ADVERTISEMENT

ಕಾಂಗ್ರೆಸ್‌ ಅಧ್ಯಕ್ಷ ಚುನಾವಣೆ: ಚಟುವಟಿಕೆ ಬಿರುಸು

ಸೋನಿಯಾ ಭೇಟಿ ಮಾಡಿದ ವೇಣುಗೋಪಾಲ್

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2022, 19:30 IST
Last Updated 20 ಸೆಪ್ಟೆಂಬರ್ 2022, 19:30 IST
ಕೇರಳದ ಆಲಪ್ಪುಳ ಜಿಲ್ಲೆಯಲ್ಲಿ ರಾಹುಲ್‌ ಗಾಂಧಿ ಅವರ ನೇತೃತ್ವದಲ್ಲಿ 13ನೇ ದಿನದ ಭಾರತ್‌ ಜೋಡೊ ಯಾತ್ರೆ ಮಂಗಳವಾರ ನಡೆಯಿತು –ಪಿಟಿಐ ಚಿತ್ರ
ಕೇರಳದ ಆಲಪ್ಪುಳ ಜಿಲ್ಲೆಯಲ್ಲಿ ರಾಹುಲ್‌ ಗಾಂಧಿ ಅವರ ನೇತೃತ್ವದಲ್ಲಿ 13ನೇ ದಿನದ ಭಾರತ್‌ ಜೋಡೊ ಯಾತ್ರೆ ಮಂಗಳವಾರ ನಡೆಯಿತು –ಪಿಟಿಐ ಚಿತ್ರ   

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪಕ್ಷದ ಅಧ್ಯಕ್ಷರಾಗಲಿ ಎಂಬ ಕೂಗು ಇನ್ನಷ್ಟು ಬಲವಾಗಿದ್ದು, ಎರಡು ರಾಜ್ಯ ಘಟಕಗಳು ಈ ಸಂಬಂಧ ನಿರ್ಣಯ ಆಂಗೀಕರಿಸಿವೆ. ಈ ಮಧ್ಯೆ, ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಮಂಗಳವಾರ ಭೇಟಿ ಮಾಡಿದರು.

ರಾಹುಲ್ ಅಧ್ಯಕ್ಷತೆ ವಹಿಸಿಕೊಳ್ಳಲಿ ಎಂದು ಒತ್ತಾಯಿಸಿ ಜಾರ್ಖಂಡ್ ಹಾಗೂ ಹರಿಯಾಣ ಕಾಂಗ್ರೆಸ್ ಘಟಕಗಳು ಮಂಗಳವಾರ ನಿರ್ಣಯ ಅಂಗೀಕರಿಸಿವೆ. ಈವರೆಗೆ 10 ರಾಜ್ಯ ಘಟಕಗಳು ಇದೇ ವಿಚಾರವಾಗಿ ನಿರ್ಣಯ ಅಂಗೀಕರಿಸಿವೆ. ಮೂಲಗಳ ಪ್ರಕಾರ, ರಾಹುಲ್ ಅವರು ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆಯಿಲ್ಲ. ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ನಡೆಯುವ ಸೆ.24ರಿಂದ 30ರ ಅವಧಿಯಲ್ಲಿ ಅವರು ದೆಹಲಿಗೆ ಭೇಟಿ ನೀಡುವ ಸಾಧ್ಯತೆಯೂ ಇಲ್ಲ ಎನ್ನಲಾಗಿದೆ.

