ADVERTISEMENT

ಕಾಂಗ್ರೆಸ್‌ನಿಂದ ನ.1ರಿಂದ ಮಾರ್ಚ್‌ 31ರ ವರೆಗೆ ಬೃಹತ್‌ ಸದಸ್ಯತ್ವ ಅಭಿಯಾನ

ಮುಖ್ಯ ವಕ್ತಾರ ರಣದೀಪ್‌ ಸುರ್ಜೇವಾಲಾ ಹೇಳಿಕೆ

ಪಿಟಿಐ
Published 26 ಅಕ್ಟೋಬರ್ 2021, 12:31 IST
Last Updated 26 ಅಕ್ಟೋಬರ್ 2021, 12:31 IST
ರಣದೀಪ್‌ ಸುರ್ಜೇವಾಲಾ
ರಣದೀಪ್‌ ಸುರ್ಜೇವಾಲಾ   

ನವದೆಹಲಿ: ‘ಪಕ್ಷವ‌ನ್ನು ಬಲಪಡಿಸುವ ಸಲುವಾಗಿ ನವೆಂಬರ್ 1ರಿಂದ ಮುಂದಿನ ಮಾರ್ಚ್ 31ರ ವರೆಗೆ ರಾಷ್ಟ್ರವ್ಯಾಪಿ ಬೃಹತ್‌ ಸದಸ್ಯತ್ವ ಅಭಿಯಾನ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ’ ಎಂದು ಕಾಂಗ್ರೆಸ್‌ನ ಮುಖ್ಯ ವಕ್ತಾರ ರಣದೀಪ್‌ ಸುರ್ಜೇವಾಲಾ ಮಂಗಳವಾರ ತಿಳಿಸಿದ್ದಾರೆ.

ಪಕ್ಷದ ಪ್ರಧಾನ ಕಾರ್ಯದರ್ಶಿಗಳು, ರಾಜ್ಯಗಳ ಉಸ್ತುವಾರಿಗಳು ಹಾಗೂ ಪ್ರದೇಶ ಕಾಂಗ್ರೆಸ್‌ ಸಮಿತಿಗಳ ಅಧ್ಯಕ್ಷರ ವಿಶೇಷ ಸಭೆ ನಂತರ ಅವರು ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು.

‘ದೇಶದ ಪ್ರತಿ ವಾರ್ಡ್‌, ಗ್ರಾಮವನ್ನು ಪಕ್ಷ ತಲುಪಬೇಕು. ದೇಶವಾಸಿಗಳ ಆಕಾಂಕ್ಷೆಗಳಿಗೆ ಪಕ್ಷವು ವೇದಿಕೆಯಾಗಬೇಕು ಎಂದು ಸಭೆಯಲ್ಲಿ ನಿರ್ಧರಿಸಲಾಯಿತು. ಇದರ ಭಾಗವಾಗಿ ಸದಸ್ಯತ್ವ ಅಭಿಯಾನ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ’ ಎಂದು ಅವರು ಹೇಳಿದರು.

ADVERTISEMENT

‘ಮೊದಲ ಸಲ ಮತದಾನದ ಹಕ್ಕನ್ನು ಪಡೆಯಲಿರುವವರನ್ನು ಪಕ್ಷದ ಸದಸ್ಯರನ್ನಾಗಿಸಲು ಒತ್ತು ನೀಡಲಾಗುತ್ತದೆ’ ಎಂದೂ ಹೇಳಿದರು.

‘ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬುಡಮೇಲು ಮಾಡುವ ಯತ್ನಗಳು ನಡೆಯುತ್ತಿವೆ. ಕಾಂಗ್ರೆಸ್‌ ಪಕ್ಷದ ಸಿದ್ಧಾಂತದ ಮೇಲೆ ಬಿಜೆಪಿ, ಆರ್‌ಎಸ್‌ಎಸ್‌ನಿಂದ ಸತತ ದಾಳಿ ನಡೆಯುತ್ತಿದೆ. ನ್ಯಾಯ, ಸಮಾನತೆಯಂತಹ ಸಂವಿಧಾನದ ಮೂಲ ಅಂಶಗಳ ಮೇಲೂ ಆಕ್ರಮಣ ನಡೆಸಲಾಗುತ್ತಿದೆ. ಇಂಥ ಸೈದ್ಧಾಂತಿಕ ದಾಳಿಯನ್ನು ಎದುರಿಸುವ ಸಲುವಾಗಿ ಪಕ್ಷದ ಕಾರ್ಯಕರ್ತರಿಗೆ ತರಬೇತಿ ಶಿಬಿರಗಳನ್ನು ಹಮ್ಮಿಕೊಳ್ಳಲು ಸಹ ನಿರ್ಧರಿಸಲಾಗಿದೆ’ ಎಂದರು.

*

ಹಣದುಬ್ಬರ ವಿರುದ್ಧ ಕಾಂಗ್ರೆಸ್‌ ವತಿಯಿಂದ ದೇಶದಾದ್ಯಂತ ನ. 14ರಿಂದ 29ರ ವರೆಗೆ ‘ಜನ ಜಾಗರಣ ಅಭಿಯಾನ’ ಹೆಸರಿನಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ.
-ರಣದೀಪ್‌ ಸುರ್ಜೇವಾಲಾ,ಕಾಂಗ್ರೆಸ್‌ನ ಮುಖ್ಯ ವಕ್ತಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.