ಸಮಿತಿ’ಯಿಂದ ಕಾಂಗ್ರೆಸ್‌ ಹೊರಗುಳಿಯುವ ಸಾಧ್ಯತೆ

ಪಿಟಿಐ
Published 29 ಸೆಪ್ಟೆಂಬರ್ 2025, 13:29 IST
Last Updated 29 ಸೆಪ್ಟೆಂಬರ್ 2025, 13:29 IST
.
.   

ನವದೆಹಲಿ: ಗಂಭೀರ ಆರೋಪ ಪ್ರಕರಣಗಳಲ್ಲಿ ಬಂಧನಕ್ಕೆ ಒಳಗಾಗಿ 30 ದಿನ ಜೈಲಿನಲ್ಲಿರುವ ಸರ್ಕಾರದ ಉನ್ನತ ಅಧಿಕಾರಿಗಳನ್ನು ಹುದ್ದೆಯಿಂದ ವಜಾಗೊಳಿಸುವ ಮೂರು ಮಸೂದೆಗಳ ಪರಿಶೀಲನೆಗೆ ರಚನೆಯಾಗಿರುವ ‘ಜಂಟಿ ಸಂಸದೀಯ ಸಮಿತಿ’ಯಿಂದ ಕಾಂಗ್ರೆಸ್‌ ಪಕ್ಷವು ಹೊರಗುಳಿಯುವ ಸಾಧ್ಯತೆ ಇದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಪಕ್ಷದ ನಿರ್ಣಯವನ್ನು ಲೋಕಸಭೆಯಲ್ಲಿ ಶೀಘ್ರವೇ ಪ್ರಕಟಿಸಲಾಗುತ್ತದೆ ಎಂದು ಅವು ತಿಳಿಸಿವೆ.

ಟಿಎಂಸಿ, ಎಎಪಿ ಮತ್ತು ಶಿವಸೇನೆ (ಯುಬಿಟಿ) ಪಕ್ಷಗಳು ಸಮಿತಿಯಿಂದ ಹೊರಗುಳಿಯುವುದಾಗಿ ಈಗಾಗಲೇ ತಿಳಿಸಿವೆ. ಸಮಾಜವಾದಿ ಪಕ್ಷವು ಸಮಿತಿಯಿಂದ ದೂರ ಇರುವ ಸುಳಿವು ನೀಡಿದೆ. ಕೆಲವು ವಿರೋಧ ಪಕ್ಷಗಳು ಸಾರ್ವಜನಿಕವಾಗಿ ಯಾವುದೇ ಅಭಿಪ್ರಾಯವನ್ನು ಪ್ರಕಟಿಸಿಲ್ಲ. ಆದರೆ ಸಮಿತಿಯನ್ನು ಸೇರುವ ಇಂಗಿತ ವ್ಯಕ್ತಪಡಿಸಿವೆ.

ADVERTISEMENT

ಸಮಿತಿಯನ್ನು ಬಹಿಷ್ಕರಿಸುವ ಬಗ್ಗೆ ಯಾವುದೇ ರಾಜಕೀಯ ಪಕ್ಷವು ಲಿಖಿತ ಅಭಿಪ್ರಾಯವನ್ನು ಸಲ್ಲಿಸಿಲ್ಲ ಎಂದು ಲೋಕಸಭೆಯ ಸ್ಪೀಕರ್‌ ಓಂ ಬಿರ್ಲಾ ಅವರು ಇದಕ್ಕೂ ಮುನ್ನ ತಿಳಿಸಿದ್ದಾರೆ.

ಬಂಧನಕ್ಕೆ ಒಳಗಾಗಿ 30 ದಿನ ಜೈಲಿನಲ್ಲಿದ್ದರೆ ಪ್ರಧಾನಿ, ಮುಖ್ಯಮಂತ್ರಿ ಹಾಗೂ ಸಚಿವರನ್ನು ಪದಚ್ಯುತಿಗೊಳಿಸಲಿಕ್ಕೆ ಈ ಮಸೂದೆಯು ಅನುವು ಮಾಡಿಕೊಡುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.