‘ಭಾರತ್ ಜೋಡೊ ಯಾತ್ರೆ’ಯಲ್ಲಿ ಕಳೆದ ಎರಡು ವಾರಗಳಿಂದ ಭಾಗಿಯಾ
ಗಿದ್ದ ವೇಣುಗೋಪಾಲ್ ಅವರು ಮಂಗಳವಾರ ದೆಹಲಿಗೆ ಬಂದರು. ಅಧ್ಯಕ್ಷೀಯ ಸ್ಥಾನದ ಆಕಾಂಕ್ಷಿ ಶಶಿ ತರೂರ್ ಅವರು ಸೋನಿಯಾ ಅವರನ್ನು ಭೇಟಿಯಾದ ಮರುದಿನ ವೇಣುಗೋಪಾಲ್ ಸೋನಿಯಾ ಮನೆಗೆ ತೆರಳಿ ಮಾತುಕತೆ ನಡೆಸಿದರು. ಅಧ್ಯಕ್ಷೀಯ ಚುನಾವಣೆ ಸಂಬಂಧ ಸೋನಿಯಾ ಅವರ ಜೊತೆ ಮಾತುಕತೆ ನಡೆಸಲಾಗಿದೆ ಎಂಬುದನ್ನು ವೇಣುಗೋಪಾಲ್ ತಳ್ಳಿಹಾಕಿದ್ದಾರೆ. ‘ಇದೊಂದು ಸಹಜ ಭೇಟಿ. ಪಕ್ಷ ಸಂಘಟನೆ ಬಗ್ಗೆ ಮಾತುಕತೆ ನಡೆಯಿತು’ ಎಂದು ಸ್ಪಷ್ಟಪಡಿಸಿದ್ದಾರೆ.

ADVERTISEMENT

ರಾಹುಲ್ ಪರವಾಗಿ ರಾಜ್ಯ ಘಟಕಗಳು ನಿರ್ಣಯ ಅಂಗೀಕರಿಸುವ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಇದರಲ್ಲಿ ತಪ್ಪೇನಿಲ್ಲ. ಹಾಗೆ ಮಾಡಲು ಸ್ವಾತಂತ್ರ್ಯವಿದೆ’ ಎಂದಿದ್ದಾರೆ.

ಶಶಿ ತರೂರ್ ಅವರು ಪಕ್ಷದ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿರುವುದಕ್ಕೆ ಕೇರಳ ಕಾಂಗ್ರೆಸ್‌ ಮುಖಂಡರು ವಿರೋಧ ವ್ಯಕ್ತಪಡಿಸಿದ್ದಾರೆ. ಮತ್ತೊಬ್ಬ ಸಂಭಾವ್ಯ ಅಭ್ಯರ್ಥಿ, ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹಲೋತ್ ಅವರು ಬುಧವಾರ ದೆಹಲಿಗೆ ಭೇಟಿ ನೀಡುವ ಸಾಧ್ಯತೆಯಿದೆ. ಅದಕ್ಕೂ ಮುನ್ನ ಪಕ್ಷದ ಶಾಸಕರನ್ನು ಭೇಟಿ ಮಾಡಲು ಮುಂದಾಗಿದ್ದಾರೆ.

‘ಭಾರತ್‌ ಜೋಡೊ’ ಯಾತ್ರೆ 13ನೇ ದಿನಕ್ಕೆ

ಆಲಪ್ಪುಳ:ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ‘ಭಾರತ್ ಜೋಡೊ’ 13ನೇ ದಿನದ ಯಾತ್ರೆಯನ್ನು ಮಂಗಳವಾರ ಪಕ್ಷದ ಸಾವಿರಾರು ಕಾರ್ಯಕರ್ತರೊಂದಿಗೆ ಚೇರ್ತಲದಿಂದ ಪ್ರಾರಂಭಿಸಿದರು.

ಸೇಂಟ್‌ ಮೈಕೆಲ್‌ ಕಾಲೇಜಿನ ಆವರಣದಲ್ಲಿ ರಂಬೂಟನ್‌ ಸಸಿಗಳನ್ನು ನೆಡುವ ಮೂಲಕ ಯಾತ್ರೆ ಆರಂಭಿಸಲಾಯಿತು. ಸಸಿ ನೆಡುವ ಕಾರ್ಯಕ್ರಮವನ್ನು ಪಕ್ಷದ ಕೇರಳ ಘಟಕದ ಪರಿಸರ ವಿಭಾಗ ಶಸ್ತ್ರವೇದಿ ಆಯೋಜಿಸಿತ್ತು. ಬೆಳಿಗ್ಗೆ ಅವಧಿಯ 15 ಕಿ.ಮೀ. ಪಾದಯಾತ್ರೆ ಕುಥಿಯಾಥೋಡುನಲ್ಲಿ ಕೊನೆಯಾಯಿತು. ಕೇರಳದಲ್ಲಿ ಇನ್ನು 12 ದಿನಗಳಲ್ಲಿ 255 ಕಿ.ಮೀ. ಯಾತ್ರೆ ನಡೆಯಲಿದೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.