ADVERTISEMENT

ಮಹಾರಾಷ್ಟ್ರದ ಸಹಕಾರ ಚಳವಳಿ ಮೇಲೆ ಕೇಂದ್ರದ ಹೊಸ ಸಚಿವಾಲಯ ಪರಿಣಾಮ ಬೀರದು: ಪವಾರ್‌

ಪಿಟಿಐ
Published 11 ಜುಲೈ 2021, 10:44 IST
Last Updated 11 ಜುಲೈ 2021, 10:44 IST
ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌
ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌   

ಪುಣೆ: ಕೇಂದ್ರ ಸರ್ಕಾರ ನೂತನ ಸಹಕಾರ ಸಚಿವಾಲಯ ರಚನೆ ಮಾಡಿದ್ದರೂ, ಮಹಾರಾಷ್ಟ್ರದಲ್ಲಿನ ಸಹಕಾರ ಚಳವಳಿಗೆ ಇದರಿಂದ ಯಾವುದೇ ರೀತಿಯ ಹಿನ್ನಡೆಯಾಗದು ಎಂದು ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಭಾನುವಾರ ಹೇಳಿದರು.

ಸಮೀಪದ ಬಾರಾಮತಿ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸಹಕಾರ ಸಚಿವಾಲಯ ರಚನೆ ಹೊಸ ಪರಿಕಲ್ಪನೆಯೇನಲ್ಲ. ಈ ಹಿಂದಿನ ಸರ್ಕಾರದಲ್ಲಿ ನಾನು ಸಚಿವನಾಗಿದ್ದಾಗ ಇಂಥ ಸಚಿವಾಲಯ ರಚಿಸಬೇಕು ಎಂಬ ಬಗ್ಗೆ ಚಿಂತನೆ ನಡೆದಿತ್ತು. ಆದರೆ, ಈಗ ಮಾಧ್ಯಮಗಳು ಈ ಸಚಿವಾಲಯದ ಬಗ್ಗೆ ಬೇರೆ ರೀತಿಯ ವ್ಯಾಖ್ಯಾನ ಮಾಡುತ್ತಿವೆ. ಮಹಾರಾಷ್ಟ್ರದಲ್ಲಿನ ಸಹಕಾರ ಚಳವಳಿಯನ್ನು ಕೇಂದ್ರದ ಈ ನಡೆ ನಾಶ ಮಾಡುತ್ತದೆ ಎಂದು ಬಿಂಬಿಸುತ್ತಿವೆ’ ಎಂದರು.

‘ರಾಜ್ಯಗಳಲ್ಲಿರುವ ಸಹಕಾರ ವಲಯದಲ್ಲಿ ಈ ಸಚಿವಾಲಯ ಹಸ್ತಕ್ಷೇಪ ಮಾಡಲು ಅವಕಾಶ ಇಲ್ಲ. ಸಂವಿಧಾನದ ಪ್ರಕಾರ, ರಾಜ್ಯಗಳಲ್ಲಿ ನೋಂದಣಿಯಾಗಿರುವ ಸಹಕಾರ ಸಂಸ್ಥೆಗಳು ಆಯಾ ರಾಜ್ಯಗಳ ಆಡಳಿತದ ವ್ಯಾಪ್ತಿಗೆ ಬರುತ್ತವೆ. ಒಂದಕ್ಕಿಂತ ಹೆಚ್ಚು ರಾಜ್ಯಗಳಲ್ಲಿ ನೋಂದಣಿ ಮಾಡಿಸಿರುವ ಸಹಕಾರ ಸಂಘಗಳು ನೂತನ ಸಹಕಾರ ಸಚಿವಾಲಯದ ವ್ಯಾಪ್ತಿಗೆ ಬರುತ್ತವೆ’ ಎಂದೂ ಅವರು ಹೇಳಿದರು.

ADVERTISEMENT

ಏಕರೂಪ ನಾಗರಿಕ ಸಂಹಿತೆ: ಪ್ರತಿಕ್ರಿಯಿಸಲು ನಕಾರ

‘ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೊಳಿಸಬೇಕೇ, ಬೇಡವೇ ಎಂಬ ಬಗ್ಗೆ ಈಗ ನಾನು ಪ್ರತಿಕ್ರಿಯೆ ನೀಡುವುದಿಲ್ಲ’ ಎಂದು ಶರದ್‌ ಪವಾರ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಈ ಕುರಿತು ಕೇಂದ್ರ ಸರ್ಕಾರ ಯಾವ ನಿಲುವು ತಳೆಯಲಿದೆ ಎಂಬುದನ್ನು ನಿರೀಕ್ಷಿಸುತ್ತಿದ್ದೇವೆ. ಕೇಂದ್ರ ತನ್ನ ನಿಲುವು ಸ್ಪಷ್ಟಪಡಿಸಿದರೆ, ಆಗ ನಾವು ಪ್ರತಿಕ್ರಿಯೆ ನೀಡಬಹುದು’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.