ಮುಂಬೈ: ‘ನ್ಯಾಯಾಂಗ ಅಥವಾ ಕಾರ್ಯಾಂಗ ಶ್ರೇಷ್ಠವಲ್ಲ. ಬದಲಿಗೆ ದೇಶದ ಸಂವಿಧಾನವೇ ಸರ್ವಶ್ರೇಷ್ಠವಾಗಿದ್ದು, ಅದರ ಎಲ್ಲ ಸ್ತಂಭಗಳು ಒಟ್ಟಾಗಿ ಕಾರ್ಯ ನಿರ್ವಹಿಸಬೇಕು’ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಪ್ರತಿಪಾದಿಸಿದ್ದಾರೆ.
ಮಹಾರಾಷ್ಟ್ರ ಮತ್ತು ಗೋವಾದ ಬಾರ್ ಕೌನ್ಸಿಲ್ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮ ಮತ್ತು ರಾಜ್ಯ ವಕೀಲರ ಸಮಾವೇಶ ಉದ್ದೇಶಿಸಿ ಅವರು ಭಾನುವಾರ ಮಾತನಾಡಿದರು.
ನ್ಯಾಯಾಂಗ, ಕಾರ್ಯಾಂಗ ಅಥವಾ ಸಂಸತ್ತು ಸರ್ವಶ್ರೇಷ್ಠವಲ್ಲ. ಆದರೆ, ಭಾರತದ ಸಂವಿಧಾನವೇ ಸರ್ವಶ್ರೇಷ್ಠವಾದದ್ದು. ಅದರ ಮೂರು ಅಂಗಗಳಾದ ನ್ಯಾಯಾಂಗ, ಕಾರ್ಯಾಂಗ ಮತ್ತು ಶಾಸಕಾಂಗ ಸಂವಿಧಾನದ ಪ್ರಕಾರ ಕಾರ್ಯ ನಿರ್ವಹಿಸಬೇಕು. ಸಂವಿಧಾನದ ಈ ಮೂರು ಅಂಗಗಳು ಸಮಾನವಾದವು ಎಂದರು.
ಸಂಸತ್ತಿಗೆ ಸಂವಿಧಾನವನ್ನು ತಿದ್ದುಪಡಿ ಮಾಡುವ ಅಧಿಕಾರವಿದೆ. ಆದರೆ, ಸಂವಿಧಾನದ ‘ಮೂಲ ಸ್ವರೂಪ’ವನ್ನು ಮುಟ್ಟಲಾಗದು. ಜೊತೆಗೆ ಆಶ್ರಯದ ಹಕ್ಕು ಸಹ ಶ್ರೇಷ್ಠವಾದದು ಎಂದರು. ಈ ಮೂಲಕ ‘ಬುಲ್ಡೊಜರ್ ನ್ಯಾಯ’ದ ಬಗ್ಗೆ ಪ್ರಸ್ತಾಪಿಸಿದರು.
ದೇಶವು ಕೇವಲ ಬಲಿಷ್ಠವಾಗುತ್ತಿದೆಯಷ್ಟೇ ಅಲ್ಲದೆ, ಸಾಮಾಜಿಕ ಮತ್ತು ಆರ್ಥಿಕವಾಗಿಯೂ, ಅಭಿವೃದ್ಧಿಯತ್ತ ಸಾಗುತ್ತಿದೆ ಎಂಬುದು ಸಂತಸದ ವಿಚಾರವಾಗಿದ್ದು, ಇದು ಮುಂದುವರಿಯಲಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.