ADVERTISEMENT

ಶುಕ್ರವಾರದಿಂದ ಉದಯಪುರದಲ್ಲಿ ಕಾಂಗ್ರೆಸ್‌ ಚಿಂತನ ಶಿಬಿರ

​ಪ್ರಜಾವಾಣಿ ವಾರ್ತೆ
Published 11 ಮೇ 2022, 15:55 IST
Last Updated 11 ಮೇ 2022, 15:55 IST
   

ನವದೆಹಲಿ: ಉದಯಪುರದಲ್ಲಿ ಶುಕ್ರವಾರದಿಂದ ಮೂರು ದಿನಗಳ ಕಾಲ ನಡೆಯಲಿರುವ ಕಾಂಗ್ರೆಸ್‌ನ ಚಿಂತನ ಶಿಬಿರವು ಈ ಹಿಂದೆ ನಡೆದ ಶಿಬಿರಗಳಿಗಿಂತ ಭಿನ್ನವಾಗಿರಲಿದೆ. 2024ರ ಚುನಾವಣೆಯನ್ನು ಗುರಿಯಾಗಿಟ್ಟುಕೊಂಡು, ಕ್ರಿಯಾತ್ಮಕ ನಿರ್ಧಾರಗಳನ್ನು ಕಾರ್ಯಗತಗೊಳಿಸುವ ಮೂಲಕ ಸಂಘಟನೆಯನ್ನು ಪುನರುಜ್ಜೀವನಗೊಳಿಸುವ ಗುರಿ ಹೊಂದಿದೆ ಎಂದು ಮೂಲಗಳು ತಿಳಿಸಿವೆ.

ಶಿಬಿರದಲ್ಲಿ ತೆಗೆದುಕೊಳ್ಳುವ ನಿರ್ಣಯಗಳನ್ನು ಕೇವಲ ತಾತ್ವಿಕವಾಗಿ ಘೋಷಣೆ ಮಾಡುವುದಕ್ಕೆ ಆದ್ಯತೆ ನೀಡದೆ, ಅವುಗಳನ್ನು ನಿರ್ದಿಷ್ಟವಾಗಿ ಕಾರ್ಯಸಾಧ್ಯವಾಗಿಸುವುದರ ಮೂಲಕ ಪಕ್ಷದ ವಿವಿಧ ಕೇಡರ್‌ಗಳಿಗೆ ಸ್ಪಷ್ಟ ಸಂದೇಶ ನೀಡುವಂತಾಗಲಿದೆ. 2024ರ ಚುನಾವಣೆಗೆ ಯಾವ ರೀತಿಯಲ್ಲಿ ಸಜ್ಜಾಗಬೇಕು ಹಾಗೂ ಕ್ರಮಗಳ ಬಗ್ಗೆ ಚರ್ಚಿಸುವುದು ಪ್ರಮುಖ ಅಂಶವಾಗಿದೆ ಎಂದೂ ಮೂಲಗಳು ತಿಳಿಸಿವೆ.

ಚುನಾವಣೆಗಳಲ್ಲಿ ಸೋಲು ಹಾಗೂ ನಾಯಕತ್ವದ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಶಿಬಿರ ನಡೆಯುತ್ತಿದ್ದು, ಕಾಂಗ್ರೆಸ್‌ ತನ್ನ ಇತಿಹಾಸದಲ್ಲೇ ಕೆಟ್ಟ ಪರಿಸ್ಥಿತಿ ಎದುರಿಸುತ್ತಿದೆ. 1998ರಲ್ಲಿ ನಡೆದ ಪಚ್ಮರಿ ಸಮಾವೇಶದಲ್ಲಿ ಕಾಂಗ್ರೆಸ್ ಯಾವುದೇ ಮೈತ್ರಿ ಮಾಡಿಕೊಳ್ಳದಿರಲು ನಿರ್ಧರಿಸಿತು. 2003ರ ಶಿಮ್ಲಾ ಸಮಾವೇಶದಲ್ಲಿ ಈ ನಿರ್ಧಾರವನ್ನು ಹಿಂತೆಗೆದುಕೊಂಡಿತು. ಎರಡೂ ನಿರ್ಧಾರಗಳನ್ನು ಖಚಿತಪಡಿಸಿಕೊಳ್ಳಲು ನಿರ್ದಿಷ್ಟವಾದ ಕಾರ್ಯಸಾಧ್ಯವಾದ ಅಂಶಗಳು ಅಥವಾ ಮೇಲ್ವಿಚಾರಣಾ ಕಾರ್ಯವಿಧಾನವನ್ನು ಹೊಂದಿರಲಿಲ್ಲ. ಆದರೆ, ‘ನವ ಸಂಕಲ್ಪ’ ಘೋಷಣೆಯು ಅದರ ಅನುಷ್ಠಾನವನ್ನು ಪರಿಶೀಲಿಸಲು ಮೇಲ್ವಿಚಾರಣಾ ವ್ಯವಸ್ಥೆಯೊಂದಿಗೆ ಸ್ಪಷ್ಟವಾದ ಕ್ರಿಯಾಯೋಜನೆಯನ್ನು ನೀಡುವುದರಿಂದ ಉದಯಪುರ ಸಮಾವೇಶವು ವಿಭಿನ್ನವಾಗಿರುತ್ತದೆ ಎಂದು ಹಿರಿಯ ನಾಯಕರೊಬ್ಬರು ಹೇಳಿದರು.

