ಮುಂಬೈ: ದೇಶದಲ್ಲಿ 1400 ಕೋವಿಡ್ ಆಸ್ಪತ್ರೆಗಳನ್ನು ತೆರೆಯಲಾಗಿದ್ದು 50 ಸಾವಿರ ವೆಂಟಿಲೇಟರ್‌ಗಳು ಆಸ್ಪತ್ರೆಗಳಲ್ಲಿ ಇವೆ ಎಂದು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ತಿಳಿಸಿದ್ದಾರೆ.
ಈ ಸಂಬಂಧ ಅವರು ಭಾನುವಾರ ಟ್ವೀಟ್ ಮಾಡಿದ್ದಾರೆ.
ಭಾನುವಾರ ಇಲ್ಲಿನ ಧಾರವಿ ಕೊಳಗೇರಿಯಲ್ಲಿ ಕೇವಲ 5 ಪ್ರಕರಣಗಳು ವರದಿಯಾಗಿದ್ದು ಸೋಂಕು ಇಳಿಮುಖವಾಗುತ್ತಿದೆ ಎಂದು ಮುಂಬೈನ ಪಾಲಿಕೆ ಅಧಿಕಾರಿಗಳು ಹೇಳಿದ್ದಾರೆ. ಧಾರವಿ ಕೊಳಗೇರಿಯಲ್ಲಿ ಒಟ್ಟು 2617 ಪ್ರಕರಣಗಳು ದಾಖಲಾಗಿವೆ. ಕೇವಲ 88 ಪ್ರಕರಣಗಳು ಸಕ್ರಿಯವಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉಳಿದಂತೆ ಭಾನುವಾರ ಸಂಜೆಯವರೆಗೂ ಕರ್ನಾಟಕದಲ್ಲಿ 5700, ತಮಿಳುನಾಡಿನಲ್ಲಿ 5900, ಜಮ್ಮು ಕಾಶ್ಮೀರದಲ್ಲಿ 507, ಆಂಧ್ರ ಪ್ರದೇಶದಲ್ಲಿ 10 ಸಾವಿರ ಪ್ರಕರಣಗಳು, ಮಹಾರಾಷ್ಟ್ರದಲ್ಲಿ 12 ಸಾವಿರ ಪ್ರಕರಣಗಳು ವರದಿಯಾಗಿವೆ. ರಾಜ್ಯದ ಆರೋಗ್ಯ ಸಚಿವ ಶ್ರೀರಾಮುಲ ಹಾಗೂ ಮಧ್ಯಪ್ರದೇಶದ ಸಚಿವರೊಬ್ಬರಿಗೆ ಕೋವಿಡ್–19 ದೃಢಪಟ್ಟಿದೆ.
ದೇಶದಲ್ಲಿ 24 ಗಂಟೆ ಅವಧಿಯಲ್ಲಿ 64,399 ಹೊಸ ಕೊರೊನಾ ಪ್ರಕರಣಗಳು ದೃಢಪಟ್ಟಿವೆ.
ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 21,53,011ಕ್ಕೆ ಏರಿಕೆಯಾಗಿದೆ. ಈ ಪೈಕಿ 14,80,885 ಮಂದಿ ಗುಣಮುಖರಾಗಿದ್ದಾರೆ. ಈವರೆಗೆ 43,379 ಸಾವು ಸಂಭವಿಸಿದ್ದು, 6,28,747 ಸಕ್ರಿಯ ಪ್ರಕರಣಗಳಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.
ಅತಿ ಹೆಚ್ಚು ಪ್ರಕರಣಗಳನ್ನು ಹೊಂದಿರುವ ಮಹಾರಾಷ್ಟ್ರದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 5,15,332 ತಲುಪಿದ್ದು, ಸದ್ಯ 1,51,355 ಸಕ್ರಿಯ ಪ್ರಕರಣಗಳಿವೆ. ತಮಿಳುನಾಡಿನಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2,96,9018ಕ್ಕೆ ಏರಿಕೆಯಾಗಿದ್ದು, 53,336 ಸಕ್ರಿಯ ಪ್ರಕರಣಗಳಿವೆ.
ದೆಹಲಿಯಲ್ಲಿ ಈವರೆಗೆ 1,45,427 ಜನರಿಗೆ ಸೋಂಕು ತಗುಲಿದ್ದು, ಸದ್ಯ 10,729 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.