ADVERTISEMENT

ಕೊರೊನಾ ಕಾಟ: ದೇಶದೆಲ್ಲೆಡೆ ಒಂದೇ ದಿನ 450 ಹೊಸ ಪ್ರಕರಣ

ತಬ್ಲೀಗ್‌ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ್ದ ಮತ್ತು ಅವರ ಸಂಪರ್ಕದಲ್ಲಿ ಇದ್ದವರಿಗಾಗಿ ಶೋಧ

ಪಿಟಿಐ
Published 1 ಏಪ್ರಿಲ್ 2020, 21:08 IST
Last Updated 1 ಏಪ್ರಿಲ್ 2020, 21:08 IST
ದೆಹಲಿಯ ನಿಜಾಮುದ್ದೀನ್‌ ಪ್ರದೇಶದಲ್ಲಿರುವ ತಬ್ಲೀಗ್‌ ಜಮಾತ್‌ ಕೇಂದ್ರ ಕಚೇರಿ ಆವರಣದಲ್ಲಿ ಆರೋಗ್ಯ ಕಾರ್ಯಕರ್ತರು ಬುಧವಾರ ರೋಗ ನಿರೋಧಕವನ್ನು ಸಿಂಪಡಿಸಿದರು –ಪಿಟಿಐ ಚಿತ್ರ
ದೆಹಲಿಯ ನಿಜಾಮುದ್ದೀನ್‌ ಪ್ರದೇಶದಲ್ಲಿರುವ ತಬ್ಲೀಗ್‌ ಜಮಾತ್‌ ಕೇಂದ್ರ ಕಚೇರಿ ಆವರಣದಲ್ಲಿ ಆರೋಗ್ಯ ಕಾರ್ಯಕರ್ತರು ಬುಧವಾರ ರೋಗ ನಿರೋಧಕವನ್ನು ಸಿಂಪಡಿಸಿದರು –ಪಿಟಿಐ ಚಿತ್ರ   
""

ನವದೆಹಲಿ:ದೆಹಲಿಯ ನಿಜಾಮುದ್ದೀನ್‌ ಪ್ರದೇಶವು ಕೊರೊನಾ ವೈರಸ್‌ ಹರಡುವಿಕೆಗೆ ಸಂಬಂಧಿಸಿ ಅತಿಸೂಕ್ಷ್ಮ ಪ್ರದೇಶವಾಗಿ ಪರಿವರ್ತನೆಯಾಗಿದೆ. ಇಲ್ಲಿನ ತಬ್ಲೀಗ್‌ ಜಮಾತ್‌ನ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ್ದ 6 ಸಾವಿರಕ್ಕೂ ಹೆಚ್ಚು ಜನರನ್ನು ವಿವಿಧ ರಾಜ್ಯಗಳಲ್ಲಿ ಗುರುತಿಸಲಾಗಿದೆ.ಬುಧವಾರ ದೇಶದಲ್ಲಿ 450 ಹೊಸ ಪ‍್ರಕರಣಗಳು ಪತ್ತೆಯಾಗಿವೆ. ವಿವಿಧ ರಾಜ್ಯಗಳು ವರದಿ ಮಾಡಿರುವಂತೆ ಸೋಂಕಿತರ ಸಂಖ್ಯೆ 1,949ಕ್ಕೆ ಏರಿಕೆಯಾಗಿದೆ. ಸಾವಿನ ಸಂಖ್ಯೆ 59.

ತಬ್ಲೀಗ್‌ ಜಮಾತ್‌ನ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ್ದ ಹಲವರಿಗೆ ಸೋಂಕು ತಗಲಿರುವುದು ಮತ್ತು ಅವರಿಂದಾಗಿ ಇತರರಿಗೆ ಹರಡಿರುವುದು ಸೋಂಕಿತರ ಸಂಖ್ಯೆ ಏರಿಕೆಯಾಗಲು ಕಾರಣ ಎನ್ನಲಾಗಿದೆ.

ಕಾಶ್ಮೀರದಿಂದ ತಮಿಳುನಾಡಿನವರೆಗಿನ ಹಲವು ವ್ಯಕ್ತಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇವರಲ್ಲಿ ನೂರಾರು ಮಂದಿ ತಮ್ಮ ಊರುಗಳಿಗೆ ಮರಳಿದ್ದಾರೆ. ಹಾಗಾಗಿ, ಅವರು ಮತ್ತು ಅವರ ಜತೆ ಸಂಪರ್ಕದಲ್ಲಿದ್ದವರನ್ನು ಗುರುತಿಸುವ ಸವಾಲು ಎದುರಾಗಿದೆ.

ADVERTISEMENT

ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ್ದ ಜನರು ಮತ್ತು ಅವರ ಸಂಪರ್ಕದಲ್ಲಿ ಇರುವವರನ್ನು ಪತ್ತೆ ಮಾಡಲು ಯುದ್ಧೋಪಾದಿಯಲ್ಲಿ ಕೆಲಸ ಮಾಡಬೇಕು ಎಂದು ರಾಜ್ಯಗಳಿಗೆ ಕೇಂದ್ರ ಸರ್ಕಾರವು ಬುಧವಾರ ಸೂಚಿಸಿದೆ. ಇವರನ್ನು ಪತ್ತೆ ಮಾಡುವುದು ವಿಳಂಬವಾದಷ್ಟು ಸೋಂಕು ಹರಡುವಿಕೆ ಇನ್ನಷ್ಟು ಹೆಚ್ಚಳವಾಗುವ ಅಪಾಯ ಇದೆ.

