ADVERTISEMENT

ಉತ್ತರಾಖಂಡ ಹಿಂದುಳಿಯಲು ಕಾಂಗ್ರೆಸ್ ಕಾರಣ: ಮೋದಿ ಟೀಕೆ

ಪಿಟಿಐ
Published 30 ಡಿಸೆಂಬರ್ 2021, 18:30 IST
Last Updated 30 ಡಿಸೆಂಬರ್ 2021, 18:30 IST
   

ಹಲ್ದ್‌ವಾನಿ/ಡೆಹ್ರಾಡೂನ್‌: ‘ಕೇಂದ್ರ ಮತ್ತು ಉತ್ತರಾಖಂಡದಲ್ಲಿ ಈ ಹಿಂದೆ ಆಡಳಿತ ನಡೆಸಿದ್ದ ಕಾಂಗ್ರೆಸ್‌ ದಶಕಗಳ ಕಾಲ ಅಭಿವೃದ್ಧಿ ಯೋಜನೆಗಳನ್ನು ಚುರುಕುಗೊಳಿಸಲಿಲ್ಲ. ಅದರಿಂದಾಗಿ ರಾಜ್ಯದ ಗ್ರಾಮೀಣ ಭಾಗದ ಜನರು ವಲಸೆ ಹೋಗಬೇಕಾಯಿತು’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ದೂಷಿಸಿದರು.

ಉತ್ತರಾಖಂಡದ ಹಲ್ದ್‌ವಾನಿಯಲ್ಲಿ ನಡೆದ ರ‍್ಯಾಲಿಯಲ್ಲಿ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಉತ್ತರಾಖಂಡದ ಕಾಂಗ್ರೆಸ್‌ ಸರ್ಕಾರ ಲೂಟಿ ಮಾಡುವುದರಲ್ಲಿ ಮಾತ್ರ ಆಸಕ್ತಿ ತೋರಿತು ಎಂದರು.

ಇದೇ ವೇಳೆ, ₹5,747 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಲಖ್ವಾಡ್‌ ಜಲವಿದ್ಯುತ್‌ ಘಟಕವನ್ನು ಅವರು ಉದ್ಘಾಟಿಸಿದರು. ಅಲ್ಲದೆ, ₹12,000 ಕೋಟಿ ವೆಚ್ಚದ ವಿವಿಧ ಯೋಜನೆಗಳಿಗೆ ಶಿಲಾನ್ಯಾಸ ನೆರವೇರಿಸಿದರು.

ADVERTISEMENT

‘ಲಖ್ವಾಡ್‌ ಯೋಜನೆ ಕುರಿತು ಮಾತನಾಡಿದ ಅವರು, 1974ರಲ್ಲಿಯೇ ಈ ಯೋಜನೆ ರೂಪಿಸಲಾಗಿತ್ತು. ಆದರೆ ಅದು ಅನುಷ್ಠಾನಕ್ಕೆ ಬರಲು 46 ವರ್ಷಗಳು ಬೇಕಾದವು. ಲಖ್ವಾಡ್ ಯೋಜನೆ ಈ ಮೊದಲೇ ಜಾರಿ ಆಗಿದ್ದರೆ, ಉತ್ತರಾಖಂಡದಲ್ಲಿ ಕುಡಿಯುವ ನೀರು, ವಿದ್ಯುತ್‌, ನೀರಾವರಿ ಸಮಸ್ಯೆಗಳಿಗೆ ಪರಿಹಾರ ದೊರಕುತ್ತಿತ್ತು. ಇಂಥ ಯೋಜನೆಯನ್ನು ಇಷ್ಟು ವರ್ಷಗಳ ಕಾಲ ವಿಳಂಬ ಮಾಡಿದ್ದು ಈ ಹಿಂದೆ ಆಡಳಿತ ನಡೆಸಿದವರು ಮಾಡಿದ ಪಾಪ ಕೃತ್ಯವಲ್ಲವೇ. ನೀವು ಈ ಪಾಪ ಕೃತ್ಯವನ್ನು ಕ್ಷಮಿಸುತ್ತೀರಾ’ ಎಂದು ಅವರು ಜನರನ್ನು ಕೇಳಿದರು.

‘ಸಮರ್ಪಕ ರಸ್ತೆಗಳು ಮತ್ತು ಇತರ ಸೌಲಭ್ಯಗಳು ಇಲ್ಲವಾದ ಕಾರಣ ಉತ್ತರಾಖಂಡದ ಹಲವು ತಲೆಮಾರುಗಳು ತಮ್ಮ ಮನೆಗಳನ್ನು ತೊರೆಯಬೇಕಾಯಿತು. ನಾನು ಹೃದಯಪೂರ್ವಕ ಮತ್ತು ಆತ್ಮಪೂರ್ವಕವಾಗಿ ಉತ್ತರಾಖಂಡದ ಏಳಿಗೆಗಾಗಿ ಕೆಲಸ ಮಾಡುತ್ತಿದ್ದೇನೆ’ ಎಂದರು. ಈ ತಿಂಗಳಲ್ಲಿ ಮೋದಿ ಅವರು ಉತ್ತರಾಖಂಡಕ್ಕೆ ಭೇಟಿ ನೀಡುತ್ತಿರುವುದು ಇದು ಎರಡನೇ ಬಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.