ADVERTISEMENT

ದೇಶದಾದ್ಯಂತ 1324 ಹೊಸ ಕೊರೊನಾ ಪ್ರಕರಣ, 31 ಸಾವು: ಆರೋಗ್ಯ ಸಚಿವಾಲಯ

ಏಜೆನ್ಸೀಸ್
Published 19 ಏಪ್ರಿಲ್ 2020, 14:35 IST
Last Updated 19 ಏಪ್ರಿಲ್ 2020, 14:35 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ದೇಶದಾದ್ಯಂತ ಕಳೆದ 24 ಗಂಟೆಗಳಲ್ಲಿ 1,324 ಹೊಸ ಕೊರೊನಾ ಪ್ರಕರಣಗಳು ದೃಢಪಟ್ಟಿದೆ. 31 ಮಂದಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಭಾನುವಾರ ಸಂಜೆ ತಿಳಿಸಿದೆ.

ಇದರೊಂದಿಗೆ ದೇಶದಲ್ಲಿ ಸೋಂಕಿತರ ಸಂಖ್ಯೆ 16,116ಕ್ಕೆ ಏರಿಕೆಯಾಗಿದೆ. ಈವರೆಗೆ ಒಟ್ಟು 519 ಜನ ಮೃತಪಟ್ಟಿದ್ದು, 2,302 ಮಂದಿ ಚೇತರಿಸಿಕೊಂಡಿದ್ದಾರೆ.

ಗೋವಾದಲ್ಲಿ ಎಲ್ಲ 7 ಮಂದಿ ಗುಣಮುಖ: ಗೋವಾದಲ್ಲಿ ಕೊರೊನಾ ಸೋಂಕು ತಗುಲಿದ್ದ ಎಲ್ಲ ಏಳು ಮಂದಿಯೂ ಚೇತರಿಸಿಕೊಂಡಿದ್ದು, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಅಲ್ಲಿನ ಆರೋಗ್ಯ ಸಚಿವ ವಿಶ್ವಜಿತ್ ರಾಣೆ ತಿಳಿಸಿದ್ದಾರೆ.

ADVERTISEMENT

ಕೇರಳದಲ್ಲಿ ಎರಡು ಹೊಸ ಪ್ರಕರಣಗಳು ಭಾನುವಾರ ದೃಢಪಟ್ಟಿವೆ. ಈ ಪೈಕಿ ಒಂದು ಕಣ್ಣೂರು ಮತ್ತು ಇನ್ನೊಂದು ಕಾಸರಗೋಡು ಜಿಲ್ಲೆಯಲ್ಲಿ ಪತ್ತೆಯಾಗಿದೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 402ಕ್ಕೆ ಏರಿಕೆಯಾಗಿದೆ. ಈ ಮಧ್ಯೆ, ಹಾಟ್‌ಸ್ಪಾಟ್ ಅಲ್ಲದ ಪ್ರದೇಶಗಳಲ್ಲಿ ಏಪ್ರಿಲ್ 20ರಿಂದ ಲಾಕ್‌ಡೌನ್ ಸಡಿಲಿಸಲು ಕೇರಳ ಸರ್ಕಾರ ಮುಂದಾಗಿದೆ.

ಗುಜರಾತ್‌ನಲ್ಲಿ ಐದು ಸಾವು: ಗುಜರಾತ್‌ನಲ್ಲಿ ಭಾನುವಾರ 5 ಮಂದಿ ಕೊರೊನಾದಿಂದ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಇದರಲ್ಲಿ ನಾಲ್ಕು ಪ್ರಕರಣ ಅಹಮದಾಬಾದ್‌ನಲ್ಲಿ ಹಾಗೂ ಒಂದು ಪ್ರಕರಣ ಸೂರತ್‌ನಲ್ಲಿ ವರದಿಯಾಗಿದೆ. ಇದರಿಂದಾಗಿ ರಾಜ್ಯದಲ್ಲಿ ಈವರೆಗೆ ಮೃತರ ಸಂಖ್ಯೆ 58ಕ್ಕೆ ತಲುಪಿದೆ. ಅಲ್ಲದೆ ಹೊಸದಾಗಿ 228 ಪ್ರಕರಣಗಳಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, ಒಟ್ಟು ಸಂಖ್ಯೆ 1,604ಕ್ಕೆ ಏರಿಕೆಯಾಗಿದೆ.

ಕರ್ನಾಟಕದಲ್ಲಿ 6 ಹೊಸ ಪ್ರಕರಣಗಳು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 390ಕ್ಕೆ ಏರಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.