ಕೇಂದ್ರ ಸಂಪುಟ ಕಾರ್ಯದರ್ಶಿ ರಾಜೀವ್‌ ಗೌಬಾ ಅವರು ಮುಖ್ಯ ಕಾರ್ಯದರ್ಶಿಗಳು ಮತ್ತು ಡಿಜಿಪಿಗಳ ಜತೆ ವಿಡಿಯೊ ಕಾನ್ಫರೆನ್ಸ್‌ ಮೂಲಕ ಸಮಾಲೋಚಿಸಿ ನಿರ್ದೇಶಿಸಿದ್ದಾರೆ.

ಸಭೆಯಲ್ಲಿ ಭಾಗವಹಿಸಿದ್ದ ವಿದೇಶಿಯರು ಧರ್ಮಪ್ರಚಾರದ ಕೆಲಸದಲ್ಲಿ ಭಾಗಿಯಾಗಿದ್ದರೆ ಅಂತಹವರ ವಿರುದ್ಧ ವೀಸಾ ನಿಯಮ ಉಲ್ಲಂಘನೆಯ ಪ್ರಕರಣ ದಾಖಲಿಸಲು ತಿಳಿಸಿದ್ದಾರೆ.

ತಬ್ಲೀಗ್‌ ಜಮಾತ್‌ ಕೇಂದ್ರ ಕಚೇರಿಯಲ್ಲಿ ತಂಗಿದ್ದ ಎಲ್ಲ 2,361 ಮಂದಿಯನ್ನು ಅಲ್ಲಿಂದ ತೆರವು ಮಾಡಲಾಗಿದೆ. 617 ಜನರನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು ಉಳಿದವರನ್ನು ಕ್ವಾರಂಟೈನ್‌ ಮಾಡಲಾಗಿದೆ ಎಂದು ದೆಹಲಿಯ ಉಪಮುಖ್ಯಮಂತ್ರಿ ಮನೀಷ್‌ ಸಿಸೋಡಿಯಾ ತಿಳಿಸಿದ್ದಾರೆ.

ದೆಹಲಿಯಲ್ಲಿ ಬುಧವಾರ 23 ಹೊಸ ಪ್ರಕರಣಗಳು ವರದಿಯಾಗಿವೆ. ಒಟ್ಟು ಪ್ರಕರಣಗಳು 120ಕ್ಕೆ ಏರಿವೆ. ಇವರಲ್ಲಿ 24 ಮಂದಿ ಸಭೆಯಲ್ಲಿ ಭಾಗಿಯಾಗಿದ್ದವರು ಎಂದು ಹೇಳಲಾಗಿದೆ.

ಸಭೆಗೆ ಹಾಜರಾಗಿದ್ದ ತಮಿಳುನಾಡಿನ 500 ಮಂದಿ ಆರೋಗ್ಯ ಅಧಿಕಾರಿಗಳ ಮುಂದೆ ಹಾಜರಾಗಿದ್ದಾರೆ. ಇಲ್ಲಿಂದ ಸುಮಾರು 1,103 ಮಂದಿ ಕಾರ್ಯಕ್ರಮಕ್ಕೆ ಹೋಗಿದ್ದಾರೆ. ಮಹಾರಾಷ್ಟ್ರದ 700 ಮಂದಿಯ ಪೈಕಿ 200 ಮಂದಿಯನ್ನು ಗುರುತಿಸಲಾಗಿದೆ. ಕೇರಳದಲ್ಲಿ 60 ಮಂದಿಯ ಮೇಲೆ ನಿಗಾ ಇರಿಸಲಾಗಿದೆ. ಇಲ್ಲಿಂದ 310 ಮಂದಿ ಸಭೆಗೆ ಹೋಗಿರಬಹುದು ಎನ್ನಲಾಗಿದೆ.

*ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜತೆಗೆ ಗುರುವಾರ ವಿಡಿಯೊ ಕಾನ್ಫರೆನ್ಸ್‌ ನಡೆಸಲಿದ್ದಾರೆ.

*ಕೊರೊನಾ ವೈರಸ್‌ ಹರಡುವಿಕೆ ವಿರುದ್ಧದ ಹೋರಾಟದಲ್ಲಿ ಸಶಸ್ತ್ರ ಪಡೆಗಳು ಸಕ್ರಿಯವಾಗಿ ಭಾಗಿಯಾಗಿವೆ. ಆಸ್ಪತ್ರೆಗಳಲ್ಲಿ 9 ಸಾವಿರಕ್ಕೂ ಹೆಚ್ಚು ಹಾಸಿಗೆಗಳು, 8,500ಕ್ಕೂ ಹೆಚ್ಚು ವೈದ್ಯರು ಮತ್ತು ಬೆಂಬಲ ಸಿಬ್ಬಂದಿಯನ್ನು ಒದಗಿಸಿವೆ

*ಪ್ರಧಾನ ಮಂತ್ರಿ ಗರೀಬ್‌ ಕಲ್ಯಾಣ ಯೋಜನೆಯನ್ನು ಮುಂದಿನ ವಾರದೊಳಗೆ ಜಾರಿಗೆ ತರಬೇಕು ಎಂದು ರಾಜ್ಯಗಳಿಗೆ ಸೂಚಿಸಲಾಗಿದೆ. ₹27,500 ಕೋಟಿ ಮೊತ್ತವನ್ನು ಅರ್ಹ ಫಲಾನುಭವಿಗಳಿಗೆ ಬ್ಯಾಂಕುಗಳ ಮೂಲಕ ನೀಡುವುದು ಈ ಯೋಜನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.