ADVERTISEMENT

ಕೇರಳದಲ್ಲಿ ಕೊರೊನಾ ವೈರಸ್ ಅಟ್ಟಹಾಸ: ಮುಖ್ಯಮಂತ್ರಿಯಿಂದ 'ರಾಜ್ಯ ವಿಪತ್ತು' ಘೋಷಣೆ

ಕೇರಳದಲ್ಲಿ 3ನೇ ಪ್ರಕರಣ

ಪಿಟಿಐ
Published 3 ಫೆಬ್ರುವರಿ 2020, 18:24 IST
Last Updated 3 ಫೆಬ್ರುವರಿ 2020, 18:24 IST
ಕೇರಳದಲ್ಲಿ ಕೊರೊನಾ ವೈರಸ್ ಅಟ್ಟಹಾಸ, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ರಿಂದ ರಾಜ್ಯ ವಿಪತ್ತು ಘೋಷಣೆ
ಕೇರಳದಲ್ಲಿ ಕೊರೊನಾ ವೈರಸ್ ಅಟ್ಟಹಾಸ, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ರಿಂದ ರಾಜ್ಯ ವಿಪತ್ತು ಘೋಷಣೆ   

ನವದೆಹಲಿ/ತಿರುವನಂತಪುರ: ಕೇರಳದಲ್ಲಿ ಕೊರೊನಾ ವೈರಸ್‌ನ ಮೂರು ಪ್ರಕರಣಗಳು ದೃಢಪಟ್ಟಿದ್ದು, ಇದು ‘ರಾಜ್ಯ ವಿಪತ್ತು’ ಎಂದು ಅಲ್ಲಿನ ಸರ್ಕಾರ ಘೋಷಿಸಿದೆ.

‘ಜನರನ್ನು ಭೀತಿಗೆ ತಳ್ಳುವುದು ಈ ಘೋಷಣೆಯ ಉದ್ದೇಶವಲ್ಲ. ವೈರಸ್ ಹಬ್ಬುವುದನ್ನು ತಡೆಯುವ ನಿಟ್ಟಿನಲ್ಲಿ ಜನರು ಹೆಚ್ಚಿನ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಎಚ್ಚರಿಸುವುದು ಸರ್ಕಾರದ ಉದ್ದೇಶ’ ಎಂದು ಕೇರಳದ ಆರೋಗ್ಯ ಸಚಿವರು ತಿಳಿಸಿದ್ದಾರೆ.

ಈಚೆಗಷ್ಟೆ ಚೀನಾದಿಂದ ಉತ್ತರ ಕೇರಳದ ಕಾಸರಗೋಡಿಗೆ ಮರಳಿರುವ ವಿದ್ಯಾರ್ಥಿಯಲ್ಲಿ ಕೊರೊನಾ ವೈರಸ್ ಸೋಂಕು ತಗುಲಿರುವ ವರದಿಯಾಗಿದೆ. ಇದು ದೇಶದಲ್ಲಿ ವರದಿಯಾದ ಮೂರನೇ ಕೊರೊನಾ ಪ್ರಕರಣ.

ADVERTISEMENT

ಈ ಬೆಳವಣಿಗೆ ನಡುವೆಯೇ ಕೊರೊನಾ ವೈರಸ್ ಹರಡುತ್ತಿರುವ ಕುರಿತು ನಿಗಾವಹಿಸುವ ಸಲುವಾಗಿ ಕಾರ್ಯಪಡೆ ರಚಿಸಲಾಗಿದೆ ಎಂದು ಕೇಂದ್ರ ಗೃಹಖಾತೆ ರಾಜ್ಯ ಸಚಿವ ಜಿ.ಕಿಶನ್ ರೆಡ್ಡಿ ಸೋಮವಾರ ತಿಳಿಸಿ ದ್ದಾರೆ.

ಆರೋಗ್ಯ, ಗೃಹ, ನಾಗರಿಕ ವಿಮಾನ ಯಾನ, ಮಹಿಳೆ ಮತ್ತು ಮಕ್ಕಳ ಕಲ್ಯಾಣಾಭಿವೃದ್ಧಿ ಇಲಾಖೆಗಳ ಪ್ರತಿನಿಧಿಗಳು ಈ ಕಾರ್ಯಪಡೆಯಲ್ಲಿದ್ದಾರೆ.

