ನವದೆಹಲಿ: ಬಿಹಾರದಲ್ಲಿ ನಡೆದ ಮತದಾರರ ಪಟ್ಟಿಯ ‘ವಿಶೇಷ ಸಮಗ್ರ ಪರಿಷ್ಕರಣೆ’ (ಎಸ್‌ಐಆರ್) ವಿಚಾರವಾಗಿ ಕಾಂಗ್ರೆಸ್ ಪಕ್ಷವು ಚುನಾವಣಾ ಆಯೋಗದ ವಿರುದ್ಧ ಮಂಗಳವಾರ ಮತ್ತೊಮ್ಮೆ ಟೀಕಾಪ್ರಹಾರ ನಡೆಸಿದೆ.
‘ಭಾರತೀಯ ಪೌರರಲ್ಲದವರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕುವುದಕ್ಕಾಗಿ ಆಯೋಗವು ಬಹಳ ಮುತುವರ್ಜಿಯಿಂದ ಎಸ್‌ಐಆರ್ ನಡೆಸಿದೆ. ಆದರೆ, ಭಾರತೀಯ ಪೌರತ್ವ ಹೊಂದಿರದ ಎಷ್ಟು ಜನರ ಹೆಸರುಗಳನ್ನು ಪಟ್ಟಿಯಿಂದ ತೆಗೆದು ಹಾಕಲಾಗಿದೆ ಎಂಬುದನ್ನು ದೇಶಕ್ಕೆ ತಿಳಿಸುವ ಧೈರ್ಯ ಅಥವಾ ನೈತಿಕತೆಯನ್ನು ಆಯೋಗ ಹೊಂದಿಲ್ಲ’ ಎಂದು ವಾಗ್ದಾಳಿ ನಡೆಸಿದೆ.
‘ಬಿಹಾರದಲ್ಲಿ ನಡೆದ ಎಸ್‌ಐಆರ್ ವೇಳೆ, ಎಷ್ಟು ಜನ ವಿದೇಶಿಯರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಲಾಗಿದೆ ಎಂಬ ಬಗ್ಗೆ ಆಯೋಗವು ಮಾಹಿತಿ ನೀಡಿದಲ್ಲಿ, ಅದರ ವೈಫಲ್ಯವು ಮತ್ತಷ್ಟು ಬಹಿರಂಗವಾಗಲಿದೆ’ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್ ಹೇಳಿದ್ದಾರೆ.
ಈ ಕುರಿತು ‘ಎಕ್ಸ್’ ವೇದಿಕೆಯಲ್ಲಿ ಪೋಸ್ಟ್ ಮಾಡಿರುವ ಅವರು, ಎಸ್‌ಐಆರ್ ಕುರಿತಂತೆ ಪತ್ರಿಕೆಯೊಂದರಲ್ಲಿ ಪ್ರಕಟವಾಗಿರುವ ವಿಶ್ಲೇಷಣೆಯನ್ನು ಹಂಚಿಕೊಂಡಿದ್ದಾರೆ.
‘ಎಸ್ಐಆರ್ ವಿಷಯದಲ್ಲಿ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿದ ಕಾರಣ, ಭಾರಿ ಪ್ರಮಾಣದಲ್ಲಿ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗುತ್ತಿತ್ತು ಎಂಬ ಭಯ ನಿವಾರಣೆಯಾಗಿದೆ. ಆದರೆ, ಈಗ ಸಿದ್ಧಪಡಿಸಲಾಗಿರುವ ಪಟ್ಟಿಯ ನಿಖರತೆ ಹಾಗೂ ಪಾರದರ್ಶಕತೆ ಬಗ್ಗೆ ಹಲವು ಪ್ರಶ್ನೆಗಳನ್ನು ವಿಶ್ಲೇಷಣೆ ಮುಂದಿಟ್ಟಿದೆ’ ಎಂದು ಅವರು ಹೇಳಿದ್ಧಾರೆ.
ನಿಖರವಾಗಿ ಪರಿಪೂರ್ಣತೆಯಿಂದ ಕೂಡಿದ ಹಾಗೂ ನಿಷ್ಪಕ್ಷಪಾತವಾಗಿ ಎಸ್‌ಐಆರ್ ನಡೆಸುವಲ್ಲಿನ ಚುನಾವಣಾ ಆಯೋಗದ ವೈಫಲ್ಯವನ್ನು ವಿಶ್ಲೇಷಣೆ ಚೆನ್ನಾಗಿ ವಿವರಿಸಿದೆಜೈರಾಮ್ ರಮೇಶ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.