ADVERTISEMENT

ರಾಹುಲ್ ಮತ್ತೆ ಅಧ್ಯಕ್ಷರಾಗಲಿ: ಕಾಂಗ್ರೆಸ್‌ನಲ್ಲಿ ಹೆಚ್ಚಾಗುತ್ತಿದೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2019, 4:59 IST
Last Updated 12 ಡಿಸೆಂಬರ್ 2019, 4:59 IST
ರಾಹುಲ್ ಗಾಂಧಿ
ರಾಹುಲ್ ಗಾಂಧಿ   

ನವದೆಹಲಿ: ಕಾಂಗ್ರೆಸ್‌ ಪಕ್ಷದ ಅಧ್ಯಕ್ಷ ಸ್ಥಾನವನ್ನುರಾಹುಲ್‌ ಗಾಂಧಿ ಮತ್ತೆ ಒಪ್ಪಿಕೊಳ್ಳಬೇಕು ಎಂದು ಆಗ್ರಹಿಸುವ ಚಳವಳಿ ‘ರಾಹುಲ್ ರಾಗ’ಕಾಂಗ್ರೆಸ್‌ನಲ್ಲಿ ದಿನದಿಂದ ದಿನಕ್ಕೆ ಕಾವು ಪಡೆಯುತ್ತಿದೆ.

ರಾಜಸ್ಥಾನ ಸರ್ಕಾರದ ಸಚಿವರೊಬ್ಬರು ಬುಧವಾರ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿ ‘ರಾಹುಲ್ ಗಾಂಧಿ ಮತ್ತೆ ಪಕ್ಷದ ಅಧ್ಯಕ್ಷರಾಗಬೇಕು’ ಎಂದು ತಮ್ಮ ಅಭಿಪ್ರಾಯ ಮಂಡಿಸಿದ್ದು ಈ ಆಂದೋಲನದ ಹೊಸ ಬೆಳವಣಿಗೆ.

‘ಕೇಂದ್ರದಲ್ಲೀಗ ನರೇಂದ್ರ ಮೋದಿ ಅವರಂಥ ಪ್ರಬಲ ನಾಯಕರ ನೇತೃತ್ವದ ಸರ್ಕಾರವಿದೆ. ಇಂಥ ಹೊತ್ತಿನಲ್ಲಿ ರಾಹುಲ್ ಗಾಂಧಿ ಕಾಂಗ್ರೆಸ್‌ಗೆ ಬಲ ತುಂಬಬಲ್ಲರು ಎನ್ನುವ ನನ್ನ ಅಭಿಪ್ರಾಯವನ್ನು ಸೋನಿಯಾ ಗಾಂಧಿಗೆ ತಿಳಿಸಿದೆ’ಎಂದು ರಾಜಸ್ಥಾನದ ಸಚಿವ ರಮೇಶ್‌ ಮೀನಾ ನುಡಿದರು.

ADVERTISEMENT

ಈ ವಿಚಾರದ ಬಗ್ಗೆ ನಮ್ಮ ಅನಿಸಿಕೆ ಹಂಚಿಕೊಳ್ಳಲು ಸೋನಿಯಾ ಗಾಂಧಿ ಅವಕಾಶ ಮಾಡಿಕೊಟ್ಟರು ಎಂದು ಮೀನಾ ಹೇಳಿದರು.

‘ಕಾಂಗ್ರೆಸ್ ಪಕ್ಷವನ್ನು ರಾಹುಲ್‌ ಗಾಂಧಿ ನಿರ್ವಹಿಸಬಲ್ಲರು’ ಎಂದು ಈಚೆಗಷ್ಟೇ ಛತ್ತೀಸಗಡದ ಮುಖ್ಯಮಂತ್ರಿ ಭೂಪೇಶ್‌ ಬಘೇಲ್ ಹೇಳಿಕೆ ನೀಡಿದ್ದರು.

‘ದೇಶದ ಇಂದಿನ ಪರಿಸ್ಥಿತಿಯಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ರಾಹುಲ್‌ ಗಾಂಧಿಯವರ ನಾಯಕತ್ವ ಅತ್ಯಗತ್ಯ. ಪಕ್ಷದ ಕಾರ್ಯಕರ್ತರು ಅದನ್ನೇ ಹೇಳುತ್ತಿದ್ದಾರೆ’ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಹೇಳಿದ್ದರು.ಕಾಂಗ್ರೆಸ್‌ ಪಕ್ಷದಲ್ಲಿ ರಾಹುಲ್ ಅವರನ್ನು ಮತ್ತೆ ಅಧ್ಯಕ್ಷ ಸ್ಥಾನಕ್ಕೆ ಕರೆತರುವ ‘ರಾಹುಲ್ ರಾಗ’ ಪ್ರಯತ್ನಗಳು ಗಂಭೀರವಾಗಿ ಆರಂಭವಾಗಿವೆ.

ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಕಳಪೆ ಸಾಧನೆಯ ಹೊಣೆ ಹೊತ್ತು ರಾಹುಲ್ ಗಾಂಧಿ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಹಲವು ದಿನಗಳ ನಂತರ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ ರಾಜೀನಾಮೆಯನ್ನು ಅಂಗೀಕರಿಸಿ, ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಪಕ್ಷದ ಹಂಗಾಮಿ ಅಧ್ಯಕ್ಷೆಯಾಗಿ ನಿಯೋಜಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.