‘ಚೀನಾದಿಂದ ಭಾರತಕ್ಕೆ ಮರಳಲು ಬಯಸುವವರು, ಭಾರತೀಯ ರಾಯಭಾರ ಕಚೇರಿಯನ್ನು ಸಂಪರ್ಕಿಸಬೇಕು’ ಎಂದು ಅವರು ಹೇಳಿದ್ದಾರೆ.

ಪ್ರವಾಸಿಗರಿಗೆ ಸಲಹೆ: ಚೀನಾದಹ್ಯುಬೆ ಪ್ರಾಂತದಲ್ಲಿ ಕೊರೊನಾ ವೈರಸ್ ಸೋಂಕು ತೀವ್ರಗೊಂಡಿರುವು
ದರಿಂದಾಗಿ, ಪ್ರವಾಸಿಗರಿಗೆ ಯಾವುದೇ ಕಾರಣಕ್ಕೂ ಚೀನಾಕ್ಕೆ ತೆರಳಬಾರದು ಎಂದು ಕೇರಳದ ಆರೋಗ್ಯ ಸಚಿವಾಲಯವು ಸಲಹೆ ನೀಡಿದೆ.

ಒಂದೇ ಮೂಲದಿಂದ ಸೋಂಕು

ವುಹಾನ್ ಪ್ರಾಂತದಿಂದ ಕೇರಳದ ಕಾಸರಗೋಡಿಗೆ ಹಿಂತಿರುಗಿರುವ ಮತ್ತೊಬ್ಬ ವಿದ್ಯಾರ್ಥಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ಸೋಮವಾರ ದೃಢಪಟ್ಟಿದೆ.

‘ಈ ಮೊದಲು ಸೋಂಕು ದೃಢ ಪಟ್ಟಿದ್ದ ಇಬ್ಬರು ವಿದ್ಯಾರ್ಥಿಗಳು ಹಾಗೂ ಈ ವಿದ್ಯಾರ್ಥಿ ಒಂದೇ ದಿನ ಭಾರತಕ್ಕೆ ವಾಪಸ್ಸಾಗಿದ್ದಾರೆ. ಮೂವರಿಗೂ ಪರಸ್ಪರ ಪರಿಚ ಯವಿದೆ. ಹಾಗಾಗಿ ಎಲ್ಲರಿಗೂ ಒಂದೇ ಮೂಲದಿಂದ ಸೋಂಕು ಬಂದಿರುವ ಸಾಧ್ಯತೆ ಇದೆ’ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.

ಈ ಮೊದಲು ಸೋಂಕು ದೃಢಪಟ್ಟಿದ್ದ ಇಬ್ಬರು ವಿದ್ಯಾರ್ಥಿಗಳು ತ್ರಿಶೂರ್ ಹಾಗೂ ಅಲಪ್ಪುಳದವರಾಗಿದ್ದಾರೆ.

ಪ್ರತ್ಯೇಕ ವಾರ್ಡ್‌ನಲ್ಲಿ ನಿಗಾ: ‘ವಿದ್ಯಾರ್ಥಿಯನ್ನು ಕಾಸರಗೋಡಿನ ಕಾಞಂಗಾಡು ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್‌ನಲ್ಲಿ ಇರಿಸಲಾಗಿದೆ. ಎಲ್ಲಾ ಮೂವರು ಸೋಂಕಿತರ ಸ್ಥಿತಿ ಸ್ಥಿರವಾಗಿದ್ದು, ಯಾವುದೇ ಗಂಭೀರ ಸಮಸ್ಯೆಗಳಿಲ್ಲ’ ಎಂದು ಆರೋಗ್ಯ ಸಚಿವೆ ಕೆ.ಕೆ. ಶೈಲಜಾ ಸೋಮವಾರ ವಿಧಾನಸಭೆಯಲ್ಲಿ ಮಾಹಿತಿ ನೀಡಿದ್ದಾರೆ.

