ADVERTISEMENT

ಮನುಷ್ಯರ ಮೇಲೆ ಸೋಂಕುನಿವಾರಕ ಬಳಕೆ ನಿಷೇಧಕ್ಕೆ ಸುಪ್ರೀಂ ಸೂಚನೆ

ಪಿಟಿಐ
Published 5 ನವೆಂಬರ್ 2020, 14:54 IST
Last Updated 5 ನವೆಂಬರ್ 2020, 14:54 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಕೊರೊನಾ ಸೋಂಕು ನಿರ್ವಹಣೆಗಾಗಿ ಮನುಷ್ಯರ ಮೇಲೆ ಸೋಂಕುನಿವಾರಕ ಮತ್ತು ನೇರಳಾತೀತ ಕಿರಣಗಳ ಬಳಕೆಯನ್ನು ನಿಷೇಧಿಸಲು ನಿರ್ದೇಶನ ನೀಡುವಂತೆ ಸುಪ್ರೀಂ ಕೋರ್ಟ್‌, ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.

ನ್ಯಾಯಮೂರ್ತಿ ಅಶೋಕ್ ಭೂಷಣ್ ಅವರ ನೇತೃತ್ವದ ಪೀಠ, ಈ ವಿಷಯಕ್ಕೆ ಸಂಬಂಧಿಸಿದಂತೆ ತಿಂಗಳೊಳಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ತಿಳಿಸಿದೆ.

ಕೋವಿಡ್‌ ನಿರ್ವಹಣೆಗೆ ಮಾನವರ ಮೇಲೆ ಸೋಂಕು ನಿವಾರಕಗಳನ್ನು ಸಿಂಪಡಿಸುವುದು, ಧೂಮೀಕರಣ ಮಾಡುವುದು, ಸೋಂಕು ನಿವಾರಕ ಸುರಂಗಗಳ ಸ್ಥಾಪನೆ ಹಾಗೂ ಇವುಗಳನ್ನು ಬಳಸುವಂತೆ ಜಾಹೀರಾತು ನೀಡುವುದನ್ನು ತಕ್ಷಣವೇ ನಿಷೇಧಿಸುವಂತೆ ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (ಪಿಐಎಲ್‌) ವಿಚಾರಣೆ ನಡೆಸಿದ ನ್ಯಾಯಪೀಠ, ಕೇಂದ್ರ ಸರ್ಕಾರಕ್ಕೆ ಈ ರೀತಿ ಆದೇಶಿಸಿದೆ.

ADVERTISEMENT

ಈ ಕುರಿತು ಗುರ್ಸಿಮ್ರಾನ್ ಸಿಂಗ್ ನರುಲಾ ಎಂಬುವರು ಸುಪ್ರೀಂ ಕೋರ್ಟ್‌ನಲ್ಲಿ ಪಿಐಎಲ್‌ ಸಲ್ಲಿಸಿದ್ದರು.

‘ರಾಸಾಯನಿಕ ಸೋಂಕುನಿವಾರಕಗಳನ್ನು ಸಿಂಪಡಿಸುವುದು ದೈಹಿಕ ಮತ್ತು ಮಾನಸಿಕವಾಗಿ ಹಾನಿಕಾರಕ ಎಂಬ ನಿಲುವನ್ನು ತೆಗೆದುಕೊಂಡಿದ್ದರೂ, ಸೋಂಕು ನಿವಾರಕ ಸುರಂಗಗಳ ಬಳಕೆಯನ್ನು ಏಕೆ ನಿಷೇಧಿಸಿಲ್ಲ‘ ಎಂದು ಸೆಪ್ಟೆಂಬರ್ 7ರಂದು ಸುಪ್ರೀಂ ಕೋರ್ಟ್ ಕೇಂದ್ರವನ್ನು ಕೇಳಿತ್ತು.

ಇದಕ್ಕೆ ಪ್ರತಿಕ್ರಿಯಿಸಿದ್ದ, ಕೇಂದ್ರ ಸರ್ಕಾರದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ‘ಕೋವಿಡ್‌ 19 ಸೋಂಕು ನಿರ್ವಹಣೆಗೆ ನೇರಳಾತೀತ ಕಿರಣಗಳನ್ನು ಬಳಸುವ ಕುರಿತು ಕೇಂದ್ರ ಆರೋಗ್ಯ ಸಚಿವಾಲಯ ಯಾವ ಸಲಹೆ, ಮಾರ್ಗಸೂಚಿಯನ್ನೂ ನೀಡಿಲ್ಲ‘ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.