ADVERTISEMENT

ಕೋವಿಡ್‌: ಕರ್ನಾಟಕ ಸೇರಿ ಐದು ರಾಜ್ಯಗಳಲ್ಲೇ ಗುಣಮುಖರ ಸಂಖ್ಯೆ ಹೆಚ್ಚು

ಪಿಟಿಐ
Published 13 ಸೆಪ್ಟೆಂಬರ್ 2020, 19:47 IST
Last Updated 13 ಸೆಪ್ಟೆಂಬರ್ 2020, 19:47 IST
ಕೊರೊನಾ
ಕೊರೊನಾ   

ನವದೆಹಲಿ: ‘ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ, ಕರ್ನಾಟಕ ಹಾಗೂ ಉತ್ತರಪ್ರದೇಶದಲ್ಲಿ ಅತಿ ಹೆಚ್ಚು ಮಂದಿ ಕೋವಿಡ್‌–19ನಿಂದ ಗುಣಮುಖರಾಗಿದ್ದಾರೆ’ ಎಂದು ಕೇಂದ್ರ ಸರ್ಕಾರವು ಭಾನುವಾರ ಹೇಳಿದೆ.

‘ದೇಶದಲ್ಲಿ ಇದುವರೆಗೂ 37.02 ಲಕ್ಷ ಮಂದಿ ಕೋವಿಡ್‌ನಿಂದ ಚೇತರಿಸಿಕೊಂಡಿದ್ದಾರೆ. ಇದರಲ್ಲಿ ಈ ಐದು ರಾಜ್ಯಗಳ ಪಾಲು ಶೇಕಡ 58ರಷ್ಟಿದೆ. ದೇಶದಲ್ಲಿ ಒಟ್ಟು 9.73 ಲಕ್ಷ ಸಕ್ರಿಯ ಪ್ರಕರಣಗಳಿದ್ದು, ಈ ಪೈಕಿ ಈ ಐದು ರಾಜ್ಯಗಳ ಪಾಲು ಶೇಕಡ 60ರಷ್ಟು’ ಎಂದೂ ತಿಳಿಸಿದೆ.

ದೇಶದಲ್ಲಿ ಕೋವಿಡ್‌ ರೋಗದಿಂದ ಗುಣಮುಖರಾದವರು ಒಟ್ಟಾರೆ ಪ್ರಮಾಣವು ಶೇಕಡ 77.88ರಷ್ಟಿದೆ.

ADVERTISEMENT

‘ಮಹಾರಾಷ್ಟ್ರದಲ್ಲಿ ಚೇತರಿಕೆ ಪ್ರಮಾಣವು ಶೇ 17.2ರಷ್ಟಿದ್ದು, ಪಟ್ಟಿಯಲ್ಲಿ ಈ ರಾಜ್ಯವು ಮೊದಲ ಸ್ಥಾನದಲ್ಲಿದೆ. ತಮಿಳುನಾಡು (ಶೇ 13.1), ಆಂಧ್ರಪ್ರದೇಶ (ಶೇ 12.2), ಕರ್ನಾಟಕ (ಶೇ 7.9) ಮತ್ತು ಉತ್ತರಪ್ರದೇಶ (ಶೇ 7.8) ನಂತರದ ಸ್ಥಾನಗಳಲ್ಲಿವೆ. ಮಹಾರಾಷ್ಟ್ರದಲ್ಲಿ ಒಂದೇ ದಿನ 13,000ಕ್ಕೂ ಅಧಿಕ ಮಂದಿ ಗುಣಮುಖರಾಗಿದ್ದರೆ, ಆಂಧ್ರಪ್ರದೇಶದಲ್ಲಿ 10,000ಕ್ಕೂ ಹೆಚ್ಚು ಜನ ಚೇತರಿಸಿಕೊಂಡಿದ್ದಾರೆ’ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಸಚಿವಾಲಯ ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ ಭಾನುವಾರ ಬೆಳಿಗ್ಗೆ 8ಗಂಟೆವರೆಗಿನ ಹಿಂದಿನ 24 ತಾಸುಗಳಲ್ಲಿ ದೇಶದಲ್ಲಿ ಒಟ್ಟು 78,399 ಮಂದಿ ಕೋವಿಡ್‌ನಿಂದ ಗುಣಮುಖರಾಗಿದ್ದಾರೆ. ಇದೇ ಅವಧಿಯಲ್ಲಿ 94,372 ಮಂದಿಯಲ್ಲಿ ಹೊಸದಾಗಿ ಕೊರೊನಾ ಸೋಂಕು ದೃಢಪಟ್ಟಿದ್ದು, 1,114 ಜನ ಮೃತರಾಗಿದ್ದಾರೆ. ಈ ಪೈಕಿ ಮಹಾರಾಷ್ಟ್ರದಲ್ಲೇ 22,000ಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗಿವೆ.

‘ಸಕ್ರಿಯ ಪ್ರಕರಣಗಳ ಪಟ್ಟಿಯಲ್ಲಿ ಮಹಾರಾಷ್ಟ್ರ (ಶೇ 28.79) ಅಗ್ರಸ್ಥಾನದಲ್ಲಿದ್ದರೆ, ಕರ್ನಾಟಕ (ಶೇ 10.05), ಆಂಧ್ರಪ್ರದೇಶ (ಶೇ 9.84), ಉತ್ತರಪ್ರದೇಶ (ಶೇ 6.98) ಹಾಗೂ ತಮಿಳುನಾಡು (ಶೇ 4.84) ನಂತರದ ಸ್ಥಾನಗಳನ್ನು ಹೊಂದಿವೆ’ ಎಂದೂ ಸಚಿವಾಲಯ ಮಾಹಿತಿ ನೀಡಿದೆ.

ಭಾರತದಲ್ಲಿ ಒಟ್ಟು ಕೋವಿಡ್‌ ಪೀಡಿತರ ಸಂಖ್ಯೆಯು 47.54 ಲಕ್ಷದ ಗಡಿ ದಾಟಿದೆ. ಮೃತರ ಸಂಖ್ಯೆಯು 78,586ಕ್ಕೆ ಏರಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.