‘ಸೋಂಕು ಹರಡಿರುವ ಪ್ರದೇಶ ಗಳಿಗೆ ಭೇಟಿ ನೀಡಿ ಬಂದಿರುವ ಕೇರಳದ ಒಟ್ಟು 1,999 ಜನರ ಮೇಲೆ ನಿಗಾ ಇರಿಸಲಾಗಿದ್ದು, ಇವರಲ್ಲಿ 75 ಜನರನ್ನು ಆಸ್ಪತ್ರೆಯ ಪ್ರತ್ಯೇಕ ವಾರ್ಡ್‌ಗಳಲ್ಲಿ ಇರಿಸಲಾಗಿದೆ. ಉಳಿದ 1,924 ಜನರನ್ನು ಮನೆಗಳ ಮಟ್ಟದಲ್ಲಿಯೇ ಪ್ರತ್ಯೇಕವಾಗಿ ಇರಿಸ ನಿಗಾ ವಹಿಸಲಾಗುತ್ತಿದೆ. 28 ದಿನಗಳ ಅವಧಿಗೆ ಇವರೆಲ್ಲಾ ಮನೆ ಬಿಟ್ಟು ಹೊರಹೋಗಬಾರದು ಎಂದು ಸೂಚಿಸಲಾಗಿದೆ’ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ಪುಣೆಯ ರಾಷ್ಟ್ರೀಯ ರೋಗ ಸೂಕ್ಷ್ಮಾಣು ಅಧ್ಯಯನ ಸಂಸ್ಥೆಗೆ ರಕ್ತದ ಮಾದರಿ

ಈವರೆಗೆ 44 ಶಂಕಿತರ ರಕ್ತದ ಮಾದರಿಯನ್ನು ಪುಣೆಯ ರಾಷ್ಟ್ರೀಯ ರೋಗ ಸೂಕ್ಷ್ಮಾಣು ಅಧ್ಯಯನ ಸಂಸ್ಥೆಗೆ (ಎನ್‌ಐವಿ) ಕಳುಹಿಸಿದ್ದು, ಅದರಲ್ಲಿ 29 ಮಂದಿಯ ಫಲಿತಾಂಶ ದೊರೆತಿದ್ದು, ಸೋಂಕು ಇಲ್ಲದಿರುವುದು
ದೃಢಪಟ್ಟಿದೆ.

‘ಕೊರೊನಾ ವೈರಸ್ ಕಾಣಿಸಿಕೊಂಡಿರುವ ಪ್ರದೇಶಗಳಿಂದ ಬಂದವರು ಕಡ್ಡಾಯವಾಗಿ 28 ದಿನಗಳ ಕಾಲ ಮನೆಗಳಲ್ಲಿ ಪ್ರತ್ಯೇಕವಾಗಿ ಮಲಗಬೇಕು. ಕೆಮ್ಮುವಾಗ, ಸೀನುವಾಗ ಬಾಯಿಯನ್ನು ಕರವಸ್ತ್ರದಿಂದ ಮುಚ್ಚಿಕೊಳ್ಳಬೇಕು’ ಎಂದು ಇಲಾಖೆ ಸಲಹೆ ಮಾಡಿದೆ.

ಪುಣೆಯ ರಾಷ್ಟ್ರೀಯ ರೋಗ ಸೂಕ್ಷ್ಮಾಣು ಅಧ್ಯಯನ ಸಂಸ್ಥೆಗೆ (ಎನ್‌ಐವಿ) ಕಳುಹಿಸಿದ ರಕ್ತದ ಪರೀಕ್ಷಾ ವರದಿ ಬರುವುದು ತಡವಾಗುತ್ತಿರುವ ಹಿನ್ನೆಲೆಯಲ್ಲಿ ನಗರದಲ್ಲೇ ಪ್ರಯೋಗಾಲಯ ಪ್ರಾರಂಭಿಸಲಾಗಿದೆ. ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ (ಬಿಎಂಸಿಆರ್‌ಐ), ನಿಮ್ಹಾನ್ಸ್‌ ಬಳಿಯಿರುವ ಎನ್‌ಐವಿ ವೈದ್ಯಕೀಯ ಪ್ರಯೋಗಾಲಯದಲ್ಲಿ ರಕ್ತ ಪರೀಕ್ಷೆ ಮಾಡಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.