ADVERTISEMENT

ಭಾರತದ ಸಂವಿಧಾನ ಸರ್ಕಾರಕ್ಕೆ ಮಾರ್ಗದರ್ಶನ ಮಾಡುವ ಬೆಳಕು: ಪ್ರಧಾನಿ ಮೋದಿ

ಪಿಟಿಐ
Published 27 ಜೂನ್ 2020, 12:21 IST
Last Updated 27 ಜೂನ್ 2020, 12:21 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ನವದೆಹಲಿ/ತಿರುವಳ್ಳ (ಕೇರಳ): ‘ಭಾರತ ಸಂವಿಧಾನ ಸರ್ಕಾರಕ್ಕೆ ಮಾರ್ಗದರ್ಶನ ನೀಡುವ ಬೆಳಕು. ನಂಬಿಕೆ, ಲಿಂಗ, ಜಾತಿ ಮತ್ತು ಭಾಷೆಯ ಆಧಾರದಲ್ಲಿ ಕೇಂದ್ರ ಸರ್ಕಾರ ತಾರತಮ್ಯ ಮಾಡುವುದಿಲ್ಲ. 130 ಕೋಟಿ ಭಾರತೀಯರ ಅಭ್ಯುದಯವೇ ಸರ್ಕಾರದ ಬಯಕೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಕೇರಳದ ಪತನಂತಿಟ್ಟಾದಲ್ಲಿನ ಮರ್‌ ತೋಮಾಮೆಟ್ರೊಪಾಲಿಟನ್‌ನ ರೆವರಂಡ್ ಜೋಸೆಫ್‌ ಅವರ 90ನೇ ಜನ್ಮದಿನೋತ್ಸವ ಸಮಾರಂಭವನ್ನು ವಿಡಿಯೊ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದ ಅವರು, ಭಾರತವನ್ನು ಪ್ರಗತಿಪಥದಲ್ಲಿ ಒಯ್ಯುವ ದೀರ್ಘಾವಧಿ ಧ್ಯೇಯವನ್ನು ಸರ್ಕಾರ ಹೊಂದಿದೆ ಎಂದರು.

ದೆಹಲಿಯಲ್ಲಿ ಆರಾಮದಾಯಕ ಸ್ಥಿತಿಯಲ್ಲಿರುವ ಸರ್ಕಾರಿ ಕಚೇರಿಗಳಲ್ಲಿ ಕೇಂದ್ರ ಸರ್ಕಾರ ತೀರ್ಮಾನ ತೆಗೆದುಕೊಳ್ಳುತ್ತಿಲ್ಲ. ಸಾರ್ವಜನಿಕರ ಅಭಿಪ್ರಾಯಗಳ ಆಧಾರದಲ್ಲಿ ನಿರ್ಧಾರ ಕೈಗೊಳ್ಳಲಾಗುತ್ತಿದೆ. ಇಂಥ ಸ್ಪೂರ್ತಿಯೇ ಇಂದು ಪ್ರತಿಯೊಬ್ಬ ಭಾರತೀಯ ಬ್ಯಾಂಕ್‌ ಖಾತೆ ಹೊಂದಲು ಕಾರಣವಾಗಿದೆ ಎಂದು ಹೇಳಿದರು.

ADVERTISEMENT

ಆಯುಷ್ಮಾನ್ ಭಾರತ್‌ ವಿಶ್ವದಲ್ಲಿಯೇ ಅತಿದೊಡ್ಡ ಆರೋಗ್ಯ ರಕ್ಷಣೆ ಯೋಜನೆ. ಇದರಿಂದ ಕೋಟ್ಯಂತರ ಜನರು ಗುಣಮಟ್ಟ ಚಿಕಿತ್ಸೆ ಪಡೆಯಲು ಸಾಧ್ಯವಾಗಿದೆ. ವಿವಿಧ ಯೋಜನೆಗಳ ಮೂಲಕ ಮಹಿಳೆಯರ ಆರೋಗ್ಯ ರಕ್ಷಣೆಗೆ ಒತ್ತು ನೀಡಿದ್ದೇವೆ. ವೃತ್ತಿ ಬದುಕಿಗೆ ಧಕ್ಕೆಯಾಗದಂತೆ ಹೆರಿಗೆ ರಜೆ ವಿಸ್ತರಣೆಗೂ ಅವಕಾಶವಿದೆ’ ಎಂದರು.

ಬಡವರ ಜೀವನಮಟ್ಟ ಸುಧಾರಿಸಲು ಅನೇಕ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಬಡವರಿಗಾಗಿ ‘ಒಂದು ದೇಶ, ಒಂದೇ ಪಡಿತರ ಚೀಟಿ’ ರೂಪಿಸಲಾಗಿದೆ ಎಂದರು.

ಪ್ರಸ್ತುತ ಕೋವಿಡ್‌ ಬಿಕ್ಕಟ್ಟನ್ನೂ ದೇಶ ಒಟ್ಟಾಗಿ ಎದುರಿಸುತ್ತಿದೆ. ಈ ವರ್ಷದ ಆರಂಭದಲ್ಲಿ ಕೆಲವರು ಭಾರತದಲ್ಲಿ ಪರಿಸ್ಥಿತಿ ಗಂಭೀರವಾಗಲಿದೆ ಎಂದು ಅಂದಾಜು ಮಾಡಿದ್ದರು. ಲಾಕ್‌ಡೌನ್, ಮತ್ತಿತರ ಕ್ರಮಗಳು, ಜನರ ಸಹಕಾರದಿಂದ ಇತರೆ ದೇಶಗಳಿಗೆ ಹೋಲಿಸಿದರೆ ಭಾರತದ ಸ್ಥಿತಿ ಉತ್ತಮವಾಗಿದೆ ಎಂದು ಪ್ರತಿಪಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.