ADVERTISEMENT

‘2003ರ ಸಮಾವೇಶದ ಸಮಯದಲ್ಲಿ, ಕಾಂಗ್ರೆಸ್ ಪ್ರತಿಪಕ್ಷದಲ್ಲಿದ್ದರೂ ಹನ್ನೆರಡು ಮುಖ್ಯಮಂತ್ರಿಗಳನ್ನು ಹೊಂದಿತ್ತು. ಈಗ ಉದಯಪುರ ಸಮಾವೇಶದ ಸಮಯದಲ್ಲಿ ಕೇವಲ ಎರಡು ರಾಜ್ಯಗಳಲ್ಲಿ ಅಧಿಕಾರದಲ್ಲಿದೆ. ಹೀಗಾಗಿ ಈ ಶಿಬಿರವು ಹಿಂದಿನ ರೀತಿಯ ಸಮಾವೇಶಗಳಿಗಿಂತ ಭಿನ್ನವಾಗಿರಲಿದೆ’ ಎಂದು ಮೂಲಗಳು ತಿಳಿಸಿವೆ.

‘ಮೈತ್ರಿಯ ಬಗ್ಗೆ ಯಾವುದೇ ನಿರ್ಧಾರವನ್ನು ನಿರೀಕ್ಷಿಸದಿದ್ದರೂ, ಕಾಂಗ್ರೆಸ್ ದುರ್ಬಲವಾಗಿದ್ದರೆ, ಪರಿಣಾಮಕಾರಿ ಮೈತ್ರಿ ಸಾಧ್ಯವಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ರವಾನಿಸುವ ಸಾಧ್ಯತೆಯಿದೆ. ಕಾಂಗ್ರೆಸ್ ಬಲಿಷ್ಠವಾಗಿದ್ದರೆ ಮೈತ್ರಿಯೂ ಪರಿಣಾಮಕಾರಿಯಾಗಲಿದೆ. ನಾವು ಬದಲಾಗದಿದ್ದರೆ ಕಾಂಗ್ರೆಸ್ ಮಾತ್ರವಲ್ಲ ಇಡೀ ಮೈತ್ರಿಕೂಟವೇ ಸಂಕಷ್ಟಕ್ಕೆ ಸಿಲುಕಲಿದೆ’ ಎಂದು ಮೂಲಗಳು ತಿಳಿಸಿವೆ.

ಮುಖಂಡ ದಿಗ್ವಿಜಯ ಸಿಂಗ್ ನೇತೃತ್ವದ ಸಮಿತಿಯು ಸಿದ್ಧಪಡಿಸಿದ ಮುಂದಿನ ಎರಡು ವರ್ಷಗಳ ಹೋರಾಟ ಮತ್ತು ಪಕ್ಷವನ್ನು ಬಲಪಡಿಸುವ ಮಾರ್ಗಸೂಚಿಯ ಮೇಲೆ ಶಿಬಿರದಲ್ಲಿ ಚರ್ಚೆಗಳು ನಡೆಯಲಿವೆ. ಆಯಾ ರಾಜ್ಯಗಳು ತಮ್ಮದೇ ಆದ ಸಮಸ್ಯೆಗಳನ್ನು ಹೊಂದಿರುವ ಕಾರಣ, ಮಾರ್ಗಸೂಚಿಯು ರಾಜ್ಯಗಳಿಗಾಗಿ ನಿರ್ದಿಷ್ಟ ಹೋರಾಟದ ರೂಪುರೇಷೆ ಹೊಂದಿರಲಿದೆ. ರೈತರು ಮತ್ತು ಕೃಷಿ ಕಾರ್ಮಿಕರ ಕುರಿತೂ ಚರ್ಚೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.